ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾರುಖ್ ಖಾನ್
ಮುಂಬೈನಲ್ಲಿ ‘ಗ್ಲೋಬಲ್ ಪೀಸ್ ಆನರ್ಸ್ 2025’ ಕಾರ್ಯಕ್ರಮ ನಡೆದಿದ್ದು, ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಶಾರುಖ್ ಖಾನ್, ರಣವೀರ್ ಸಿಂಗ್, ಸುನೀಲ್ ಶೆಟ್ಟಿ, ರಕುಲ್ ಪ್ರೀತ್ ಸಿಂಗ್ ಮುಂತಾದವರು ಇದರಲ್ಲಿ ಪಾಲ್ಗೊಂಡಿದ್ದಾರೆ. ಶಾರುಖ್ ಖಾನ್ ಅವರು ಮಾತನಾಡಿದ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟ ಶಾರುಖ್ ಖಾನ್ ಅವರು ಮುಂಬೈನಲ್ಲಿ ನಡೆದ ‘ಗ್ಲೋಬಲ್ ಪೀಸ್ ಆನರ್ಸ್ 2025’ (Global Peace Honours 2025) ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ನವೆಂಬರ್ 22ರಂದು ಈ ಕಾರ್ಯಕ್ರಮ ನಡೆಯಿತು. ಈ ವೇದಿಕೆಯಲ್ಲಿ ಮಾತನಾಡಿದ ಶಾರುಖ್ ಖಾನ್ (Shah Rukh Khan) ಅವರು, ದೇಶದಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯಗಳ ಬಗ್ಗೆ ಹೇಳಿದರು. ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಅವರು ಶ್ರದ್ಧಾಂಜಲಿ ಅರ್ಪಿಸಿದರು. ಅಲ್ಲದೇ, ದೇಶ ಕಾಪಾಡುವ ಸೈನಿಕರು ಹಾಗೂ ಭದ್ರತಾ ಸಿಬ್ಬಂದಿಗೆ ಶಾರುಖ್ ಖಾನ್ ಅವರು ಗೌರವ ಸಲ್ಲಿಸಿದರು.
‘26/11 ಭಯೋತ್ಪಾದಕ ದಾಳಿ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಇತ್ತೀಚೆಗೆ ನಡೆದ ದೆಹಲಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ಜನರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ದಾಳಿಗಳ ವೇಳೆ ಹುತಾತ್ಮರಾದ ಭದ್ರತಾ ಸಿಬ್ಬಂದಿಗಳಿಗೂ ನಾನು ಗೌರವ ಸಲ್ಲಿಸುತ್ತೇನೆ’ ಎಂದು ಶಾರುಖ್ ಖಾನ್ ಅವರು ‘ಗ್ಲೋಬಲ್ ಪೀಸ್ ಆನರ್ಸ್ 2025’ ಕಾರ್ಯಕ್ರಮದಲ್ಲಿ ಹೇಳಿದರು.
‘ದೇಶದ ಸೈನಿಕರಿಗಾಗಿ ನಾನು ಸುಂದರವಾದ 4 ಸಾಲುಗಳನ್ನು ಹೇಳುತ್ತಿದ್ದೇನೆ. ನೀವು ಏನು ಮಾಡುತ್ತೀರಿ ಅಂತ ನಿಮ್ಮನ್ನು ಯಾರಾದರೂ ಕೇಳಿದರೆ ದೇಶ ಕಾಯುತ್ತೇನೆ ಎಂದು ಹೆಮ್ಮೆಯಿಂದ ಹೇಳಿ. ಎಷ್ಟು ದುಡಿಯುತ್ತೀರಿ ಅಂತ ಯಾರಾದರೂ ಕೇಳಿದರೆ 140 ಕೋಟಿ ಜನರ ಆಶೀರ್ವಾದ ಅಂತ ಸ್ವಲ್ಪ ಮುಗುಳುನಗೆಯಿಂದ ಹೇಳಿ. ನಿಮಗೆ ಭಯ ಆಗುವುದಿಲ್ಲವೇ ಅಂತ ಅವರು ಕೇಳಿದರೆ, ನಮ್ಮ ಮೇಲೆ ದಾಳಿ ಮಾಡುವವರಿಗೆ ಭಯ ಆಗುತ್ತದೆ ಅಂತ ಹೇಳಿ’ ಎಂದಿದ್ದಾರೆ ಶಾರುಖ್ ಖಾನ್.
‘ಶಾಂತಿಯ ಕಡೆಗೆ ನಾವೆಲ್ಲರೂ ಹೆಜ್ಜೆ ಹಾಕೋಣ. ಜಾತಿ, ಜನಾಂಗ, ತಾರತಮ್ಯ ಮರೆತು ಮಾನವೀಯತೆಯ ದಾರಿಯಲ್ಲಿ ಸಾಗೋಣ. ಈ ದೇಶದ ಶಾಂತಿಗಾಗಿ ಸೈನಿಕರ ಬಲಿದಾನ ವ್ಯರ್ಥವಾಗದಿರಲಿ. ನಮ್ಮ ನಡುವೆ ಶಾಂತಿ ಇದ್ದರೆ ಭಾರತವನ್ನು ಬೇರೆ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ’ ಎಂದು ಶಾರುಖ್ ಖಾನ್ ಅವರು ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: 2050ಕ್ಕೆ ಶಾರುಖ್ ಖಾನ್ ಯಾರು ಅನ್ನೋದನ್ನೇ ಜನ ಮರೆಯುತ್ತಾರೆ: ವಿವೇಕ್ ಒಬೆರಾಯ್
ಸಿನಿಮಾ ಬಗ್ಗೆ ಹೇಳುವುದಾದರೆ, ಶಾರುಖ್ ಖಾನ್ ಅವರು ಸದ್ಯಕ್ಕೆ ‘ಕಿಂಗ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬೃಹತ್ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ. ಸ್ವತಃ ಶಾರುಖ್ ಖಾನ್ ಅವರು ಬಂಡವಾಳ ಹೂಡುತ್ತಿದ್ದಾರೆ. ‘ಪಠಾಣ್’ ಖ್ಯಾತಿಯ ಸಿದ್ದಾರ್ಥ್ ಆನಂದ್ ಅವರು ‘ಕಿಂಗ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




