ಈಗಲೇ ಸಿಕ್ಕಿದೆ ‘ಶೈತಾನ್’ ಅಬ್ಬರಿಸುವ ಸೂಚನೆ; ಜೋರಾಗಿದೆ ಅಡ್ವಾನ್ಸ್ ಬುಕಿಂಗ್
ಟ್ರೇಲರ್ ಬಿಡುಗಡೆ ಆದ ಬಳಿಕ ‘ಶೈತಾನ್’ ಸಿನಿಮಾದ ಹೈಪ್ ಹೆಚ್ಚಾಯಿತು. ಈಗ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 8ರಂದು ತೆರೆಕಾಣಲಿರುವ ಈ ಸಿನಿಮಾದಲ್ಲಿ ಹಾರರ್ ಕಹಾನಿ ಇದೆ. ಅಜಯ್ ದೇವಗನ್, ಆರ್. ಮಾಧವನ್, ಜ್ಯೋತಿಕಾ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ‘ಶೈತಾನ್’ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು ಸಿನಿಪ್ರಿಯರು ಕಾದಿದ್ದಾರೆ.
ಜನಪ್ರಿಯ ಕಲಾವಿದರಾದ ಆರ್. ಮಾಧವನ್, ಅಜಯ್ ದೇವಗನ್, ಜ್ಯೋತಿಕಾ ಅವರು ನಟಿಸಿರುವ ‘ಶೈತಾನ್’ (Shaitaan) ಸಿನಿಮಾದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಟ್ರೇಲರ್ (Shaitaan Movie Trailer) ಬಿಡುಗಡೆ ಆಗಿತ್ತು. ಹಾರರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅಡ್ವಾನ್ಸ್ ಟಿಕೆಟ್ ಬುಕಿಂಗ್ನಲ್ಲಿ (Shaitaan Ticket Booking) ಪಾಸಿಟಿವ್ ಬೆಳವಣಿಗೆ ಕಾಣಿಸಿದೆ. ಮಾರ್ಚ್ 8ರಂದು ‘ಶೈತಾನ್’ ಬಿಡುಗಡೆ ಆಗಲಿದೆ. ಈಗಾಗಲೇ 7 ಸಾವಿರಕ್ಕೂ ಅಧಿಕ ಟಿಕೆಟ್ಗಳು ಬುಕ್ ಆಗಿವೆ.
ಮೊದಲ ದಿನ ಸಿನಿಮಾ ಉತ್ತಮ ಓಪನಿಂಗ್ ಪಡೆದುಕೊಂಡರೆ ನಂತರದ ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ಗೆ ತುಂಬ ಅನುಕೂಲ ಆಗಲಿದೆ. ಈ ವಿಚಾರದಲ್ಲಿ ‘ಶೈತಾನ್’ ಸಿನಿಮಾಗೆ ಪ್ರೇಕ್ಷಕರಿಂದ ಪ್ರೋತ್ಸಾಹ ಸಿಗುತ್ತಿದೆ. ಬಿಡುಗಡೆಗಿಂತ ಮೂರು ದಿನ ಮೊದಲು ಈ ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಮಾಡಲಾಗಿದೆ. ಪಿವಿಆರ್, ಐನಾಕ್ಸ್ ಹಾಗೂ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ಗಳಲ್ಲಿ ಒಂದೇ ದಿನದಲ್ಲಿ 7,700 ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ಇದನ್ನೂ ಓದಿ: ನೋಡುಗರಿಗೆ ನಡುಕ ಹುಟ್ಟಿಸಿದ ‘ಶೈತಾನ್’ ಟ್ರೇಲರ್; ಕ್ರೂರಿಯಾದ ಮಾಧವನ್
ವಿಕಾಸ್ ಬಹ್ಲ್ ಅವರು ‘ಶೈತಾನ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಆರಂಭದಲ್ಲಿ ಈ ಸಿನಿಮಾ ಮೇಲೆ ಇಷ್ಟೆಲ್ಲ ಕ್ರೇಜ್ ಇರಲಿಲ್ಲ. ಆದರೆ ಟ್ರೇಲರ್ ಬಿಡುಗಡೆ ಆದ ಬಳಿಕ ಹೈಪ್ ಹೆಚ್ಚಾಗಿದೆ. ಯಾಕೆಂದರೆ, ಈ ಸಿನಿಮಾದ ಟ್ರೇಲರ್ ಅಷ್ಟು ಭಯಂಕರವಾಗಿದೆ. ವಶೀಕರಣದ ಕುರಿತ ಕಥಾಹಂದರ ಈ ಸಿನಿಮಾದಲ್ಲಿ ಇದೆ. ಟ್ರೇಲರ್ ನೋಡಿದ ಪ್ರೇಕ್ಷಕರು ಒಂದು ಕ್ಷಣ ಹೆದರಿಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ಹಾರರ್ ಫೀಲ್ ಪಡೆಯಲು ಉತ್ಸುಕರಾಗಿರುವ ಸಿನಿಪ್ರಿಯರು ‘ಶೈತಾನ್’ ಚಿತ್ರದ ಟಿಕೆಟ್ಗಳನ್ನು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ನನಗೂ ದೆವ್ವದ ಅನುಭವ ಆಗಿದೆ, ಆದರೆ ನಾನು ಮಾತಾಡಲ್ಲ’: ಅಜಯ್ ದೇವಗನ್
ಅಡ್ವಾನ್ಸ್ ಟಿಕೆಟ್ ಬುಕಿಂಗ್ ಟ್ರೆಂಡ್ ಇದೇ ರೀತಿ ಮುಂದುವರಿದರೆ ಮೊದಲ ದಿನ ‘ಶೈತಾನ್’ ಸಿನಿಮಾ 10 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಬಿಡುಗಡೆ ಆದ ಬಳಿಕ ಬಾಯಿ ಮಾತಿನ ಪ್ರಚಾರ ಉತ್ತಮವಾಗಿ ಸಿಕ್ಕರೆ ಚಿತ್ರಕ್ಕೆ ಅನುಕೂಲ ಆಗಲಿದೆ. ಅಜಯ್ ದೇವಗನ್ ಹಾಗೂ ಜ್ಯೋತಿಕಾ ಅವರು ಈ ಸಿನಿಮಾದಲ್ಲಿ ದಂಪತಿಯಾಗಿ ನಟಿಸಿದ್ದಾರೆ. ಮಗಳ ಪಾತ್ರದಲ್ಲಿ ಜಾನಕಿ ಬೋಡಿವಾಲಾ ಅಭಿನಯಿಸಿದ್ದಾರೆ. ಜಾನಕಿ ಬೋಡಿವಾಲಾ ಅವರಿಗೆ ಈ ಸಿನಿಮಾದಿಂದ ಸಖತ್ ಜನಪ್ರಿಯತೆ ಸಿಗುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.