2050ಕ್ಕೆ ಶಾರುಖ್ ಖಾನ್ ಯಾರು ಅನ್ನೋದನ್ನೇ ಜನ ಮರೆಯುತ್ತಾರೆ: ವಿವೇಕ್ ಒಬೆರಾಯ್
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ. ಹಾಗಿದ್ದರೂ ಕೂಡ ಅವರನ್ನು ಜನರು 2050ರ ವೇಳೆಗೆ ಮರೆಯುತ್ತಾರೆ ಎಂದು ವಿವೇಕ್ ಒಬೆರಾಯ್ ಹೇಳಿದ್ದಾರೆ. ಈ ಅಭಿಪ್ರಾಯಕ್ಕೆ ಉದಾಹರಣೆಯಾಗಿ ರಾಜ್ ಕಪೂರ್ ಅವರ ಹೆಸರನ್ನು ವಿವೇಕ್ ಒಬೆರಾಯ್ ಹೇಳಿದ್ದಾರೆ.

ನಟ ಶಾರುಖ್ ಖಾನ್ ಅವರು ಜಗತ್ತಿನ ಶ್ರೀಮಂತರ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇದ್ದಾರೆ. ಬಾಲಿವುಡ್ (Bollywood) ಸಿನಿಮಾಗಳ ಮೂಲಕ ಅವರು ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದಾರೆ. ವಿವಿಧ ಕಾರಣಗಳಿಂದಾಗಿ ಅವರು ಜನಪ್ರಿಯತೆ ಪಡೆದಿದ್ದಾರೆ. ಅವರನ್ನು ಇಷ್ಟಪಡುವ ಅಭಿಮಾನಿಗಳು ವಿಶ್ವಾದ್ಯಂತ ಇದ್ದಾರೆ. ಶಾರುಖ್ ಖಾನ್ (Shah Rukh Khan) ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆದರೆ ನಟ ವಿವೇಕ್ ಒಬೆರಾಯ್ ಹೇಳುವ ಪ್ರಕಾರ, ಇದೆಲ್ಲವೂ ತಾತ್ಕಾಲಿಕ. ಮುಂದಿನ ದಿನಗಳಲ್ಲಿ ಶಾರುಖ್ ಖಾನ್ ಯಾರು ಎಂಬುದನ್ನೇ ಜನರು ಮರೆಯುತ್ತಾರೆ ಎಂದು ವಿವೇಕ್ ಒಬೆರಾಯ್ (Vivek Oberoi) ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
‘1960ರ ದಶಕದಲ್ಲಿ ಯಾವುದಾದರೊಂದು ಸಿನಿಮಾದಲ್ಲಿ ನಟಿಸಿದ ಕಲಾವಿದರ ಬಗ್ಗೆ ಇಂದಿನ ತಲೆಮಾರಿನವರಿಗೆ ಕೇಳಿ ನೋಡಿ. ಯಾರಿಗೂ ತಿಳಿದಿಲ್ಲ. ಇತಿಹಾಸದಿಂದ ನೀವು ಅನಿವಾರ್ಯವಾಗಿ ದೂರ ಸರಿಯುತ್ತೀರಿ. 2050ರಲ್ಲಿ ಶಾರುಖ್ ಖಾನ್ ಯಾರು ಅಂತ ಜನರು ಕೇಳಬಹುದು’ ಎಂದು ವಿವೇಕ್ ಒಬೆರಾಯ್ ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಚರ್ಚೆ ಆಗುತ್ತಿದೆ.
ವಿವೇಕ್ ಒಬೆರಾಯ್ ಅವರು ತಮ್ಮ ಮಾತಿಗೆ ಉದಾಹರಣೆಯಾಗಿ ರಣಬೀರ್ ಕಪೂರ್ ತಾತ ರಾಜ್ ಕಪೂರ್ ಅವರ ಹೆಸರನ್ನು ಹೇಳಿದ್ದಾರೆ. ‘ಇಂದಿನ ತಲೆಮಾರಿನವರು ರಾಜ್ ಕಪೂರ್ ಯಾರು ಅಂತ ಕೇಳುತ್ತಾರೆ. ನಾವು, ನೀವು ಅವರನ್ನು ಸಿನಿಮಾದ ದೇವರು ಅಂತ ಕರೆಯುತ್ತೇನೆ. ಆದರೆ ಇಂದು ರಣಬೀರ್ ಕಪೂರ್ ಅವರ ಅಭಿಮಾನಿಗಳಿಗೆ ಕೇಳಿದರೆ ರಾಜ್ ಕಪೂರ್ ಯಾರು ಎಂಬುದೇ ಅವರಿಗೆ ತಿಳಿದಿರುವುದಿಲ್ಲ’ ಎಂಬುದು ವಿವೇಕ್ ಒಬೆರಾಯ್ ಅಭಿಪ್ರಾಯ.
ವಿವೇಕ್ ಒಬೆರಾಯ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಕೈಯಲ್ಲಿ ಹಲವು ಅವಕಾಶಗಳು ಇವೆ. ನವೆಂಬರ್ 21ರಂದು ಬಿಡುಗಡೆ ಆಗಲಿರುವ ‘ಮಸ್ತಿ 4’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಪ್ರಭಾಸ್ ಅಭಿನಯದ ‘ಸ್ಪಿರಿಟ್’ ಚಿತ್ರದಲ್ಲೂ ವಿವೇಕ್ ಒಬೆರಾಯ್ ಅವರು ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗಾ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: 12,490 ಕೋಟಿ ರೂಪಾಯಿ ಒಡೆಯ ಶಾರುಖ್ ಖಾನ್
ಇನ್ನು, ಶಾರುಖ್ ಖಾನ್ ಸಿನಿಮಾಗಳ ಬಗ್ಗೆ ಹೇಳೋದಾದರೆ ಅವರು ‘ಕಿಂಗ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷ ಅವರ ಹುಟ್ಟುಹಬ್ಬದ ಪ್ರಯುಕ್ತ ನವೆಂಬರ್ 2ರಂದು ‘ಕಿಂಗ್’ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಆಯಿತು. ಶಾರುಖ್ ಖಾನ್ ಅವರಿಗೆ ಈಗ 60 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಕೂಡ ಅವರು ಅದ್ದೂರಿ ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




