
2014ರಲ್ಲಿ ಬಿಡುಗಡೆ ಆದ ‘ಪಿಕೆ’ ಸಿನಿಮಾ ಸೂಪರ್ ಹಿಟ್ ಆಯಿತು. ಆದರೆ ಸಾಕಷ್ಟು ವಿವಾದಗಳನ್ನು ಕೂಡ ಮಾಡಿಕೊಂಡಿತು. ಈ ಚಿತ್ರದಲ್ಲಿ ಲವ್ ಜಿಹಾದ್ (Love Jihad) ಇದೆ ಎಂದು ಕೆಲವರು ಆರೋಪ ಮಾಡಿದ್ದರು. ಆ ಆರೋಪಗಳಿಗೆ ಈಗ ನಟ ಆಮಿರ್ ಖಾನ್ (Aamir Khan) ಉತ್ತರ ನೀಡಿದ್ದಾರೆ. ಸದ್ಯ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಈ ನಡುವೆ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಲವ್ ಜಿಹಾದ್ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ತಮ್ಮದೇ ಕುಟುಂಬದ ಉದಾಹರಣೆಯನ್ನು ಅವರು ತೆಗೆದುಕೊಂಡಿದ್ದಾರೆ.
‘ಎರಡು ಪ್ರತ್ಯೇಕ ಧರ್ಮಗಳ ಜನರ ನಡುವೆ ಪ್ರೀತಿ ಮೂಡಿದಾಗ, ಅದು ಯಾವಾಗಲೂ ಲವ್ ಜಿಹಾದ್ ಆಗಿರುವುದಿಲ್ಲ. ಇಬ್ಬರು ಪರಸ್ಪರ ಪ್ರೀತಿಸುತ್ತಾರೆ. ಅದು ಮನುಷ್ಯತ್ವದ ಬಂಧ. ಅದು ಧರ್ಮವನ್ನೂ ಮೀರಿದ್ದು’ ಎಂದು ಆಮಿರ್ ಖಾನ್ ಹೇಳಿದ್ದಾರೆ. ಆಮಿರ್ ಖಾನ್ ಅಕ್ಕ ನಿಖತ್ ಖಾನ್ ಅವರು ಸಂತೋಷ್ ಹೆಗಡೆ ಜೊತೆ ಮದುವೆ ಆದರು. ತಂಗಿ ಫರ್ಹತ್ ಖಾನ್ ಅವರು ರಾಜೀವ್ ದತ್ತ ಜೊತೆ ಮದುವೆ ಆದರು. ಆಮಿರ್ ಖಾನ್ ಮಗಳು ಇರಾ ಖಾನ್ ಮದುವೆ ನೂಪುರ್ ಶಿಕಾರೆ ಜೊತೆ ನಡೆಯಿತು.
ಆಮಿರ್ ಖಾನ್ ಮದುವೆ ಆಗಿರುವುದು ಕೂಡ ಹಿಂದೂ ಧರ್ಮದವರನ್ನು. ಮೊದಲ ಪತ್ನಿ ರೀನಾ ದತ್ತ, ಎರಡನೇ ಪತ್ನಿ ಕಿರಣ್ ರಾವ್ ಅವರು ಹಿಂದು ಧರ್ಮದವರು. ಈಗ ಆಮಿರ್ ಖಾನ್ ಅವರಿಗೆ ಬೆಂಗಳೂರು ಮೂಲದ ಗೌರಿ ಎಂಬ ಮಹಿಳೆ ಜೊತೆ ಪ್ರೀತಿ ಚಿಗುರಿದೆ. ಗೌರಿ ಕೂಡ ಹಿಂದು ಧರ್ಮದವರು.
‘ಪಿಕೆ’ ಸಿನಿಮಾದಲ್ಲಿ ಹಿಂದೂ ಧರ್ಮಕ್ಕೆ ಅವಮಾನ ಮಾಡಲಾಗಿತ್ತು ಎಂಬ ಆರೋಪವನ್ನು ಕೂಡ ಆಮಿರ್ ಖಾನ್ ತಳ್ಳಿ ಹಾಕಿದ್ದಾರೆ. ‘ನಾವು ಯಾವುದೇ ಧರ್ಮದ ವಿರುದ್ಧ ಇಲ್ಲ. ಎಲ್ಲ ಧರ್ಮದವರನ್ನು ನಾವು ಗೌರವಿಸುತ್ತೇವೆ. ಹಣ ಕೀಳುವ ಉದ್ದೇಶದಿಂದ ಧರ್ಮವನ್ನು ದುರ್ಬಳಕೆ ಮಾಡಿಕೊಂಡು ಸಾಮಾನ್ಯ ಜನರಿಗೆ ಮೋಸ ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರ ಇರಲಿ ಎಂಬುದನ್ನು ಆ ಸಿನಿಮಾ ಹೇಳುತ್ತೇನೆ. ಅಂಥ ವ್ಯಕ್ತಿಗಳು ನಿಮಗೆ ಎಲ್ಲ ಧರ್ಮದಲ್ಲಿ ಸಿಗುತ್ತಾರೆ. ಅದನ್ನು ತಿಳಿಸುವುದೇ ಸಿನಿಮಾದ ಉದ್ದೇಶ’ ಎಂದಿದ್ದಾರೆ ಆಮಿರ್ ಖಾನ್.
ಇದನ್ನೂ ಓದಿ: ಭಾರತದ ಧ್ವಜ ತೆಗೆಯಬೇಕು: ಆಮಿರ್ ಖಾನ್ಗೆ ಸೂಚನೆ ನೀಡಿದ್ದ ಪಾಕಿಸ್ತಾನ; ನಟ ಮಾಡಿದ್ದೇನು?
ಆಮಿರ್ ಖಾನ್ ನಟಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಜೂನ್ 20ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅನೇಕ ಹೊಸ ಕಲಾವಿದರು ನಟಿಸಿದ್ದಾರೆ. ಆಮಿರ್ ಖಾನ್ಗೆ ಜೋಡಿಯಾಗಿ ಜೆನಿಲಿಯಾ ದೇಶಮುಖ್ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.