
ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಬಿಗ್ ಬಜೆಟ್ ಎಂಬ ಕಾರಣಕ್ಕೆ ಚರ್ಚೆಯಲ್ಲಿದೆ. ಈ ಸಿನಿಮಾಗೆ ಎರಡು ಪಾರ್ಟ್ಗಳಿಂದ ಸುಮಾರು 4,000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರ ಹೇಳಿದ್ದರು. ಈ ವಿಷಯವನ್ನು ಕೆಲವರು ಟೀಕೆ ಮಾಡಿದ್ದರು. ಈ ವಿಷಯದ ಬಗ್ಗೆ ನಟ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ಬಜೆಟ್ ಕುರಿತ ಚರ್ಚೆಗಳ ಬಗ್ಗೆ ಅವರು ಅಸಮಧಾನ ಹೊರಹಾಕಿದ್ದಾರೆ. ಸಿನಿಮಾವನ್ನು ಕೇವಲ ಬಜೆಟ್ ಮತ್ತು ವಿಎಫ್‌ಎಕ್ಸ್ ಆಧಾರದ ಮೇಲೆ ಅಳೆಯುವುದು ಸರಿಯಲ್ಲ ಎಂದು ಸಲ್ಮಾನ್ ಹೇಳಿದ್ದಾರೆ.
ತಮ್ಮ ಮುಂಬರುವ ‘ ಮಾತೃಭೂಮಿ’ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಲು, ರಾಮಾಯಣ ಮಹಾಕಾವ್ಯದ ನಿಜವಾದ ಮೌಲ್ಯವನ್ನು ನೆನಪಿಸಿದ್ದಾರೆ. ‘ರಾಮಾಯಣ ಸಿನಿಮಾವನ್ನು ಅದರ ಕಥೆ ಮತ್ತು ಪಾತ್ರಗಳ ಆಧಾರದ ಮೇಲೆ ಚರ್ಚಿಸಬೇಕ ಹೊರತು, ಅದಕ್ಕೆ ತಗುಲಿದ ನಿರ್ಮಾಣ ವೆಚ್ಚ ಅಥವಾ ವಿಎಫ್‌ಎಕ್ಸ್ ಆಧಾರದ ಮೇಲಲ್ಲ. ಈ 4,000 ಕೋಟಿ ಬಜೆಟ್ ಹಾಗೂ ವಿಎಫ್‌ಎಕ್ಸ್ ಸುದ್ದಿ ಮಾಡುವುದು ನನಗೆ ಸರಿಯೆನಿಸುತ್ತಿಲ್ಲ. ಶ್ರೀರಾಮ, ಸೀತೆಯಂತಹ ಪವಿತ್ರ ಪಾತ್ರಗಳ ಹಿನ್ನೆಲೆಯಲ್ಲಿ ಈ ಚಿತ್ರದ ಚರ್ಚೆಯಾಗಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದೇ ವೇಳೆ ಶ್ರೀರಾಮನ ಗುಣಗಳನ್ನು ಸ್ಮರಿಸಿದ ಸಲ್ಮಾನ್ ಖಾನ್, ತಮ್ಮ ‘ಮಾತೃಭೂಮಿ’ ಚಿತ್ರದ ಪಾತ್ರಕ್ಕೂ ಶ್ರೀರಾಮನ ಆದರ್ಶಗಳಿಗೂ ಹೋಲಿಕೆ ಮಾಡಿದ್ದಾರೆ. ‘ಶ್ರೀರಾಮನಲ್ಲಿ ಶ್ರೇಷ್ಠ ಪತಿ, ಶ್ರೇಷ್ಠ ಮಗ, ಶ್ರೇಷ್ಠ ಸಹೋದರ ಹಾಗೂ ಅತ್ಯುತ್ತಮ ಯೋಧನ ಗುಣಗಳಿದ್ದವು. ನನ್ನ ಮುಂಬರುವ ಸಿನಿಮಾದ ಪಾತ್ರದಲ್ಲೂ ಸಹ ಇಂತಹದೇ ಅದ್ಭುತ ಗುಣಗಳನ್ನು ಕಾಣಬಹುದು’ ಎಂದು ಸಲ್ಮಾನ್ ಖಾನ್ ವಿವರಿಸಿದ್ದಾರೆ.
ತಮ್ಮ ಹಳೆಯ ನೆನಪೊಂದನ್ನು ಹಂಚಿಕೊಂಡ ಸಲ್ಲು, ಸುಮಾರು 20 ವರ್ಷಗಳ ಹಿಂದೆ ತಾವು ಮತ್ತು ತಮ್ಮ ಸಹೋದರ ರಾಮಾಯಣ ಆಧರಿತ ಸಿನಿಮಾದಲ್ಲಿ ನಟಿಸಬೇಕಿತ್ತು ಎಂದಿದ್ದಾರೆ. ‘20 ವರ್ಷಗಳ ಹಿಂದೆ ನಾವು ರಾಮಾಯಣ ಸಿನಿಮಾ ಮಾಡಲು ನಿರ್ಧರಿಸಿದ್ದೆವು. ಆದರೆ ಸಿನಿಮಾ ಪ್ರಕಟಿಸಿ ತಡರಾತ್ರಿ ಹೊರಬಂದ ನಮ್ಮ ಫೋಟೋಗಳಿಗೆ ಅಂದಿನ ಮಾಧ್ಯಮಗಳು ತಲೆಗೆ ಕಿರೀಟ ಹಾಕಿ ‘ಇವರೇ ನಮ್ಮ ರಾಮ-ಲಕ್ಷ್ಮಣ’ ಎಂದು ಬರೆದಿದ್ದವು. ಆ ವರದಿಯನ್ನು ನೋಡಿ ನಾವು ಆ ಸಿನಿಮಾವನ್ನೇ ಕೈಬಿಟ್ಟಿದ್ದೆವು’ ಎಂದು ಅವರು ಹಳೆಯ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎರಡೇ ದಿನಕ್ಕೆ 221 ಕೋಟಿ ರೂಪಾಯಿ ಗಳಿಸಿದ ‘ರಾಮಾಯಣ’ ಸಿನಿಮಾ; ಕನ್ನಡದಲ್ಲೆಷ್ಟು?
ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಸಿನಿಮಾ ಆರಂಭದಲ್ಲಿ ನವೆಂಬರ್ 20 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಗ್ರಾಫಿಕ್ಸ್ ಮತ್ತು ವಿಎಫ್‌ಎಕ್ಸ್ ಕೆಲಸಗಳು ಬಾಕಿ ಇರುವ ಕಾರಣ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈಗ ಈ ಬಹುನಿರೀಕ್ಷಿತ ಚಿತ್ರವು ಡಿಸೆಂಬರ್ 4ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:27 am, Sat, 7 November 26