ಕೊವಿಡ್ ಲಸಿಕೆಯಿಂದ ಶ್ರೇಯಸ್ ತಲ್ಪಡೆಗೆ ಹೃದಯಾಘಾತ ಆಯ್ತಾ? ನಟನಿಗೂ ಇದೆ ಅನುಮಾನ
ಎಲ್ಲ ವಿಚಾರದಲ್ಲಿಯೂ ನಟ ಶ್ರೇಯಸ್ ತಲ್ಪಡೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಆದರೂ ಕೂಡ ತಮಗೆ ಹೃದಯಾಘಾತ ಆಗಿದ್ದರ ಬಗ್ಗೆ ಅವರಿಗೆ ಅನುಮಾನ ಶುರುವಾಗಿದೆ. ಕೊವಿಡ್-19 ಲಸಿಕೆಯ ಬಗ್ಗೆ ಅವರು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಮಾಧ್ಯಮವೊಂದಕ್ಕೆ ಅವರು ಸಂದರ್ಶನ ನೀಡಿದ್ದು, ಒಂದಷ್ಟು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ.
ಕೊವಿಡ್ 19 ಲಸಿಕೆಯ ಅಡ್ಡ ಪರಿಣಾಮಗಳ (Corona Vaccine Side Effect) ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಕೆಲವು ಸೆಲೆಬ್ರಿಟಿಗಳು ದಿಢೀರ್ ಸಾವಿಗೆ ಇದು ಕಾರಣ ಆಗಿರಬಹುದೇ ಎಂದು ಕೂಡ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾಕತಾಳೀಯ ಎಂಬಂತೆ ಒಂದಷ್ಟು ಸೆಲೆಬ್ರಿಟಿಗಳಿಗೆ ಹೃದಯಘಾತ (Heart Attack) ಆಯಿತು. ಅಂಥವರ ಪೈಕಿ ಖ್ಯಾತ ನಟ ಶ್ರೇಯಸ್ ತಲ್ಪಡೆ ಕೂಡ ಒಬ್ಬರು. ಹೃದಯಾಘಾತದ ಬಳಿಕ ಅವರಿಗೆ ಚಿಕಿತ್ಸೆ ನೀಡಲಾಯಿತು. ಅದೃಷ್ಟವಶಾತ್ ಅವರು ಬದುಕುಳಿದರು. ಆದರೆ ಆ ಹೃದಯಾಘಾತಕ್ಕೆ ಲಸಿಕೆ ಕಾರಣ ಆಗಿರಬಹುದು ಎಂದು ಸ್ವತಃ ಶ್ರೇಯಸ್ ತಲ್ಪಡೆ (Shreyas Talpade) ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಶ್ರೇಯಸ್ ತಲ್ಪಡೆ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ. ‘ನಾನು ಧೂಮಪಾನ ಮಾಡುವುದಿಲ್ಲ. ರೆಗ್ಯುಲರ್ ಆಗಿ ಮದ್ಯಪಾನ ಕೂಡ ಮಾಡಲ್ಲ. ತಿಂಗಳಿಗೆ ಒಮ್ಮೆ ಕುಡಿಯುತ್ತೇನೆ ಅಷ್ಟೇ. ತಂಬಾಕು ಸೇವಿಸಲ್ಲ. ನನ್ನ ಕೊಲೆಸ್ಟ್ರಾಲ್ ಪ್ರಮಾಣ ಸ್ವಲ್ಪ ಜಾಸ್ತಿ ಇತ್ತು ಎಂಬುದು ನಿಜ. ಆದರೆ ಈ ದಿನಗಳಲ್ಲಿ ಅದನ್ನು ನಾರ್ಮಲ್ ಅಂತಾರೆ. ಅದಕ್ಕೆ ನಾನು ಔಷದಿ ಪಡೆಯುತ್ತಿದ್ದೆ. ಅದು ಗಣನೀಯವಾಗಿ ಕಡಿಮೆ ಆಗಿದೆ. ಮಧುಮೇಹ ಇಲ್ಲ, ಅಧಿಕ ರಕ್ತದೊತ್ತಡ ಇಲ್ಲ. ಎಲ್ಲವೂ ಸರಿಯಾಗಿದೆ ಎಂದರೆ ಹೃದಯಾಘಾತಕ್ಕೆ ಕಾರಣ ಏನಿರಬಹುದು’ ಎಂದು ಶ್ರೇಯಸ್ ತಲ್ಪಡೆ ಕೇಳಿದ್ದಾರೆ.
‘ನಾನು ಒಂದು ಥಿಯೆರಿ ಹುಟ್ಟುಹಾಕಲ್ಲ. ಕೊವಿಡ್-19 ಲಸಿಕೆ ಪಡೆದ ನಂತರವೇ ನನಗೆ ಸುಸ್ತು ಶುರುವಾಯಿತು. ಅದರಲ್ಲಿ ಸ್ವಲ್ಪ ಪ್ರಮಾಣದ ಸತ್ಯ ಇರಬಹುದು. ಕೊವಿಡ್ ಇರಬಹುದು ಅಥವಾ ಅದರ ಲಸಿಕೆ ಇರಬಹುದು. ಆ ಬಳಿಕವೇ ಇದೆಲ್ಲ ಶುರುವಾಗಿದ್ದು. ದುರದೃಷ್ಟಕರ ಸಂಗತಿ ಏನೆಂದರೆ, ನಾವು ದೇಹದ ಒಳಗೆ ಏನನ್ನು ತೆಗೆದುಕೊಂಡಿದ್ದೇವೆ ಎಂಬುದು ನಮಗೆ ತಿಳಿದಿಲ್ಲ. ಕಂಪನಿಯನ್ನು ನಂಬಿದೆವು. ಕೊವಿಡ್-19 ಬರುವುದಕ್ಕೂ ಮುನ್ನ ನಾನು ಈ ರೀತಿಯ ಘಟನೆಗಳ ಬಗ್ಗೆ ಕೇಳಿರಲಿಲ್ಲ’ ಎಂದಿದ್ದಾರೆ ಶ್ರೇಯಸ್ ತಲ್ಪಡೆ.
ಇದನ್ನೂ ಓದಿ: ಈ ಸೆಲೆಬ್ರಿಟಿಗಳ ಸಾವಿಗೆ ಕೋವಿಶೀಲ್ಡ್ ಅಡ್ಡಪರಿಣಾಮ ಕಾರಣ? ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ ಚರ್ಚೆ
ಕೊವಿಡ್-19 ಲಸಿಕೆಯು ಮನುಷ್ಯರ ಮೇಲೆ ಉಂಟು ಮಾಡುವ ದೀರ್ಘಾವಧಿ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು ಶ್ರೇಯಸ್ ತಲ್ಪಡೆ ಬಯಸಿದ್ದಾರೆ. ಆದರೆ ಅಂತಿಮ ನಿರ್ಧಾರಕ್ಕೆ ಬರುವುದಕ್ಕೂ ಮುನ್ನ ಸೂಕ್ತ ಸಂಶೋಧನೆ ಆಗಬೇಕು ಎಂದು ಅವರು ಹೇಳಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ನಿಧನದ ಬಗ್ಗೆ ಕೂಡ ಅಭಿಮಾನಿಗಳು ಕೆಲವು ಪ್ರಶ್ನೆಗಳನ್ನು ಈಗ ಎತ್ತುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.