ಬಾಲಿವುಡ್ ನಟ ಶಾರುಖ್ ಖಾನ್ ಅವರು 1991ರ ಅಕ್ಟೋಬರ್ 25ರಂದು ಗೌರಿ ಖಾನ್ ಅವರನ್ನು ವಿವಾಹವಾದರು. ಶಾರುಖ್ ಮುಸ್ಲಿಂ ಆಗಿದ್ದರೂ ಹಿಂದೂ ಸಂಪ್ರದಯಾದ ಪ್ರಕಾರ ಈ ಮದುವೆ ನಡೆದಿದೆ. ಈ ದಂಪತಿಗೆ ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಎಂಬ ಮೂವರು ಮಕ್ಕಳಿದ್ದಾರೆ. ಶಾರುಖ್ ಮತ್ತು ಗೌರಿ ಅಂತರ್ಧರ್ಮೀಯ ವಿವಾಹವಾಗಿದ್ದರೂ, ಇಬ್ಬರೂ ಪರಸ್ಪರ ಧರ್ಮವನ್ನು ಗೌರವಿಸುತ್ತಾರೆ ಮತ್ತು ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತಾರೆ. ಮದುವೆಯ ನಂತರ ಗೌರಿ ಮತಾಂತರವಾಗಲಿಲ್ಲ. ಆದರೆ ಇದೀಗ ಶಾರುಖ್ ಹಾಗೂ ಗೌರಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗೌರಿ ಮತಾಂತರದ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ಈ ಫೋಟೋ ಮಕ್ಕಾದಿಂದ ಬಂದಿದೆ. ಮದುವೆಯಾದ 34 ವರ್ಷಗಳ ನಂತರ ಗೌರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೇ ಎಂಬ ಪ್ರಶ್ನೆ ಮೂಡಿದೆ.
ಈ ಫೋಟೋದಲ್ಲಿ ಶಾರುಖ್ ಮತ್ತು ಗೌರಿ ಮುಸ್ಲಿಂ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಅವರು ಗೌರಿಯನ್ನು ಮೆಕ್ಕಾಗೆ ಕರೆದೊಯ್ದು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಾರುಖ್ ಮತ್ತು ಗೌರಿ ಅವರ ಈ ಫೋಟೋಗೆ ವಿವಿಧ ಪ್ರತಿಕ್ರಿಯೆಗಳು ಬರುತ್ತಿವೆ . ಆದರೆ ಈ ಫೋಟೋಗಳ ಹಿಂದಿನ ಸತ್ಯ ಬೇರೆಯೇ ಇದೆ. ಈ ಫೋಟೋಗಳು AI ರಚಿತವಾಗಿದ್ದು ಸಂಪೂರ್ಣವಾಗಿ ನಕಲಿ ಎಂದು ತಿಳಿದುಬಂದಿದೆ.
AI ಸೃಷ್ಟಿಸಿದ ಅನೇಕ ಸೆಲೆಬ್ರಿಟಿಗಳ ನಕಲಿ ಫೋಟೋಗಳು ಈ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದೀಗ ಶಾರುಖ್ ಮತ್ತು ಗೌರಿ ಕೂಡ ಅದರ ಸಂತ್ರಸ್ತರಾಗಿದ್ದಾರೆ. ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್-ಸಾರಾ ಅಲಿ ಖಾನ್, ಐಶ್ವರ್ಯ ರೈ-ಸಲ್ಮಾನ್ ಖಾನ್, ವಿವೇಕ್ ಒಬೆರಾಯ್-ಸಲ್ಮಾನ್ ಖಾನ್, ಸಿದ್ಧಾರ್ಥ್ ಶುಕ್ಲಾ-ಶೆಹನಾಜ್ ಗಿಲ್ ಅವರ ನಕಲಿ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಮದುವೆಗೂ ಮುನ್ನವೇ ಗೌರಿ ಮತಾಂತರ ಬೇಡ ಎಂದು ನಿರ್ಧರಿಸಿದ್ದರು. ಕಾಫಿ ವಿತ್ ಕರಣ್‌ನ ಮೊದಲ ಸೀಸನ್‌ನಲ್ಲಿ ಗೌರಿ ಈ ಬಗ್ಗೆ ಮುಕ್ತವಾಗಿ ಹೇಳಿದ್ದರು. ‘ನಾವು ಸರಿಯಾದ ಸಮತೋಲನವನ್ನು ಹೊಂದಿದ್ದೇವೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ, ಆದರೆ ನಾನು ಮತಾಂತರಗೊಳ್ಳುತ್ತೇನೆ ಎಂದಲ್ಲ. ಪ್ರತಿಯೊಬ್ಬರೂ ತಮ್ಮ ಸ್ವಂತ ಧರ್ಮವನ್ನು ಅನುಸರಿಸುವ ಮತ್ತು ಸಂಬಂಧದಲ್ಲಿ ಪರಸ್ಪರ ಗೌರವಿಸುವ ಹಕ್ಕನ್ನು ಹೊಂದಿದ್ದಾರೆಂದು ನಾನು ನಂಬುತ್ತೇನೆ. ಶಾರುಖ್ ಕೂಡ ನನ್ನ ಧರ್ಮಕ್ಕೆ ಅಗೌರವ ತೋರುವುದಿಲ್ಲ. ನಾನು ದೀಪಾವಳಿ ಮಾಡುತ್ತೇನೆ. ಈದ್‌ನಲ್ಲಿ ಶಾರುಖ್ ಪ್ರಾರ್ಥನೆ ಮಾಡುತ್ತಾರೆ. ನಮ್ಮ ಮಕ್ಕಳು ಕೂಡ ಎರಡೂ ಧರ್ಮಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದಾರೆ’ ಎಂದಿದ್ದರು ಗೌರಿ.
ಇದನ್ನೂ ಓದಿ: ಬೋಲ್ಡ್ ದೃಶ್ಯ ಮಾಡಿ ಗಮನ ಸೆಳೆದ ಬಿಪಾಶಾಗೆ ಆಗಿತ್ತು ಕಾಸ್ಟಿಂಗ್ ಕೌಚ್ ಅನುಭವ
‘ಕೆಲವೊಮ್ಮೆ ಜನರು ತಮ್ಮ ಧರ್ಮ ಯಾವುದು ಎಂದು ಕೇಳುತ್ತಾರೆ? ಆಗ ನಾನು ಅವರಿಗೆ ನಾನು ಭಾರತೀಯ ಎಂದು ಹಿಂದಿ ಸಿನಿಮಾದ ನಾಯಕನಂತೆ ಉತ್ತರಿಸುತ್ತೇನೆ. ನಮ್ಮ ಧರ್ಮ ಮಾನವೀಯತೆ’ ಎಂದಿದ್ದರು ಶಾರುಖ್ ಖಾನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.