ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರು ಅರೆಸ್ಟ್ ಆಗಿ ವಾರ ಕಳೆದಿದೆ. ಅವರನ್ನು ಜೈಲಿನಿಂದ ಹೊರಗೆ ತರುವ ಪ್ರಯತ್ನದಲ್ಲಿ ಶಾರುಖ್ ಖಾನ್ ಇದ್ದಾರೆ. ಆದರೆ, ಅವರಿಗೆ ಜಾಮೀನು ಮಾತ್ರ ಸಿಗುತ್ತಿಲ್ಲ. ಮೊದಲು ಎನ್ಸಿಬಿ ವಶದಲ್ಲಿದ್ದ ಆರ್ಯನ್ ಖಾನ್ ನಂತರ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಮುಂಬೈ ಕೋರ್ಟ್ನಲ್ಲಿ ಆರ್ಯನ್ಗೆ ಜಾಮೀನು ನಿರಾಕರಿಸಲಾಯಿತು. ಇದು ಶಾರುಖ್ ಖಾನ್ಗೆ ಟೆನ್ಶನ್ ತಂದಿದೆ.
ಅಕ್ಟೋಬರ್ 2ರಂದು ಮುಂಬೈನ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಆರ್ಯನ್ ಖಾನ್ ಬಂಧನಕ್ಕೆ ಒಳಗಾದರು. ಅವರನ್ನು ಎನ್ಸಿಬಿ ವಶಕ್ಕೆ ಪಡೆಯಿತು. ಕೆಲ ದಿನಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇದಾದ ನಂತರ ಆರ್ಯನ್ಗೆ ಕಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರ್ಯನ್ ಪರ ವಕೀಲರಾದ ಸತೀಶ್ ಮಾನೇಶಿಂಧೆ ಅವರು ಎಷ್ಟೇ ಪ್ರಯತ್ನ ಮಾಡಿದರೂ ಜಾಮೀನು ಸಿಗುತ್ತಿಲ್ಲ.
ಇದು ಕೋರ್ಟ್ ವಿಚಾರ ಆದ ಕಾರಣ ಶಾರುಖ್ ಖಾನ್ ಪ್ರಭಾವ ಬೀರಲು ಸಾಧ್ಯವಿಲ್ಲ. ಹೀಗಾಗಿ, ಅವರು ಅಸಹಾಯಕರಾಗಿದ್ದಾರೆ. ಇನ್ನು, ಶಾರುಖ್ ತುಂಬಾನೇ ಸಿಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ. ಶಾರುಖ್ಗೆ ನಿದ್ದೆ ಬರುತ್ತಿಲ್ಲ. ಅವರು ಡಯಟ್ಅನ್ನು ಫಾಲೋ ಮಾಡುತ್ತಿಲ್ಲ. ಇದು ಗೌರಿ ಖಾನ್ಗೂ ತಲೆಬಿಸಿ ತಂದಿದೆ. ಮಗನ ಬಗ್ಗೆ ಚಿಂತಿಸಬೇಕೋ ಅಥವಾ ಪತಿಯ ಆರೋಗ್ಯದ ಬಗ್ಗೆ ಗಮನ ಹರಿಸಬೇಕೋ ಎನ್ನುವ ಗೊಂದಲದಲ್ಲಿ ಅವರಿದ್ದಾರೆ. ಗೌರಿ ಖಾನ್ ಅವರು ಮಾಧ್ಯಮದ ಮುಂದೆ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.
ಆರ್ಯನ್ ಮತ್ತು ಇತರ ಆರೋಪಿಗಳನ್ನು ಆರ್ಥರ್ ರೋಡ್ ಜೈಲಿಗೆ ಕಳುಹಿಸಲಾಗಿದೆ. ಜೈಲಿನ ನಿಯಮದ ಪ್ರಕಾರ 2-5 ದಿನಗಳ ಕಾಲ ಇಲ್ಲಿನ ಸೆಲ್ನಲ್ಲಿ ಕ್ವಾರಂಟೈನ್ ಆಗಬೇಕು. ಕೊವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರೂ ಕ್ವಾರಂಟೈನ್ ಆಗುವುದು ಕಡ್ಡಾಯವಾಗಿದೆ. ಜೈಲಿನಲ್ಲಿ ಇವರಿಗೆ ಸಾಮಾನ್ಯ ಅಡುಗೆಯನ್ನೇ ನೀಡಲಾಗುತ್ತದೆ. ಇನ್ನು, ನಿದ್ರಿಸೋಕೆ ಸಾಮಾನ್ಯ ವ್ಯವಸ್ಥೆ ಇರಲಿದೆ. ಇದು ಶಾರುಖ್ ಅವರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.
ಇದನ್ನೂ ಓದಿ: ‘ಕುಟುಂಬಕ್ಕೆ ಸಮಸ್ಯೆ ಆದಾಗ ಮೊದಲು ಬರೋದು ಸಲ್ಮಾನ್’; ಶಾರುಖ್ ಮಾತನಾಡಿದ್ದ ಹಳೆಯ ವಿಡಿಯೋ ವೈರಲ್