ಹಿಜಾಬ್ ಕುರಿತಂತೆ ಕರ್ನಾಟಕದಲ್ಲಿ ಉಂಟಾಗಿರುವ ವಿವಾದದ (Hijab Controversy) ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಅದೇ ರೀತಿ ನಟಿ ಸೋನಂ ಕಪೂರ್ (Sonam Kapoor) ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಅವರು ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದರು. ಆದರೆ ಅದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸೋನಂ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಅಷ್ಟಕ್ಕೂ ಸೋನಂ ಕಪೂರ್ ಮಾಡಿದ ತಪ್ಪೇನು? ಹಿಜಾಬ್ ವಿಚಾರದಲ್ಲಿ ಸಿಖ್ ಧರ್ಮದ ವಿಚಾರವನ್ನು ಎಳೆದು ತಂದಿದ್ದು! ಹೌದು, ಹಿಜಾಬ್ ಕುರಿತಂತೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಒಂದು ಫೋಟೋ ಶೇರ್ ಮಾಡಿಕೊಂಡರು. ಪೇಟ (Turban) ಧರಿಸಿದ ಸಿಖ್ ವ್ಯಕ್ತಿ ಮತ್ತು ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆಯ ನಡುವೆ ಹೋಲಿಕೆ ಇರುವಂತಹ ಆ ಪೋಸ್ಟ್ ಕಂಡು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಸೋನಮ್ ಕಪೂರ್ ಅದನ್ನು ಈಗ ಡಿಲೀಟ್ ಮಾಡಿದ್ದಾರೆ. ಹಿಜಾಬ್ ಮತ್ತು ಸಿಖ್ಖರ ಪೇಟವನ್ನು ಹೋಲಿಕೆ ಮಾಡಿದ್ದಕ್ಕಾಗಿ ಅನಿಲ್ ಕಪೂರ್ ಪುತ್ರಿ ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಸಿಖ್ ಧರ್ಮದವರು ಪೇಟ ಧರಿಸುವುದು ಸಂಪ್ರದಾಯ. ‘ಇದಕ್ಕೆ ಅವಕಾಶ ಇದೆ ಎಂದಾದರೆ, ಹಿಜಾಬ್ ಧರಿಸಲು ಯಾಕೆ ಅವಕಾಶ ಇಲ್ಲ’ ಎಂಬ ಅರ್ಥದಲ್ಲಿ ಸೋನಮ್ ಕಪೂರ್ ಅವರು ಪ್ರಶ್ನೆ ಮಾಡಿದರು. ಇದಕ್ಕೆ ಸಿಖ್ ಧರ್ಮದವರಿಂದ ಕಟು ಟೀಕೆ ಕೇಳಿಬಂದಿದೆ. ಈ ಎರಡರ ನಡುವೆ ಹೋಲಿಕೆ ಸರಿಯಲ್ಲ ಎಂದು ಅನೇಕರು ಗುಡುಗಿದ್ದಾರೆ.
ಬಾಲಿವುಡ್, ಕಾಲಿವುಡ್ ಸೇರಿದಂತೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಿಜಾಬ್ ವಿವಾದದ ಬಗ್ಗೆ ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ ಕಮಲ್ ಹಾಸನ್, ರಮ್ಯಾ, ಕಂಗನಾ ರಣಾವತ್, ಜಾವೇದ್ ಅಖ್ತರ್ ಮುಂತಾದವರು ಈ ಕುರಿತು ಪೋಸ್ಟ್ ಮಾಡಿದ್ದರು.
‘ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳು ಶಾಂತಿ ಕಡದಲು ಪ್ರಚೋದಿಸುತ್ತಿವೆ. ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ ಗೋಡೆ ನಿರ್ಮಾಣವಾಗುತ್ತಿದೆ. ಪಕ್ಕದ ರಾಜ್ಯದಲ್ಲಿ ನಡೆಯುತ್ತಿರುವುದು ತಮಿಳುನಾಡಿಗೆ ಬರಬಾರದು. ಪ್ರಗತಿಪರ ಶಕ್ತಿಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಸಮಯವಿದು’ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಮತ್ತು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಪರಸ್ಪರ ಕಾದಾಡುತ್ತಿರುವ ವಿಡಿಯೋವನ್ನು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಭಾರತದ ಯುವಜನತೆ ಈ ರೀತಿ ಎರಡು ಭಾಗವಾಗಿರುವುದನ್ನು ನೋಡಲು ದುಃಖವಾಗುತ್ತದೆ’ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.
ಯಾವ ಬಟ್ಟೆ ಧರಿಸಬೇಕು ಎಂಬುದು ಮಹಿಳೆಯರ ಸ್ವಾತಂತ್ರ್ಯ ಎಂದು ಕೆಲವರು ಹೇಳುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಇರಬೇಕು ಎಂದು ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ‘ನಾನು ಕೂಡ ಇಸ್ಲಾಂ ಕುಟುಂಬದಲ್ಲಿ ಬೆಳೆದವಳು. ನಾನು ಹಿಜಾಬ್ ಹಾಕಲ್ಲ. ಹಾಗಂತ ನಾನು ಹಿಬಾಬ್ ಹಾಕುವವರ ವಿರೋಧಿ ಕೂಡ ಅಲ್ಲ. ಬಟ್ಟೆ ಎಂಬುದು ಅವರವರ ವೈಯಕ್ತಿಕ ವಿಚಾರ. ನಾನು ಹಿಜಾಬ್ ಹಾಕಲ್ಲ ಅಂತ ಅನೇಕ ಪರ-ವಿರೋಧ ಚರ್ಚೆ ನಡೆದಿದೆ. ನನ್ನ ನಿಲುವು ಏನೆಂದರೆ, ಹಿಜಾಬ್ ಅಥವಾ ಯಾವುದೇ ಬಟ್ಟೆ ಆದರೂ ಇದನ್ನು ಹಾಕಬೇಕು-ಹಾಕಬಾರದು ಎಂದು ಒತ್ತಾಯ ಮಾಡುವ ಹಕ್ಕು ಯಾರಿಗೂ ಇಲ್ಲ. ಅದು ಆ ವ್ಯಕ್ತಿಯ ಸ್ವಾತಂತ್ರ್ಯ’ ಎಂದು ಗಾಯಕಿ ಸುಹಾನಾ ಸೈಯದ್ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ:
ಹಿಜಾಬ್ ಮುಖ್ಯ ಅಲ್ಲ; ಶಿಕ್ಷಣ ಎಲ್ಲದನ್ನ ಮೀರಿದೆ -ಗಾಯಕಿ ಸುಹಾನಾ ಸೈಯದ್