ಸಲ್ಮಾನ್-ರಶ್ಮಿಕಾ ಸಿನಿಮಾದಿಂದ 91 ಕೋಟಿ ನಷ್ಟ, ತನಿಖೆಯಿಂದ ಗೊತ್ತಾಯ್ತು ಹಲವು ವಿಷಯ
Salman Khan: ಸಲ್ಮಾನ್ ಖಾನ್ ಸಿನಿಮಾ ಸೋಲುವುದೇ ಇಲ್ಲ ಎಂಬ ಮಾತು ಬಾಲಿವುಡ್ನಲ್ಲಿದೆ. ಆದರೆ ಸಲ್ಮಾನ್ ಹಾಗೂ ರಶ್ಮಿಕಾ ನಟಿಸಿದ್ದ ‘ಸಿಖಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿದ್ದು, ನಿರ್ಮಾಪಕರಿಗೆ 91 ಕೋಟಿ ನಷ್ಟವಾಗಿದೆಯಂತೆ. ಇದೀಗ ಸಿನಿಮಾದ ನಿರ್ಮಾಪಕ ತನಿಖೆಗೆ ಇಳಿದಿದ್ದು, ಸಾಕಷ್ಟು ವಿಷಯಗಳು ಅವರ ಅರಿವಿಗೆ ಬಂದಿವೆ.

ಸಲ್ಮಾನ್ ಖಾನ್ (Salman Khan) ಅನ್ನು ಬಾಕ್ಸ್ ಆಫೀಸ್ಕಾ ಸುಲ್ತಾನ್ ಎಂದು ಕರೆಯಲಾಗುತ್ತದೆ. ಕೆಟ್ಟ ಸಿನಿಮಾ ಮಾಡಿದರೂ ಸಲ್ಮಾನ್ ಖಾನ್ ಇದ್ದರೆ ಸಾಕು ಹಾಕಿದ ಹಣಕ್ಕೆ ಮೋಸವಿಲ್ಲ ಎಂಬ ಮಾತಿದೆ. ಇದೇ ಕಾರಣಕ್ಕೆ ನಿರ್ಮಾಪಕರು ಮೊದಲು ಸಲ್ಮಾನ್ ಖಾನ್ ಡೇಟ್ಸ್ ಪಡೆದುಕೊಂಡು ಆ ಬಳಿಕ ಕತೆ, ಚಿತ್ರಕತೆ, ನಿರ್ದೇಶಕರನ್ನು ಹುಡುಕುತ್ತಾರೆ. ಆದರೆ ಇತ್ತೀಚೆಗೆ ಟ್ರೆಂಡ್ ಬದಲಾಗಿದೆ. ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿದ್ದ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ನಟಿಸಿದ್ದ ‘ಸಿಖಂಧರ್’ ಸಿನಿಮಾ ಭಾರಿ ನಷ್ಟ ಅನುಭವಿಸಿದೆ. ಕಂಗಾಲಾಗಿರುವ ನಿರ್ಮಾಪಕ, ವಿಮೆಗೆ ಅರ್ಜಿ ಹಾಕಿದ್ದಾರೆ.
ಸಲ್ಮಾನ್ ಖಾನ್ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ ಅವರು ‘ಸಿಖಂಧರ್’ ಸಿನಿಮಾ ನಿರ್ಮಾಣ ಮಾಡಿದ್ದರು. ತಮಿಳಿನ ಮುರುಗದಾಸ್ ಅವರು ಸಿನಿಮಾ ನಿರ್ದೇಶನ ಮಾಡಿದ್ದರು. ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾ ಬಿಡುಗಡೆ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ. ಸಲ್ಮಾನ್ ಖಾನ್ ಸಿನಿಮಾ ಇದಾಗಿದ್ದರೂ ಸಹ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು ಕೇವಲ 175 ಕೋಟಿ ರೂಪಾಯಿಗಳು. ಸಲ್ಮಾನ್ ಖಾನ್ರ ಈ ಹಿಂದಿನ ಫ್ಲಾಪ್ ಸಿನಿಮಾಗಳು ಇದಕ್ಕಿಂತಲೂ ಹೆಚ್ಚಿನ ಹಣ ಗಳಿಸಿದ್ದವು.
