
ಬಾಲಿವುಡ್ ಬಾಾದ್‌ಶಾ ಶಾರುಖ್ ಖಾನ್ ತಮ್ಮ 61ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ನವೆಂಬರ್ 2ರಂದು ಮುಂಬೈನ ಅವರ ನಿವಾಸ ‘ಮನ್ನತ್’ ಎದುರು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಶಾರುಖ್ ಖಾನ್ ಕೂಡ ಗ್ಯಾಲರಿಯಲ್ಲಿ ನಿಂತು ಅಭಿಮಾನಿಗಳಿಗೆ ಕೈಬೀಸಿದರು. ತಮ್ಮ ಐಕಾನಿಕ್ ಪೋಸ್ ನೀಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಅವರ ಅಭಿನಯದ ಮುಂಬರುವ ‘ಕಿಂಗ್’ ಸಿನಿಮಾದ ಪ್ರಚಾರಕ್ಕೂ ಇದೇ ವೇಳೆ ಚಾಲನೆ ಸಿಕ್ಕಿದೆ.
ಶಾರುಖ್ ಖಾನ್ ಅವರ ಜನ್ಮದಿನದ ಸುಸಂದರ್ಭದಲ್ಲಿ ‘ಮನ್ನತ್’ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನೆಚ್ಚಿನ ನಟನನ್ನು ಒಂದು ನೋಟ ನೋಡಲು ಅಭಿಮಾನಿಗಳು ಗಂಟೆಗಟ್ಟಲೆ ಕಾಯುತ್ತಿದ್ದರು. ಕೆಲವರು ಶಾರುಖ್ ಖಾನ್ ಅವರ ಪೋಸ್ಟರ್‌ಗಳನ್ನು ಹಿಡಿದುಕೊಂಡು ಸಂಭ್ರಮಿಸಿದರು. ಶಾರುಖ್ ಗ್ಯಾಲರಿಗೆ ಆಗಮಿಸುತ್ತಿದ್ದಂತೆ ಇಡೀ ಮನ್ನತ್ ಆವರಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಶಾರುಖ್ ಖಾನ್ ತಮ್ಮ ಕುಟುಂಬ ಹಾಗೂ ಆಪ್ತ ಸ್ನೇಹಿತರೊಂದಿಗೆ ಮುಂಬೈನ ಹೋಟೆಲ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೂ ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಅವರು ನಿರಾಶೆಗೊಳಿಸಲಿಲ್ಲ. ವೈಟ್ ಟೀ-ಶರ್ಟ್ ಹಾಗೂ ನೀಲಿ ಜೀನ್ಸ್ ಧರಿಸಿ ಅಭಿಮಾನಿಗಳತ್ತ ಫ್ಲೈಯಿಂಗ್ ಕಿಸ್ ನೀಡಿದರು. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಈ ಸುಂದರ ಕ್ಷಣದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಜನ್ಮದಿನದ ಶುಭ ವೇಳೆಯಲ್ಲೇ ಶಾರುಖ್ ಅವರ ‘ಕಿಂಗ್’ ಸಿನಿಮಾದ ಪ್ರಚಾರ ಕಾರ್ಯಗಳು ಅಧಿಕೃತವಾಗಿ ಆರಂಭವಾಗಿವೆ. ಮಧ್ಯರಾತ್ರಿ ಮನ್ನತ್ ಎದುರಿನ ಬೃಹತ್ ಡಿಜಿಟಲ್ ಪರದೆಗಳಲ್ಲಿ ಸಿನಿಮಾದ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು. ಜತೆಗೆ ಶಾರುಖ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ತು ಮಿಲ್ ಜಾಯೆ’ ಸಾಂಗ್ ಬಿಡುಗಡೆಯಾಗಿದೆ. ಈ ಹಾಡಿನ ಮೂಲಕ ಪ್ರಸಿದ್ಧ ಹಾಡುಗಾರ ಎಡ್ ಶೀರನ್, ಅರಿಜಿತ್ ಸಿಂಗ್ ಜೊತೆಗೂಡಿ ಭಾರತೀಯ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ಜನ್ಮದಿನ: ಬರೀ ನಟನೆಯಲ್ಲ, 10,000 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಕಿಂಗ್ ಖಾನ್
ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಸಿನಿಮಾ ಡಿಸೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 1994ರ ಫ್ರೆಂಚ್ ಸಿನಿಮಾ ‘ಲಿಯಾನ್: ದಿ ಪ್ರೊಫೆಷನಲ್’ ಕಥೆಯಿಂದ ಈ ಚಿತ್ರ ಪ್ರೇರಣೆ ಪಡೆದಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಅವರ ಪುತ್ರಿ ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ಹಾಗೂ ರಾಘವ್ ಜುಯಾಲ್ ನಟಿಸಿದ್ದಾರೆ. ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ ಮತ್ತು ಕರೀನಾ ಕಪೂರ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.