
ನಟ ಶಾಹಿದ್ ಕಪೂರ್ ಮತ್ತು ನಟಿ ಕರೀನಾ ಕಪೂರ್ (Kareena Kapoor Khan) ಅವರ ಲವ್ ಸ್ಟೋರಿ ಎಲ್ಲರಿಗೂ ಗೊತ್ತಿರುವಂಥದ್ದು. ಒಂದು ಕಾಲದಲ್ಲಿ ಅವರು ಪ್ರೀತಿಯಲ್ಲಿ ಮುಳುಗಿದ್ದರು. ಜೊತೆಯಾಗಿ ನಟಿಸಿದ ‘ಜಬ್ ವಿ ಮೆಟ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಅವರ ನಡುವೆ ಬಿರುಕು ಮೂಡಿತು. ಬಳಿಕ ಅವರಿಬ್ಬರು ಬ್ರೇಕಪ್ ಮಾಡಿಕೊಂಡರು. ಅದೆಲ್ಲ ಹಳೇ ಕಥೆ. ಹೊಸ ವಿಷಯ ಏನೆಂದರೆ, ಈಗ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅವರು ಮತ್ತೆ ಭೇಟಿ ಆಗಿದ್ದಾರೆ. ವೇದಿಕೆಯಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದಾರೆ. ಅವರಿಬ್ಬರನ್ನು ಒಟ್ಟಿಗೆ ನೋಡಿದ್ದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ.
ಬ್ರೇಕಪ್ ಬಳಿಕ ಕರೀನಾ ಕಪೂರ್ ಅವರು ಸೈಫ್ ಅಲಿ ಖಾನ್ ಜೊತೆ ಮದುವೆ ಆದರು. ಹಾಗೆಯೇ, ಶಾಹಿದ್ ಕಪೂರ್ ಅವರು ಮೀರಾ ರಜಪೂರ್ ಜೊತೆ ದಾಂಪತ್ಯ ಜೀವನ ಆರಂಭಿಸಿದರು. ಆ ಮೂಲಕ ಕರೀನಾ ಮತ್ತು ಶಾಹಿದ್ ಕಪೂರ್ ಬದುಕು ಬೇರೆ ಬೇರೆ ದಾರಿಯಲ್ಲಿ ಸಾಗಿತು. ಹಾಗಿದ್ದರೂ ಕೂಡ ಅವರಿಬ್ಬರ ನಡುವೆ ಸ್ನೇಹ ಹಾಗೆಯೇ ಇದೆ. ಅದಕ್ಕೆ ಸಾಕ್ಷಿ ಈ ಹೊಸ ಘಟನೆ.
ಐಫಾ ಸಮಾರಂಭದ ಸುದ್ದಿಗೋಷ್ಠಿಯಲ್ಲಿ ಕರೀನಾ ಕಪೂರ್ ಖಾನ್ ಮತ್ತು ಶಾಹಿದ್ ಕಪೂರ್ ಅವರು ವೇದಿಕೆ ಹಂಚಿಕೊಂಡಿದ್ದಾರೆ. ವೇದಿಕೆಗೆ ಬಂದಾಗ ಇಬ್ಬರೂ ತಬ್ಬಿಕೊಂಡಿದ್ದಾರೆ. ಖುಷಿ ಖುಷಿಯಿಂದ ಮಾತನಾಡುತ್ತಾ ಎಲ್ಲರ ಕಣ್ಣು ಕುಕ್ಕಿದ್ದಾರೆ. ಮಾಜಿ ಪ್ರೇಮಿಗಳು ಹೀಗೆ ಕಾಣಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಬ್ರೇಕಪ್ ಬಳಿಕ ಒಬ್ಬರನ್ನೊಬ್ಬರು ಅವಾಯ್ಡ್ ಮಾಡಿಕೊಂಡು ತಿರುಗುತ್ತಿದ್ದ ಅವರು ಈಗ ಸಹಜ ಜೀವನಕ್ಕೆ ಮರಳಿದ್ದಾರೆ.
ಈ ಘಟನೆಯ ಬಗ್ಗೆ ಶಾಹಿದ್ ಕಪೂರ್ ಅವರಿಗೆ ಪ್ರಶ್ನೆ ಕೇಳಲಾಯಿತು. ಬಹಳ ದಿನಗಳ ನಂತರ ಕರೀನಾ ಅವರನ್ನು ಭೇಟಿಯಾಗಿದ್ದು ಹೇಗನಿಸಿತು ಎಂದು ಕೇಳಿದ್ದಕ್ಕೆ ಶಾಹಿದ್ ಉತ್ತರ ನೀಡಿದ್ದಾರೆ. ‘ನಮಗೆ ಇದೆಲ್ಲ ಹೊಸದೇನೂ ಅಲ್ಲ. ಇಂದು ವೇದಿಕೆ ಮೇಲೆ ಭೇಟಿ ಆಗಿದ್ದೇವೆ ಅಷ್ಟೇ. ನಾವು ಆಗಾಗ ಅಲ್ಲಿ ಇಲ್ಲಿ ಭೇಟಿ ಆಗುತ್ತಲೇ ಇರುತ್ತೇವೆ. ನಮಗೆ ಅದು ತುಂಬ ಸಹಜ. ಜನರಿಗೆ ಖುಷಿ ಆಗಿದ್ದರೆ ನಮಗೂ ಖುಷಿ’ ಎಂದು ಶಾಹಿದ್ ಕಪೂರ್ ಹೇಳಿದ್ದಾರೆ.
ಇದನ್ನೂ ಓದಿ: ಹೇಗಿದೆ ನೋಡಿ ಕರೀನಾ ಕಪೂರ್ ಖಾನ್ ಐಷಾರಾಮಿ ಜೀವನ
ಈ ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. 2024ರಲ್ಲಿ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಅವರು ಒಂದು ಸಮಾರಂಭದಲ್ಲಿ ಮುಖಾಮುಖಿ ಆಗುವ ಸಂದರ್ಭ ಬಂದಿತ್ತು. ಆಗ ಕರೀನಾ ಅವರು ಶಾಹಿದ್ ಕಪೂರ್ ಅವರನ್ನು ಬಿಟ್ಟು ಇನ್ನುಳಿದವರನ್ನು ಮಾತನಾಡಿಸಿ ಮುಂದೆ ಸಾಗಿದ್ದರು. ಈಗ ಆ ಘಟನೆಯನ್ನು ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಈಗ ಇಬ್ಬರ ನಡುವಿನ ಮುನಿಸು ಅಂತ್ಯವಾಗಿದೆ ಎಂಬುದೇ ಖುಷಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.