ಸಿನಿಮಾ ಮಾತ್ರವಲ್ಲದೆ, ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೂ ಸಲ್ಮಾನ್ ಖಾನ್ ಅವರು ಆಗಾಗ ಸುದ್ದಿ ಆಗುತ್ತಾರೆ. 55 ವರ್ಷ ಆಗಿದ್ದರೂ ಸಲ್ಲು ಇನ್ನೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ. ಅವರ ಬದುಕಿನಲ್ಲಿ ಬಾಲಿವುಡ್ನ ಅನೇಕ ನಟಿಯರು ಬಂದು ಹೋಗಿದ್ದಾರೆ. ಆದರೆ ಯಾರೂ ಪತ್ನಿಯ ಸ್ಥಾನವನ್ನು ತುಂಬಿಲ್ಲ. ಈ ನಡುವೆ ಸಲ್ಮಾನ್ ಖಾನ್ ಬಗ್ಗೆ ಹೊಸ ಗಾಸಿಪ್ ಕೇಳಿಬಂದಿದೆ. ವಿದೇಶದಲ್ಲಿ ಅವರು ಗುಟ್ಟಾಗಿ ಸಂಸಾರ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಈ ವಿಷಯ ಸ್ವತಃ ಸಲ್ಲು ಕಿವಿಗೂ ಬಿದ್ದಿದೆ. ಅದಕ್ಕೆ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ.
ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಡೆಸಿಕೊಡುವ ‘ಕ್ವಿಕ್ ಹೀಲ್ ಪಿಂಚ್ ಬೈ ಅರ್ಬಾಜ್’ ಕಾರ್ಯಕ್ರಮಕ್ಕೆ ಸಲ್ಲು ಅತಿಥಿಯಾಗಿ ಹೋಗಿದ್ದಾರೆ. ಅಲ್ಲಿ ಅವರಿಗೆ ಸೋಶಿಯಲ್ ಮೀಡಿಯಾ ಕುರಿತಾಗಿ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಅದೇ ರೀತಿ ಕೆಲವು ಟ್ರೋಲ್ಗಳ ಬಗ್ಗೆಯೂ ತಿಳಿಸಲಾಯಿತು. ನೆಟ್ಟಿಗನೊಬ್ಬ ಸಲ್ಲು ಬಗ್ಗೆ ಮನಬಂದಂತೆ ಕಮೆಂಟ್ ಮಾಡಿರುವುದು ಕೂಡ ಆಗಲೇ ಬಯಲಾಯಿತು.
‘ಭಯಪಟ್ಟುಕೊಂಡು ಎಲ್ಲಿ ಅಡಗಿ ಕುಳಿತಿದ್ದೀಯ? ನೂರ್ ಎಂಬ ನಿನ್ನ ಹೆಂಡತಿ ಮತ್ತು 17 ವರ್ಷದ ಮಗಳ ಜೊತೆ ದುಬೈನಲ್ಲಿ ಇದ್ದೀಯ ಎಂಬುದು ಇಡೀ ಭಾರತಕ್ಕೆ ಗೊತ್ತಿದೆ. ಭಾರತದ ಜನರನ್ನು ಇನ್ನೂ ಎಲ್ಲಿಯವರೆಗೆ ಮೂರ್ಖರನ್ನಾಗಿ ಮಾಡುತ್ತೀಯಾ?’ ಎಂದು ಕಮೆಂಟ್ ಮಾಡಲಾಗಿತ್ತು. ಅದನ್ನು ಕಂಡು ಸ್ವತಃ ಸಲ್ಮಾನ್ ಖಾನ್ ಅಚ್ಚರಿಪಟ್ಟಿದ್ದಾರೆ.
‘ಈ ಜನರಿಗೆ ಎಲ್ಲದರ ಬಗ್ಗೆ ಮಾಹಿತಿ ಇದೆ. ಇದೆಲ್ಲ ಅಸಂಬದ್ಧ. ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಇದನ್ನೆಲ್ಲ ಎಲ್ಲಿ ಪೋಸ್ಟ್ ಮಾಡಿದ್ದಾರೆ ಎಂಬುದೂ ನನಗೆ ತಿಳಿದಿಲ್ಲ. ಇದಕ್ಕೆಲ್ಲ ಪ್ರತಿಕ್ರಿಯೆ ನೀಡುವ ಮೂಲಕ ನಾನು ಇಂಥವರಿಗೆ ಮರ್ಯಾದೆ ಕೊಡುತ್ತೇನೆ ಎಂದು ಅವರು ಅಂದುಕೊಂಡಿದ್ದಾರಾ? ನನಗೆ ಹೆಂಡತಿ ಇಲ್ಲ. ಭಾರತದಲ್ಲೇ ಇದ್ದೇನೆ. 9ನೇ ವಯಸ್ಸಿನಿಂದಲೂ ಗೆಲಾಕ್ಸಿ ಅಪಾರ್ಟ್ಮೆಂಟ್ನಲ್ಲಿ ಇದ್ದೇನೆ. ಅದು ಇಡೀ ಭಾರತಕ್ಕೆ ಗೊತ್ತು. ಈ ವ್ಯಕ್ತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ:
32 ವರ್ಷದ ಕೆರಿಯರ್ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್ಗೆ ಸಹಿ ಹಾಕಿದ ಸಲ್ಮಾನ್ ಖಾನ್
ಮೈ ಕಾಣುವಂತೆ ಬಟ್ಟೆ ಧರಿಸಿ ಬಂದಿದ್ದ ಕತ್ರಿನಾ ಕೈಫ್ ಜೊತೆ ಈ ರೀತಿ ನಡೆದುಕೊಂಡಿದ್ರಾ ಸಲ್ಮಾನ್ ಖಾನ್?