
ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅಭಿನಯದ, 2026ರ ಅತ್ಯಂತ ನಿರೀಕ್ಷಿತ ‘ಕಿಂಗ್’ ಸಿನಿಮಾ ಕುರಿತು ಪ್ರಮುಖ ಮತ್ತು ದೊಡ್ಡ ಅಪ್‌ಡೇಟ್ ಒಂದನ್ನು ಚಿತ್ರತಂಡ ಹೊರಹಾಕಿದೆ. ಮೂರು ಸುದೀರ್ಘ ವರ್ಷಗಳ ವಿರಾಮದ ನಂತರ ಶಾರುಖ್ ಖಾನ್ ಅವರನ್ನು ಮತ್ತೆ ಬೆಳ್ಳಿಪರದೆಯ ಮೇಲೆ ನೋಡಲು ಕಾಯುತ್ತಿರುವ ಕೋಟ್ಯಂತರ ಅಭಿಮಾನಿಗಳಿಗೆ ಶೀಘ್ರದಲ್ಲೇ ಬಹುದೊಡ್ಡ ಸರ್ಪ್ರೈಸ್ ಸಿಗಲಿದೆ. ಸದ್ಯದಲ್ಲೇ ಈ ಸಿನಿಮಾದಿಂದ ಮಾಸ್ ಟೀಸರ್ ಬಿಡುಗಡೆ ಆಗಲಿದೆ.
ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದ ಮಾಸ್ ಮತ್ತು ಆ್ಯಕ್ಷನ್-ಪ್ಯಾಕ್ಡ್ ಟೀಸರ್, ಶಾರುಖ್ ಖಾನ್ ಅವರ ಜನ್ಮದಿನವಾದ ನವೆಂಬರ್ 2ರಂದು ಅನಾವರಣಗೊಳ್ಳಲು ಸಂಪೂರ್ಣವಾಗಿ ಸಜ್ಜಾಗಿದೆ. ಈ ಕುರಿತು ನಂಬಲಾರ್ಹ ಮೂಲಗಳು ಮಾಹಿತಿ ಹಂಚಿಕೊಂಡಿವೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಪ್ರಕಟ ಮಾಡಿದೆ.
‘ಚಿತ್ರತಂಡದಿಂದ ಇದು ಪ್ರಪಂಚದಾದ್ಯಂತ ಇರುವ ಎಲ್ಲಾ ಶಾರುಖ್ ಅಭಿಮಾನಿಗಳಿಗೆ ಸಿಗುತ್ತಿರುವ ಹುಟ್ಟುಹಬ್ಬದ ಉಡುಗೊರೆಯಾಗಿದೆ. ಸಿದ್ದಾರ್ಥ್ ಆನಂದ್ ಅವರು ಅಭಿಮಾನಿಗಳಿಗೆ ಶಾರುಖ್ ಅವರ ಸಂಪೂರ್ಣ ಹೊಸ ಅವತಾರವನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಈಗ ಸಿದ್ಧವಾಗಿರುವ ಟೀಸರ್ ಕಟ್ ಅತ್ಯಂತ ರೋಮಾಂಚನಕಾರಿಯಾಗಿದ್ದು, ಶಾರುಖ್ ಖಾನ್ ಇದುವರೆಗೆ ಕಾಣಿಸಿಕೊಂಡಿರದ ರೀತಿಯಲ್ಲಿ ದರ್ಶನ ನೀಡಲಿದ್ದಾರೆ’ ಎಂದು ವರದಿ ಆಗಿದೆ.
‘ಕಿಂಗ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿದ್ದು, ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ‘ಪಠಾನ್’ ಮತ್ತು ‘ಜವಾನ್’ ಚಿತ್ರಗಳ ಅದ್ದೂರಿತನವನ್ನು ಕಣ್ಣುಂಬಿಕೊಂಡಿದ್ದ ಪ್ರೇಕ್ಷಕರಿಗೆ, ‘ಕಿಂಗ್’ ಮೂಲಕ ನಿರ್ದೇಶಕ ಸಿದ್ದಾರ್ಥ್ ಆನಂದ್ ಮತ್ತೊಂದು ಹಂತದ ಆ್ಯಕ್ಷನ್ ಅನುಭವ ನೀಡಲಿದ್ದಾರೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ ಎರಡೂವರೆ ಸಾವಿರ ಕೋಟಿ ರೂಪಾಯಿ ಕಳೆದುಕೊಂಡ ಶಾರುಖ್ ಖಾನ್
ಈ ಟೀಸರ್ ಬಿಡುಗಡೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಕ್ರಿಸ್‌ಮಸ್ ಹಬ್ಬದ ರಜಾದಿನಗಳಲ್ಲಿ ಪ್ರೇಕ್ಷಕರಿಗೆ ರಂಜನೆ ನೀಡಲು ಚಿತ್ರತಂಡ ಸಜ್ಜಾಗಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ‘ಕಿಂಗ್’ ಸಿನಿಮಾ ಡಿಸೆಂಬರ್ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.