ಸಲ್ಮಾನ್ ಖಾನ್ ಹೊಸ ಸಿನಿಮಾಗೆ ಸಂಕಷ್ಟ: ಕಥೆ ಬದಲಾದರೂ ತಪ್ಪದ ‘ಮಾತೃಭೂಮಿ’ ವಿವಾದ

ಸಲ್ಮಾನ್ ಖಾನ್ ಅವರ ಹೊಸ ಸಿನಿಮಾ ‘ಮಾತೃಭೂಮಿ’ ಒಂದಲ್ಲಾ ಒಂದು ಕಾರಣದಿಂದ ವಿಘ್ನಗಳನ್ನು ಎದುರಿಸುತ್ತಿದೆ. ಏಪ್ರಿಲ್‌ನಲ್ಲಿ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಜೂನ್‌ಗೆ ಮುಂದೂಡಲ್ಪಟ್ಟಿತ್ತು. ಆದರೆ ಈಗಿನ ಬೆಳವಣಿಗೆಗಳನ್ನು ನೋಡಿದರೆ ಸಲ್ಮಾನ್ ಖಾನ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಇನ್ನೂ ಹೆಚ್ಚಿನ ಕಾಲ ಕಾಯುವುದು ಅನಿವಾರ್ಯವಾಗಿದೆ.

ಸಲ್ಮಾನ್ ಖಾನ್ ಹೊಸ ಸಿನಿಮಾಗೆ ಸಂಕಷ್ಟ: ಕಥೆ ಬದಲಾದರೂ ತಪ್ಪದ ‘ಮಾತೃಭೂಮಿ’ ವಿವಾದ
Salman Khan

Updated on: Apr 15, 2026 | 4:18 PM

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅಭಿನಯದ ಬಹುನಿರೀಕ್ಷಿತ ‘ಮಾತೃಭೂಮಿ’ ಸಿನಿಮಾದ ಬಿಡುಗಡೆಗೆ ಈಗ ದೊಡ್ಡ ಅಡೆತಡೆ ಎದುರಾಗಿದೆ. ಚಿತ್ರದ ಕಥೆ ಮತ್ತು ಶೀರ್ಷಿಕೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ ಹೊರತಾಗಿಯೂ, ಈ ವಾರ್ ಡ್ರಾಮಾ ಸದ್ಯಕ್ಕೆ ತೆರೆಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ‘ಮಾತೃಭೂಮಿ’ (Maatrubhumi) ಚಿತ್ರವು ಪ್ರಮಾಣಪತ್ರಕ್ಕಾಗಿ ಇನ್ನೂ ಸೆನ್ಸಾರ್ ಮಂಡಳಿಗೆ ಸಲ್ಲಿಕೆಯಾಗಿಲ್ಲ. ಚಿತ್ರವನ್ನು ಬಿಡುಗಡೆ ಮಾಡುವ ಮೊದಲು ಅನುಸರಿಸಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳ ಬಗ್ಗೆ ಚಿತ್ರತಂಡ ಈಗ ಚರ್ಚೆ ನಡೆಸುತ್ತಿದೆ.

‘ಈ ಹಂತದಲ್ಲಿ ಅಡೆತಡೆ ಇಲ್ಲದೇ ಚಿತ್ರದ ರಿಲೀಸ್‌ಗಾಗಿ ಮುಂದಿನ ದಾರಿ ಏನು ಎಂಬುದನ್ನು ತಂಡವು ಪರಿಶೀಲಿಸುತ್ತಿದೆ. ರಕ್ಷಣಾ ಸಚಿವಾಲಯ, ಭಾರತೀಯ ಸೇನೆ ಅಥವಾ ಸಿಬಿಎಫ್‌ಸಿ ಇವುಗಳಲ್ಲಿ ಯಾವುದೇ ವಿಭಾಗದ ಅಧಿಕಾರಿಗಳು ಈವರೆಗೆ ಸಿನಿಮಾವನ್ನು ನೋಡಿಲ್ಲ’ ಎಂದು ಮೂಲಗಳು ತಿಳಿಸಿರುವುದಾಗಿ ‘ಮಿಡ್ ಡೇ’ ವರದಿ ಮಾಡಿದೆ.

2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಹಿನ್ನೆಲೆಯಲ್ಲಿ ಚಿತ್ರವನ್ನು ಈ ಮೊದಲು ರೂಪಿಸಲಾಗಿತ್ತು. ಆದರೆ 2025ರ ಡಿಸೆಂಬರ್‌ನಲ್ಲಿ ಟೀಸರ್ ಬಿಡುಗಡೆಯಾದಾಗ ಚೀನಾದ ಕೆಂಗಣ್ಣಿಗೆ ಗುರಿಯಾಗಿತ್ತು. ಚಿತ್ರವು ಸತ್ಯವನ್ನು ತಿರುಚುತ್ತಿದೆ ಎಂಬ ಆರೋಪ ಎದುರಾಯಿತು. ಆದ್ದರಿಂದ ಕೆಲವು ಅಂಶಗಳನ್ನು ಬದಲಿಸುವುದು ಅನಿವಾರ್ಯ ಆಯಿತು.

ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ, ಚಿತ್ರದಿಂದ ಚೀನಾ ಮತ್ತು ಗಲ್ವಾನ್ ಸಂಘರ್ಷದ ನೇರ ಉಲ್ಲೇಖಗಳನ್ನು ತೆಗೆದುಹಾಕುವಂತೆ ಭಾರತೀಯ ಅಧಿಕಾರಿಗಳು ಫೆಬ್ರವರಿಯಲ್ಲಿ ಚಿತ್ರತಂಡಕ್ಕೆ ಮೌಖಿಕ ಸಲಹೆ ನೀಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಚಿತ್ರದ ಶೀರ್ಷಿಕೆಯನ್ನು ‘ಮಾತೃಭೂಮಿ’ ಎಂದು ಬದಲಿಸಲಾಯಿತು.

ಇದನ್ನೂ ಓದಿ: ಸಲ್ಮಾನ್ ಖಾನ್​​ಗೆ ಇಷ್ಟ ಆಯ್ತು ಸಾನ್ವಿ ಸುದೀಪ್ ಕಂಠ; ಮೆಚ್ಚುಗೆ ಸೂಚಿಸಿದ ನಟ

ನಿರ್ದೇಶಕ ಅಪೂರ್ವ ಲಾಖಿಯಾ ಅವರು ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಆದರೆ ಚಿತ್ರವನ್ನು ಮೊದಲಿನಿಂದ ಹೊಸದಾಗಿ ಚಿತ್ರೀಕರಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮುಂಬೈನಲ್ಲಿ ನಡೆದ ಚಿತ್ರೀಕರಣದ ವೇಳೆ ಪೋಷಕ ಪಾತ್ರಗಳ ಕುಟುಂಬ ಮತ್ತು ಪ್ರೇಮ ಕಥೆಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಇಷ್ಟೆಲ್ಲ ಬದಲಾವಣೆ ಮಾಡಿದ ನಂತರ ಸಿನಿಮಾದ ಮೂಲ ಅಂಶವೇ ಇಲ್ಲದಂತಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us