ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಗೌರಿ ಖಾನ್ ಅವರು ಇಂಟೀರಿಯರ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಮುಂಬೈನಲ್ಲಿರುವ ‘ಮನ್ನತ್’ ಬಂಗಲೆಯಲ್ಲಿ ಅವರ ಜೀವನ ಐಷಾರಾಮಿ ಆಗಿರುತ್ತದೆ. ಹಾಗಿದ್ದರೂ ಕೂಡ ಶಾರುಖ್ ಪತ್ನಿ ಗೌರಿ ಖಾನ್ (Gauri Khan) ಅವರು ‘ನನ್ನದು ಸಿಂಪಲ್ ಜೀವನ’ ಎಂದು ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಅವರು ದಿನಚರಿ ರೂಢಿಸಿಕೊಂಡಿದ್ದಾರೆ. ಆ ಬಗ್ಗೆ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಶಾರುಖ್ ಖಾನ್ ಅವರಿಂದಾಗಿ ತಮ್ಮ ಜೀವನ ಶೈಲಿ ಕೂಡ ಬದಲಾಗಿದೆ ಎಂದು ಅವರು ಹೇಳಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಶಾರುಖ್ ಖಾನ್ ಅವರು ಮುಂಜಾನೆ ಬೇಗ ಏಳುವ ವ್ಯಕ್ತಿಯಲ್ಲ. ರಾತ್ರಿ ಎಷ್ಟು ಹೊತ್ತಿನ ತನಕ ಬೇಕಿದ್ದರೂ ಅವರು ಕೆಲಸ ಮಾಡುತ್ತಾರೆ. ಪಾರ್ಟಿಯಲ್ಲಿ ಭಾಗಿ ಆಗುತ್ತಾರೆ, ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುತ್ತಾರೆ. ಇಷ್ಟೆಲ್ಲ ಮುಗಿದು ಮಲಗುವ ವೇಳೆಗೆ ನಸುಕಿನ ಸಮಯ ಆಗಿರುತ್ತದೆ. ಹಾಗಾಗಿ ಅವರು ಮರುದಿನ ಏಳುವುದು ತಡವಾಗುತ್ತದೆ. ಗಾರಿ ಖಾನ್ ಅವರಿಗೂ ಅದೇ ರೂಢಿ ಆಗಿದೆ.
‘ನಾನು ಬೇಗ ಏಳುವವಳಲ್ಲ. ಯಾಕೆಂದರೆ, ನಮ್ಮ ಮನೆಯವರೆಲ್ಲ ತಡರಾತ್ರಿ ತನಕ ಎಚ್ಚರವಾಗಿರುತ್ತಾರೆ. ಹಾಗಾಗಿ ನಾನು ಮರುದಿನ ಬೆಳಗ್ಗೆ 10 ಗಂಟೆಗೆ ಏಳುತ್ತೇನೆ. ಬೆಳಗ್ಗೆ ಕಾಫಿ ಕುಡಿಯುತ್ತೇನೆ. ನಂತರ ಜಿಮ್, ಊಟ, ಕೆಲಸ ಮಾಡುತ್ತೇನೆ. ಮಕ್ಕಳು ನನ್ನ ಮೊದಲ ಆದ್ಯತೆ. ಅಬ್ರಾಮ್ ಮಧ್ಯಾಹ್ನ ಊಟಕ್ಕೆ 3 ಗಂಟೆಗೆ ಬರುತ್ತಾನೆ. ಅವನ ಜೊತೆ ಸಮಯ ಕಳೆಯುತ್ತೇನೆ. ನಂತರ ಕೆಲಸಕ್ಕೆ ತೆರಳುತ್ತೇನೆ. ರಾತ್ರಿ ಊಟದ ವೇಳೆ ಮನೆಗೆ ಮರಳುತ್ತೇನೆ. ಇದು ನನ್ನ ಸರಳವಾದ ಜೀವನ’ ಎಂದು ಗೌರಿ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: 10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್
ಪ್ರತಿ ದಿನ ಸಂಜೆ 7.30ಕ್ಕೆ ಮನೆಗೆ ವಾಪಸ್ ಬರಬೇಕು ಎಂದು ಗೌರಿ ಖಾನ್ ಬಯಸುತ್ತಾರೆ. ಆದರೆ ಕೆಲವೊಮ್ಮೆ ಕೆಲಸ ತಡವಾಗುತ್ತದೆ ಎಂದು ಅವರು ಹೇಳಿದ್ದಾರೆ. ನಿರ್ಮಾಪಕಿ ಆಗಿಯೂ ಅವರು ಬ್ಯುಸಿ ಆಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಾದ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಕೆಲಸಗಳನ್ನು ಅವರು ನೋಡಿಕೊಳ್ಳುತ್ತಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ಪತಿ-ಪತ್ನಿಯಾಗಿ 1991ರಿಂದ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇಬ್ಬರ ನಡುವೆ ಹೊಂದಾಣಿಕೆ ಚೆನ್ನಾಗಿದೆ. ಪರಸ್ಪರ ವೃತ್ತಿ ಜೀವನಕ್ಕೆ ಅವರು ಬೆಂಬಲವಾಗಿ ನಿಂತಿದ್ದಾರೆ. ಬಹಳ ಕಷ್ಟಪಟ್ಟು ಮೇಲಕ್ಕೆ ಬಂದಿರುವ ಅವರು ಅನೇಕರಿಗೆ ಮಾದರಿ ಆಗಿದ್ದಾರೆ. 2023ರಲ್ಲಿ ಶಾರುಖ್ ಖಾನ್ ಅವರು ‘ಜವಾನ್’, ‘ಪಠಾಣ್’ ಹಾಗೂ ‘ಡಂಕಿ’ ಸಿನಿಮಾಗಳಿಗೆ ಗೆಲುವು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.