ಇದೀಗ ನಿರ್ಮಾಪಕ ಸಾಜಿದ್ ನಾಡಿಯಾವಾಲ ‘ಸಿಖಂಧರ್’ ಸಿನಿಮಾದ ಕಲೆಕ್ಷನ್ ಬಗ್ಗೆ ಆಡಿಟ್ ಮಾಡಿಸಿದ್ದು, ಬರೋಬ್ಬರಿ 91 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ವರದಿ ಬಂದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಿನಿಮಾ ಬಿಡುಗಡೆ ಆಗುವ ಹಿಂದಿನ ದಿನವೇ ಆನ್ಲೈನ್ನಲ್ಲಿ ಲೀಕ್ ಆಗಿದ್ದೇ ಭಾರಿ ನಷ್ಟಕ್ಕೆ ಕಾರಣ ಎನ್ನಲಾಗುತ್ತಿದೆ. ಸಿನಿಮಾ ಮಾರ್ಚ್ 30ರಂದು ಬಿಡುಗಡೆ ಆಗಿತ್ತು. ಅದರ ಹಿಂದಿನ ದಿನ ಸಿನಿಮಾದ ಹೈಡೆಫನಿಷನ್ ಪ್ರಿಂಟ್ ತಮಿಳ್ ರಾಕರ್ಸ್, ಮೂವಿ ರೂಲ್ಸ್, ಫಿಲಂಜಿಲ್ಲಾ ಇನ್ನೂ ಕೆಲವು ವೆಬ್ಸೈಟ್ಗಳಲ್ಲಿ ಬಿಡುಗಡೆ ಆಗಿತ್ತು. ಇದರಿಂದಾಗಿ ಕೆಲವು ಪ್ರಮುಖ ಏರಿಯಾಗಳಲ್ಲಿಯೇ ಜನ ಸಿನಿಮಾ ನೋಡಲು ಬರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಅಶ್ಲೀಲ ಸಂಭಾಷಣೆ, ಹದ್ದು ಮೀರಿದ ಗ್ಲಾಮರ್ ಆದರೂ ‘ಯು/ಎ’
ಇದೀಗ ಸಾಜಿದ್ ನಾಡಿಯಾವಾಲ ತಂತ್ರಜ್ಞಾನದ ನೆರವು ಪಡೆದುಕೊಂಡು ‘ಸಿಖಂಧರ್’ ಸಿನಿಮಾ ಆನ್ಲೈನ್ ಮೂಲಕ ಎಷ್ಟು ಬಾರಿ ಡೌನ್ಲೋಡ್ ಆಗಿದೆ ಎಂಬುದನ್ನು ಲೆಕ್ಕ ಹಾಕಿಸುತ್ತಿದ್ದಾರೆ. ಆನ್ಲೈನ್ನಲ್ಲಿ ಲೀಕ್ ಆಗಿರುವ ‘ಸಿಖಂಧರ್’ ಸಿನಿಮಾನಲ್ಲಿ ವಿಎಫ್ಎಕ್ಸ್ ಪಾಲಿಶ್ ಆಗಿಲ್ಲವಂತೆ. ಅಲ್ಲದೆ ಬಿಡುಗಡೆಗೆ ಮುಂಚೆ ಕತ್ತರಿಸಿ ತೆಗೆದಿರುವ ದೃಶ್ಯಗಳು ಸಹ ಇವೆಯಂತೆ. ಅಂದರೆ ಸಿನಿಮಾ ಸಿಬಿಎಫ್ಸಿಗೆ ಹೋಗುವ ಮುಂಚೆಯೇ ಲೀಕ್ ಆಗಿದೆ. ಆದರೆ ಸಿನಿಮಾ ಬಿಡುಗಡೆ ಹಿಂದಿನ ದಿನ ಆನ್ಲೈನ್ಗೆ ಅಪ್ಲೋಡ್ ಮಾಡಲಾಗಿದೆ.
ಇದೀಗ ಸಾಜಿದ್ ನಾಡಿಯಾವಾಲ ವಿಮೆಗೆ ಅರ್ಜಿ ಹಾಕಿದ್ದು, ಆನ್ಲೈನ್ ಲೀಕ್ನಿಂದ ಆಗಿರುವ ಒಟ್ಟು ನಷ್ಟವನ್ನು ಲೆಕ್ಕ ಹಾಕಿ ಅದರ ಆಧಾರದಲ್ಲಿ ನಷ್ಟಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ತಮ್ಮ ಕಡೆಯಿಂದ ತಾವೇ ಒಟ್ಟು ನಷ್ಟದ ಲೆಕ್ಕಾಚಾರ ಮಾಡಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಬಾಲಿವುಡ್ ಆಸಕ್ತಿಯಿಂದ ಗಮನಿಸುತ್ತಿದ್ದು, ಪೈರಸಿ ವಿಮೆ ಕ್ಲೇಮಿಗೆ ಅರ್ಜಿ ಇದೇ ಮೊದಲು ಎನ್ನಲಾಗುತ್ತಿದೆ. ಒಂದೊಮ್ಮೆ ವಿಮೆ ದೊರೆತರೆ ಎಷ್ಟು ದೊರೆಯುತ್ತದೆ ಎಂಬುದು ಸಹ ಕುತೂಹಲ ಮೂಡಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




