ಕಾರ್ತಿಕ್ ಆರ್ಯನ್ (Karthik Aryan) ಅವರು ಸ್ಟಾರ್ ಹೀರೋ ಆಗಿದ್ದಾರೆ. ಅವರು ಇತ್ತೀಚೆಗೆ ಮುಂಬೈನಲ್ಲಿ ಮನೆ ಒಂದನ್ನು ಹುಡುಕುತ್ತಿದ್ದರು. ಈ ಹುಡುಕಾಟಕ್ಕೆ ಕೊನೆ ಸಿಕ್ಕಿದೆ. ಜುಹುದಲ್ಲಿ ಕಾರ್ತಿಕ್ ಆರ್ಯನ್ಗೆ ಅಪಾರ್ಟ್ಮೆಂಟ್ ಸಿಕ್ಕಿದೆ. ಶಾಹಿದ್ ಕಪೂರ್ (Shahid Kapoor) ಮನೆಯನ್ನು ಕಾರ್ತಿಕ್ ಆರ್ಯನ್ ಬಾಡಿಗೆ ಪಡೆದಿದ್ದಾರೆ. ಕಳೆದ ಸೆಪ್ಟೆಂಬರ್ವರೆಗೆ ಈ ಮನೆಯಲ್ಲಿ ಶಾಹಿದ್ ಕಪೂರ್ ವಾಸವಾಗಿದ್ದರು. ಈಗ ಅವರು ಬಾಂದ್ರಾ ಬಳಿಯಲ್ಲಿನ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಹೀಗಾಗಿ, ಜುಹು ಮನೆ ಖಾಲಿ ಉಳಿದುಕೊಂಡಿತ್ತು. ಇದನ್ನು ಕಾರ್ತಿಕ್ ಆರ್ಯನ್ ಬಾಡಿಗೆಗೆ ಪಡೆದಿದ್ದಾರೆ.
ಕಾರ್ತಿಕ್ ಆರ್ಯನ್ ಅವರು ಬಾಲಿವುಡ್ನಲ್ಲಿ ಯಶಸ್ವಿ ಹೀರೋ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ಅವರ ನಟನೆಯ ‘ಭೂಲ್ ಭುಲಯ್ಯ 2’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅವರ ಬೇಡಿಕೆ ಹೆಚ್ಚಿದೆ. ಹಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ‘ಹೇರಾ ಫೇರಿ 3’ ಚಿತ್ರಕ್ಕೆ ಅವರು ಹೀರೋ ಎನ್ನಲಾಗಿದೆ. ಇತ್ತೀಚೆಗೆ ಕಾರ್ತಿಕ್ ಆರ್ಯನ್ ಅವರು ಮನೆ ಬದಲಿಸಬೇಕು ಎಂದುಕೊಂಡಿದ್ದರು. ಈಗ ಅವರಿಗೆ ಹೊಸ ಮನೆ ಸಿಕ್ಕಿದೆ.
ಜುಹುದಲ್ಲಿರುವ ಶಾಹಿದ್ ಕಪೂರ್ ಮನೆಗೆ ಕಾರ್ತಿಕ್ ಆರ್ಯನ್ ಅವರು ಪ್ರತಿ ತಿಂಗಳು 7.5 ಲಕ್ಷ ರೂಪಾಯಿ ಬಾಡಿಗೆ ನೀಡುತ್ತಿದ್ದಾರೆ. 3,681 ಚದರ ಅಡಿಯನ್ನು ಈ ಮನೆ ಹೊಂದಿದೆ. ಪ್ರತಿ ವರ್ಷ ಬಾಡಿಗೆ ಏಳು ಪರ್ಸೆಂಟ್ ಹೆಚ್ಚಲಿದೆ. ಅಂದರೆ 2024ರಲ್ಲಿ ಕಾರ್ತಿಕ್ ಆರ್ಯನ್ ಅವರು ಪ್ರತಿ ತಿಂಗಳು 8.02 ಲಕ್ಷ ರೂಪಾಯಿ ಪಾವತಿಸಬೇಕು. ಭದ್ರತಾ ಠೇವಣಿಯಾಗಿ 45 ಲಕ್ಷ ರೂಪಾಯಿ ಅನ್ನು ಕಾರ್ತಿಕ್ ಆರ್ಯನ್ ಪಾವತಿಸಿದ್ದಾರೆ.
ಇದನ್ನೂ ಓದಿ: Kartik Aryan: ಕಾರ್ತಿಕ್ ಆರ್ಯನ್ಗೆ ‘ರಿಪ್ಲೇಸಿಂಗ್ ಸ್ಟಾರ್’ ಪಟ್ಟ; ಪ್ರತಿಕ್ರಿಯಿಸಿದ ಸ್ಟಾರ್ ಹೀರೋ
ಕಾರ್ತಿಕ್ ಆರ್ಯನ್ ಅವರು ಇಷ್ಟು ದಿನ ಜುಹುದಲ್ಲೇ ಇದ್ದರು. ಪಾಲಕರು ಹಾಗೂ ಸಹೋದರಿ ಜತೆ ಅವರು ವಾಸವಾಗಿದ್ದರು. ಹಲವು ಚಿತ್ರಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಫ್ರೆಡ್ಡಿ’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ‘ಶೆಹ್ಜಾದಾ’ ಸಿನಿಮಾ ಫೆಬ್ರವರಿ 10ರಂದು ರಿಲೀಸ್ ಆಗುತ್ತಿದೆ. ತೆಲುಗಿನ ‘ಅಲಾ ವೈಕುಂಟ ಪುರಮುಲೋ’ ಚಿತ್ರದ ರಿಮೇಕ್ ಇದಾಗಿದೆ. ‘ಆಶಿಕಿ 3’ ಚಿತ್ರಕ್ಕೂ ಕಾರ್ತಿಕ್ ಹೀರೋ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