ಬಾಲಿವುಡ್ನ ಖ್ಯಾತ ನಟ ಶ್ರೇಯಸ್ ತಲ್ಪಡೆ (Shreyas Talpade) ಅವರಿಗೆ ಹೃದಯಾಘಾತ (Heart Attack) ಆಗಿರುವ ಸುದ್ದಿ ತಿಳಿದು ಅಭಿಮಾನಿಗಳಿಗೆ ಆತಂಕ ಆಗಿದೆ. ಹಲವು ಸಿನಿಮಾಗಳಲ್ಲಿ ನಟಿಸಿ ಜನರನ್ನು ರಂಜಿಸಿರುವ ಶ್ರೇಯಸ್ ತಲ್ಪಡೆ ಅವರಿಗೆ ಗುರುವಾರ (ಡಿ.14) ಸಂಜೆ ಹಾರ್ಟ್ ಅಟ್ಯಾಕ್ ಆಯಿತು. ಆ ಕುರಿತು ನಟ ಬಾಬಿ ಡಿಯೋಲ್ ಅವರು ‘ಬಾಲಿವುಡ್ ಹಂಗಾಮಾ’ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ‘ಶ್ರೇಯಸ್ ತಲ್ಪಡೆ ಹೃದಯ 10 ನಿಮಿಷ ನಿಂತು ಹೋಗಿತ್ತು’ ಎಂದು ಬಾಬಿ ಡಿಯೋಲ್ (Bobby Deol) ಅವರು ಹೇಳಿರುವುದಾಗಿ ವರದಿ ಆಗಿದೆ.
‘ಅವರ ಪತ್ನಿಯ ಬಳಿ ಈಗಷ್ಟೇ ಮಾತನಾಡಿದೆ. ಅವರು ತುಂಬ ನೊಂದಿದ್ದಾರೆ. ಶ್ರೇಯಸ್ ತಲ್ಪಡೆ ಅವರ ಹೃದಯ 10 ನಿಮಿಷ ನಿಂತು ಹೋಗಿತ್ತು. ಈಗ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ’ ಎಂದು ಬಾಬಿ ಡಿಯೋಲ್ ಹೇಳಿದ್ದಾರೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ. ಶ್ರೇಯಸ್ ತಲ್ಪಡೆ ಅವರ ಹೆಲ್ತ್ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: 8 ತಿಂಗಳ ಗರ್ಭಿಣಿ, ಕಿರುತೆರೆ ನಟಿ ಹೃದಯಾಘಾತದಿಂದ ನಿಧನ; ಮಗು ಪರಿಸ್ಥಿತಿ ಏನು?
ಶ್ರೇಯಸ್ ತಲ್ಪಡೆ ಅವರಿಗೆ ಬಾಲಿವುಡ್ ಮತ್ತು ಮರಾಠಿ ಚಿತ್ರರಂಗದಲ್ಲಿ ಬೇಡಿಕೆ ಇದೆ. ಈಗ ಅವರಿಗೆ 47 ವರ್ಷ ವಯಸ್ಸು. 2002ರಿಂದಲೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಹೆಚ್ಚು ಸಿನಿಮಾ ಮಾಡಿಲ್ಲ. ಸದ್ಯಕ್ಕೆ ಕಂಗನಾ ರಣಾವತ್ ನಿರ್ದೇಶನದ ‘ಎಮರ್ಜಿನ್ಸಿ’ ಸಿನಿಮಾದಲ್ಲಿ ಶ್ರೇಯಸ್ ತಲ್ಪಡೆ ನಟಿಸುತ್ತಿದ್ದಾರೆ. ಇದರಲ್ಲಿ ಅವರು ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: 10 ವರ್ಷಗಳಲ್ಲಿ ಹೃದಯಾಘಾತ ಶೇ 22 ರಷ್ಟು ಹೆಚ್ಚಳ: ಡಾ ಸಿಎನ್ ಮಂಜುನಾಥ್ ಕೊಟ್ಟ ಕಾರಣ ಇಲ್ಲಿದೆ
ಡಬ್ಬಿಂಗ್ ಕಲಾವಿದನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ‘ಪುಷ್ಪ’ ಚಿತ್ರದ ಹಿಂದಿ ವರ್ಷನ್ನಲ್ಲಿ ಅಲ್ಲು ಅರ್ಜುನ್ ಪಾತ್ರಕ್ಕೆ ಧ್ವನಿ ನೀಡುವ ಮೂಲಕ ಶ್ರೇಯಸ್ ತಲ್ಪಡೆ ಅವರು ಎಲ್ಲರ ಮೆಚ್ಚುಗೆ ಗಳಿಸಿದರು. ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದಲ್ಲೂ ಶ್ರೇಯಸ್ ತಲ್ಪಡೆ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಗಿಸಿ ವಾಪಸ್ ಬರುವಾಗ ಅವರಿಗೆ ಹೃದಯಾಘಾತ ಆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.