ಸಿದ್ಧಾರ್ಥ್​ ಶುಕ್ಲಾ ಜೊತೆ ಕೆಲಸ ಮಾಡಿದ್ದ ಸಂಜನಾ ಗಲ್ರಾನಿ; ಜೀವನ ಇಷ್ಟೇನಾ ಎಂದ ನಟಿ

ಸಿದ್ಧಾರ್ಥ್​ ಶುಕ್ಲಾ ಒಬ್ಬ ಜಂಟಲ್​ಮ್ಯಾನ್​ ಆಗಿದ್ದರು. ತುಂಬ ಮೃದುವಾಗಿ ಮಾತನಾಡುತ್ತಿದ್ದರು. ಹೆಣ್ಣುಮಕ್ಕಳಿಗೆ ಗೌರವ ಕೊಡುತ್ತಿದ್ದರು. ಅವರನ್ನು ನೋಡಿದರೆ ನೋಡುತ್ತಲೇ ಇರಬೇಕು ಎನಿಸುತ್ತಿತ್ತು ಎಂದು ಸಂಜನಾ ಹೇಳಿದ್ದಾರೆ.

ಸಿದ್ಧಾರ್ಥ್​ ಶುಕ್ಲಾ ಜೊತೆ ಕೆಲಸ ಮಾಡಿದ್ದ ಸಂಜನಾ ಗಲ್ರಾನಿ; ಜೀವನ ಇಷ್ಟೇನಾ ಎಂದ ನಟಿ
ಸಿದ್ಧಾರ್ಥ್​ ಶುಕ್ಲಾ, ಸಂಜನಾ ಗಲ್ರಾನಿ

ಕಿರುತೆರೆಯ ಖ್ಯಾತ ನಟ, ಹಿಂದಿ ಬಿಗ್​ ಬಾಸ್​ ಸೀಸನ್​ 13ರ ವಿನ್ನರ್​ ಸಿದ್ಧಾರ್ಥ್​ ಶುಕ್ಲಾ ಹೃದಯಾಘಾತದಿಂದ ನಿಧನರಾದ ಸುದ್ದಿ ಎಲ್ಲರಿಗೂ ಶಾಕ್​ ನೀಡಿದೆ. ‘ಮುಜ್ಸೆ ಶಾದಿ ಕರೋಗೆ’ ಕಾರ್ಯಕ್ರಮದಲ್ಲಿ ಸಿದ್ಧಾರ್ಥ್​ ಮತ್ತು ಸಂಜನಾ ಗಲ್ರಾನಿ ಜೊತೆಯಾಗಿ ಕೆಲಸ ಮಾಡಿದ್ದರು. ಹಾಗಾಗಿ ಸಿದ್ಧಾರ್ಥ್​ ನಿಧನದ ಸುದ್ದಿ ಕೇಳಿ ಸಂಜನಾಗೆ ಹೆಚ್ಚು ನೋವಾಗಿದೆ. ಈ ಬಗ್ಗೆ ಅವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಸಿದ್ಧಾರ್ಥ್​ ಶುಕ್ಲಾ ನಿಧನರಾದ ಸುದ್ದಿ ಈಗತಾನೇ ತಿಳಿಯಿತು. ಮೊನ್ನೆಯಷ್ಟೇ ಅವರ ಹೊಸ ಹಾಡು ಬಿಡುಗಡೆ ಆಗಿತ್ತು. ಅದನ್ನು ನೋಡಿ ತುಂಬ ಖುಷಿಪಟ್ಟಿದ್ದೆ. ನಾನು ‘ಮುಜ್ಸೆ ಶಾದಿ ಕರೋಗೆ’ ಶೋನಲ್ಲಿ ಭಾಗವಹಿಸಿದ್ದೆ. ಆ ಶೋನಲ್ಲಿ ಅವರೂ ಭಾಗಿ ಆಗಿದ್ದರು. ಇಂದು ಅವರು ಇಲ್ಲ ಎಂಬುದು ಶಾಕಿಂಗ್​ ಅನಿಸುತ್ತಿದೆ. ಬದುಕಿರುವವರು ಯಾಕಿಷ್ಟು ಜಗಳ ಮಾಡುತ್ತಾರೆ? ಯಾಕೆ ಅಹಂಕಾರದಲ್ಲಿ ಬದುಕುತ್ತಾರೆ? 40 ವರ್ಷದ ಸಿದ್ಧಾರ್ಥ್​ ಇಂದು ನಮ್ಮೊಂದಿಗೆ ಇಲ್ಲ ಎಂದರೆ ಜೀವನಕ್ಕೆ ಏನು ಅರ್ಥ?’ ಎಂದು ಸಂಜನಾ ಹೇಳಿದ್ದಾರೆ.

