ಸೋನಂ ಕಪೂರ್ (Sonam Kapoor) ಹಾಗೂ ಆನಂದ್ ಅಹುಜಾ (Anand Ahuja) ದೆಹಲಿ ನಿವಾಸದಲ್ಲಿ ಕಳ್ಳತನವಾಗಿತ್ತು. ಅತ್ಯಮೂಲ್ಯ ವಸ್ತುಗಳು ಹಾಗೂ ನಗದನ್ನು ಕದ್ದೊಯ್ಯಲಾಗಿತ್ತು. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿತ್ತು. ಈ ದಂಪತಿ ಕುಟುಂಬದವರು ಕೋಟ್ಯಂತರ ರೂಪಾಯಿ ನಗದು ಹಾಗೂ ಜ್ಯುವೆಲರಿಗಳನ್ನು ಕಳೆದುಕೊಂಡಿದ್ದರು. ಈಗ ತನಿಖೆ ವೇಳೆ ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ಇವರ ಮನೆಯಲ್ಲಿ ನರ್ಸ್ ಆಗಿದ್ದ ಅಪರ್ಣಾ ವಿಲ್ಸನ್ ಹಾಗೂ ಅವಳ ಗಂಡ ನರೇಶ್ ಕುಮಾರ್ ಈ ಕಳ್ಳತನ ಮಾಡಿದ್ದರು. ಅವರು ಈಗ ಜೈಲು ಪಾಲಾಗಿದ್ದಾರೆ.
ದೆಹಲಿ ಮನೆಯಲ್ಲಿ ಸೋನಂ ವಾಸ ಮಾಡುತ್ತಿಲ್ಲ. ಆದರೆ, ಅವರ ಮಾವ ಹರೀಶ್ ಅಹುಜಾ ಹಾಗೂ ಅವರ ಅತ್ತೆ ಪ್ರಿಯಾ ಅಹುಜಾ ವಾಸವಾಗಿದ್ದಾರೆ. ಇವರ ಜತೆಗೆ ಆನಂದ್ ಅವರ ಅಜ್ಜಿ ಸರಳಾ ಅಹುಜಾ ಕೂಡ ಇವರ ಜತೆಗೇ ಇದ್ದಾರೆ. ಇತ್ತೀಚೆಗೆ ಪ್ರಿಯಾ ಅವರು ಕಬೋರ್ಡ್ ತೆಗೆದು ನೋಡಿದ್ದರು. ಈ ವೇಳೆ ಜ್ಯುವೆಲರಿ ಹಾಗೂ ನಗದು ಕಾಣೆ ಆಗಿರುವುದು ಗಮನಕ್ಕೆ ಬಂದಿತ್ತು. ಕಳೆದ ಎರಡು ವರ್ಷಗಳಿಂದ ಕೊವಿಡ್ ಇದ್ದ ಕಾರಣ ಪ್ರಿಯಾ ಹೆಚ್ಚು ಸುತ್ತಾಟ ನಡೆಸಿಲ್ಲ. ಈ ಕಾರಣಕ್ಕೆ ಅವರು ಜ್ಯುವೆಲರಿ ಬಳಕೆ ಮಾಡಿರಲಿಲ್ಲ. ಜ್ಯುವೆಲರಿ ಇರುವ ಕಬೋರ್ಡ್ ಕೊನೆಯ ಬಾರಿ ತಾವು ಪರಿಶೀಲಿಸಿದ್ದು ಎರಡು ವರ್ಷಗಳ ಹಿಂದೆ ಎಂದು ಅವರು ಹೇಳಿಕೊಂಡಿದ್ದರು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ದೆಹಲಿ ಮನೆಯಲ್ಲಿ 25 ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಲಾಗಿದೆ. ಈ ಪೈಕಿ ಅಪರ್ಣಾ ಈ ಕಳ್ಳತನದ ಮುಖ್ಯ ರುವಾರಿ. ಈಕೆ ಪ್ರಿಯಾ ಅಹುಜಾ ಅವರ ಆರೈಕೆ ನೋಡಿಕೊಳ್ಳೋಕೆ ಇವರ ಮನೆಯಲ್ಲಿ ವಾಸವಾಗಿದ್ದಳು. ಅವಳು ಈ ಹಣ ಹಾಗೂ ಚಿನ್ನವನ್ನು ಕದ್ದಿದ್ದಳು. ಈ ಕೃತ್ಯಕ್ಕೆ ಅವಳ ಪತಿ ಸುರೇಶ್ ಸಹಾಯ ಮಾಡಿದ್ದ.
ಹರೀಶ್ ಅಹುಜಾ ಅವರಿಗೆ ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಅವರು ವಂಚನೆಗೆ ಒಳಗಾಗಿದ್ದರು. ಆನಂದ್ ಅವರಿಗೆ 27 ಕೋಟಿ ರೂಪಾಯಿ ವಂಚನೆ ನಡೆದಿತ್ತು. ಈ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿತ್ತು.
2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ ಕಡೆಯಿಂದ ಗುಡ್ ನ್ಯೂಸ್ ಸಿಗುತ್ತಿದೆ. ಪ್ರೆಗ್ನೆನ್ಸಿ ಫೋಟೋ ಹಂಚಿಕೊಂಡು ಸೋನಂ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಹೊಸ ರೀತಿಯಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ ಗಮನ ಸೆಳೆದ ಸೋನಂ ಕಪೂರ್
ಸೋನಂ ಕಪೂರ್ ಮಾವನಿಗೆ ಬರೋಬ್ಬರಿ ₹ 27 ಕೋಟಿ ವಂಚಿಸಿದ್ದ ಸೈಬರ್ ವಂಚಕರ ಬಂಧನ; ಓರ್ವ ಆರೋಪಿ ಕರ್ನಾಟಕದವನು!