
ಬಾಲಿವುಡ್‌ನ ನಟ ಶಾರುಖ್ ಖಾನ್ ಅವರ (Shah Rukh Khan) ಯಶಸ್ಸಿನ ಹಿಂದೆ ಅವರ ಕುಟುಂಬ ಇದೆ. ವಿಶೇಷವಾಗಿ ಅವರ ಅಕ್ಕ ಶಹನಾಜ್ ಖಾನ್, ಇಡೀ ಖಾನ್ ಕುಟುಂಬದ ಬಲವಾದ ಆಧಾರಸ್ತಂಭವಾಗಿದ್ದಾರೆ. ಆದರೆ, ಅವರು ಯಾವಾಗಲೂ ಮಾಧ್ಯಮದ ಬೆಳಕಿನಿಂದ ಮತ್ತು ಜನಮನದಿಂದ ದೂರವಿರಲು ಬಯಸುತ್ತಾರೆ. ಅವರು ಈವರೆಗೆ ಮದುವೆ ಆಗಿಲ್ಲ.
1960 ರಲ್ಲಿ ಜನಿಸಿದ ಶಹನಾಜ್, ಶಾರುಖ್ ಖಾನ್ ಅವರಿಗಿಂತ ಸುಮಾರು ಐದರಿಂದ ಆರು ವರ್ಷ ದೊಡ್ಡವರು. ಶಹನಾಜ್ ತುಂಬಾ ಬುದ್ಧಿವಂತೆ ಮತ್ತು ಉನ್ನತ ಶಿಕ್ಷಣ ಪಡೆದಿದ್ದಾರೆ. ಅವರು ಎಲ್‌ಎಲ್‌ಬಿ ಮತ್ತು ಎಂಎ ಪದವಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶಾರುಖ್ ಖಾನ್ ಅವರೇ ತಮ್ಮ ಅನೇಕ ಸಂದರ್ಶನಗಳಲ್ಲಿ ‘ನನ್ನ ಅಕ್ಕ ನನಗಿಂತ ನೂರು ಪಟ್ಟು ಹೆಚ್ಚು ಬುದ್ಧಿವಂತೆ ಮತ್ತು ಜಾಣೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಆದರೂ ಅವರು ಎಂದಿಗೂ ಪ್ರಚಾರವನ್ನು ಬಯಸದೆ ಶಾಂತ ಮತ್ತು ಸರಳ ಜೀವನವನ್ನು ನಡೆಸುತ್ತಿದ್ದಾರೆ.
ಶಹನಾಜ್ ಅವರ ಜೀವನವು ತೀವ್ರ ಏರಿಳಿತಗಳಿಂದ ಕೂಡಿತ್ತು. 1981ರಲ್ಲಿ ಅವರ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಅವರ ಹಠಾತ್ ನಿಧನವು ಅವರಿಗೆ ಭರಿಸಲಾಗದ ಮಾನಸಿಕ ಆಘಾತವನ್ನು ನೀಡಿತು. ತಂದೆಯ ದೇಹವನ್ನು ನೋಡಿ ಮೂರ್ಛೆ ಹೋಗಿದ್ದ ಅವರು, ಸುಮಾರು ಎರಡು ವರ್ಷಗಳ ಕಾಲ ಯಾರೊಂದಿಗೂ ಸರಿಯಾಗಿ ಮಾತನಾಡದೆ ತೀವ್ರ ಖಿನ್ನತೆಗೆ ಒಳಗಾಗಿದ್ದರು. ತದನಂತರ 1991 ರಲ್ಲಿ ತಾಯಿ ಲತೀಫ್ ಫಾತಿಮಾ ಅವರ ಮರಣವು ಅವರ ಮಾನಸಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು.
‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಶಹನಾಜ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ, ಶಾರುಖ್ ಖಾನ್ ಅವರು ತಮ್ಮ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ ಸಹೋದರಿಯ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಿದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ವಿಟ್ಜರ್‌ಲ್ಯಾಂಡ್‌ಗೂ ಕರೆದೊಯ್ದಿದ್ದರು.
ಇದನ್ನೂ ಓದಿ: ಭಾರತದಲ್ಲಿ ಸಿಗದ 5 ಕೋಟಿ ರೂಪಾಯಿ ಬೆಲೆಯ ಹೊಸ ಕಾರು ತರಿಸಿಕೊಂಡ ಶಾರುಖ್ ಖಾನ್
ಹೆತ್ತವರ ಅಗಲಿಕೆಯ ಆಘಾತದಿಂದಾಗಿ ಶಹನಾಜ್ ಅವರು ಜೀವನದಲ್ಲಿ ಮದುವೆಯಾಗದೆ ಉಳಿದುಬಿಟ್ಟರು. ಅವರು ತಮ್ಮ ಇಡೀ ಜೀವನವನ್ನು ಕುಟುಂಬಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ. ಪ್ರಸ್ತುತ ಅವರು ಮುಂಬೈನಲ್ಲಿರುವ ಶಾರುಖ್ ಅವರ ಐಷಾರಾಮಿ ಬಂಗಲೆ ‘ಮನ್ನತ್’ ನಲ್ಲಿ ವಾಸಿಸುತ್ತಿದ್ದಾರೆ. ಶಾರುಖ್ ಪತ್ನಿ ಗೌರಿ ಖಾನ್ ಮತ್ತು ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್‌ರಾಮ್ ಅವರೊಂದಿಗೆ ಅವರು ಅತ್ಯಂತ ಆಪ್ತ ಹಾಗೂ ಪ್ರೀತಿಯ ಸಂಬಂಧವನ್ನು ಹೊಂದಿದ್ದಾರೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ಮಾಧ್ಯಮಗಳಿಂದ ಸದಾ ದೂರವೇ ಉಳಿಯುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.