‘ಇರುವ ಜೀವನ ತುಂಬ ಚಿಕ್ಕದು. ಅದರಲ್ಲಿ ನೆಗೆಟಿವಿಟಿ ಯಾಕೆ ಬೇಕು? ಇಂದು ಇದ್ದವರು ನಾಳೆ ಇರುತ್ತಾರೋ ಇಲ್ಲವೋ ಎಂಬುದು ಗ್ಯಾರಂಟಿಯಾಗಿ ಯಾರೂ ಹೇಳಲು ಸಾಧ್ಯವಿಲ್ಲ. ಇರುವಷ್ಟು ದಿನ ಒಳ್ಳೆಯದು ಮಾಡಬೇಕು. ಈ ದುರ್ಘಟನೆ ನೋಡಿದರೆ ಜೀವನವೇ ಒಂದು ಮೋಸ ಎನಿಸುತ್ತದೆ. ಈಗತಾನೇ ಅವರು ಯಶಸ್ಸಿನ ಉತ್ತುಂಗಕ್ಕೆ ಏರಿದ್ದರು’ ಎಂದಿದ್ದಾರೆ ಸಂಜನಾ.

‘ನಾನು ಹಿಂದಿ ಕಿರುತೆರೆಯನ್ನು ಜಾಸ್ತಿ ನೋಡುತ್ತೇನೆ. ಸಿದ್ಧಾರ್ಥ್​ ಶುಕ್ಲಾ ಒಬ್ಬ ಜಂಟಲ್​ಮ್ಯಾನ್​ ಆಗಿದ್ದರು. ತುಂಬ ಮೃದುವಾಗಿ ಮಾತನಾಡುತ್ತಿದ್ದರು. ಹೆಣ್ಣುಮಕ್ಕಳಿಗೆ ಗೌರವ ಕೊಡುತ್ತಿದ್ದರು. ಅವರನ್ನು ನೋಡಿದರೆ ನೋಡುತ್ತಲೇ ಇರಬೇಕು ಎನಿಸುತ್ತಿತ್ತು. ಮನೆಗೆ ಬಂದು ನಾನು ಅವರ ಬಗ್ಗೆಯೇ ಮಾತನಾಡುತ್ತಿದ್ದೆ. ಕಿರುತೆರೆಗಿಂತಲೂ ಹೆಚ್ಚಾಗಿ ಅವರು ಸಿನಿಮಾದಲ್ಲಿ ಇರಬೇಕಿತ್ತು. ನಮ್ಮ ಮನೆಯಲ್ಲಿ ಎಲ್ಲರಿಗೂ ಅವರೆಂದರೆ ತುಂಬ ಇಷ್ಟ’ ಎಂದು ಸಂಜನಾ ಹೇಳಿದ್ದಾರೆ.

‘ಸಿದ್ಧಾರ್ಥ್ ಜೊತೆ ಕೆಲಸ ಮಾಡಿದ ಮೇಲೆ ಅವರು ನನಗೆ ಇನ್ನಷ್ಟು ಇಷ್ಟ ಆಗಿದ್ದರು. ಕಳೆದ ವರ್ಷ ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದರು. ಈ ವರ್ಷ ಸಿದ್ಧಾರ್ಥ್​ ಶುಕ್ಲಾ ಹೋದರು. ಇದೇನಾ ಜೀವನ ಎನಿಸುತ್ತದೆ. ಇದಷ್ಟು ದಿನ ಚೆನ್ನಾಗಿ ಇರೋಣ. ಒಬ್ಬರಿಗೊಬ್ಬರು ಸಹಾಯ ಮಾಡೋಣ. ಇನ್ನೊಬ್ಬರ ನೋವನ್ನು ಕಡಿಮೆ ಮಾಡೋಕೆ ಪ್ರಯತ್ನಿಸೋಣ. ಬದುಕು ಚಿಕ್ಕದಾದರೂ ಅದಕ್ಕೆ ಅರ್ಥ ಇರಬೇಕು. ಬೇರೆಯವರಿಗೋಸ್ಕರ ನಾವು ಏನು ಮಾಡುತ್ತೇವೋ ಅದೇ ಹೆಚ್ಚು ಕಾಲ ಉಳಿಯುವಂಥದ್ದು. ದುರಹಂಕಾರ ಬಿಡಿ’ ಎಂದು ಸಂಜನಾ ಹೇಳಿದ್ದಾರೆ.

ಇದನ್ನೂ ಓದಿ:

Sidharth Shukla Death: ಬಿಗ್​ ಬಾಸ್​ ವಿನ್ನರ್ ಸಿದ್ಧಾರ್ಥ್​ ಶುಕ್ಲಾ ಹೃದಯಾಘಾತದಿಂದ ನಿಧನ​

ಮಕ್ಕಳ ಜತೆ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಸಂಜನಾ ಗಲ್ರಾನಿ

Click on your DTH Provider to Add TV9 Kannada