ಪ್ರೇಮಿಗಳ ದಿನ: ಜೈಲಿನಿಂದಲೇ ನಟಿಗೆ ಪ್ರೈವೇಟ್ ಜೆಟ್ ಉಡುಗೊರೆ ನೀಡಿದ ವಂಚಕ ಸುಕೇಶ್
ಸುಕೇಶ್ ಚಂದ್ರಶೇಖರ್ ವಂಚನೆ ಕೇಸ್ನಲ್ಲಿ ಜೈಲು ಸೇರಿದ್ದರೂ ಕೂಡ ಅಲ್ಲಿಂದಲೇ ಜಾಕ್ವೆಲಿನ್ ಫರ್ನಾಂಡಿಸ್ಗೆ ಪತ್ರ ಬರೆಯುತ್ತಿದ್ದಾನೆ. ಪ್ರೇಮಿಗಳ ದಿನಕ್ಕೆ ಒಂದು ಸ್ಪೆಷಲ್ ಪತ್ರ ಕಳಿಸಿದ್ದಾನೆ. ಅದರಲ್ಲಿ ವಿಶೇಷವಾದ ಗಿಫ್ಟ್ ಬಗ್ಗೆ ಬರೆದಿದ್ದಾನೆ. ಜಾಕ್ವೆಲಿನ್ ಫರ್ನಾಂಡಿಸ್ಗೆ ಪ್ರೈವೇಟ್ ಜೆಟ್ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ.

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಆಪ್ತವಾಗಿದ್ದರು ಎಂಬುದಕ್ಕೆ ಫೋಟೋಗಳು ಸಾಕ್ಷಿಯಾಗಿವೆ. ನೂರಾರು ಕೋಟಿ ರೂಪಾಯಿ ವಂಚನೆ ಕೇಸ್ನಲ್ಲಿ ಸುಕೇಶ್ ಚಂದ್ರಶೇಖರ್ ಜೈಲು ಸೇರಿದ್ದಾನೆ. ಜೈಲಿಗೆ ಹೋದ ನಂತರವೂ ಆತ ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆ ಪ್ರೀತಿ ತೋರಿಸುವುದನ್ನು ನಿಲ್ಲಿಸಿಲ್ಲ. ಜೈಲಿನಿಂದಲೇ ಅನೇಕ ಬಾರಿ ಪತ್ರ ಬರೆದಿದ್ದಾನೆ. ಈ ಬಾರಿ ಪ್ರೇಮಿಗಳ ದಿನಗಳ ದಿನಕ್ಕೆ ಇನ್ನೂ ದೊಡ್ಡ ಸರ್ಪೈಸ್ ನೀಡಿದ್ದಾನೆ. ಜಾಕ್ವೆಲಿನ್ ಫರ್ನಾಂಡಿಸ್ಗೆ ಆತ ಪ್ರೈವೇಟ್ ಜೆಟ್ ಉಡುಗಿರೆಯಾಗಿ ಕೊಟ್ಟಿದ್ದಾನೆ.
‘ಜಾಕಿ, ನಾನು ನಿನ್ನನ್ನು ನಿಜವಾಗಿಯೂ ಪ್ರೀತಿಸುತ್ತೇನೆ. ಇಡೀ ಪ್ರಪಂಚದಲ್ಲಿ ನೀನೇ ಬೆಸ್ಟ್ ವ್ಯಾಲೆಂಟೈನ್. ಹುಚ್ಚನಂತೆ ನಿನ್ನನ್ನು ನಾನು ಪ್ರೀತಿಸುತ್ತೇನೆ. ನಮ್ಮ ಪಾಲಿಗೆ ವ್ಯಾಲೆಂಟೈನ್ಸ್ ಡೇ ಎಷ್ಟು ಮುಖ್ಯ ಎಂಬುದು ನಿನಗೆ ಗೊತ್ತು. ಈ ದಿನವೇ ನಮ್ಮ ಸಂಬಂಧ ಶುರುವಾಗಿದ್ದು. ನಮ್ಮ ತಪ್ಪುಗಳನ್ನು ಪರಸ್ಪರ ಕ್ಷಮಿಸಿ, ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವ ದಿನ ಇದು’ ಎಂದು ಪತ್ರ ಬರೆದಿದ್ದಾನೆ ಸುಕೇಶ್ ಚಂದ್ರಶೇಖರ್.
‘ಈ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ನಿನಗೆ ನಾನು ಸರ್ಪ್ರೈಸ್ ನೀಡದೇ ಇರುವ ಸಾಧ್ಯವೇ? ನಾನು ನಿನಗೆ ಈ ವರ್ಷದ ಪ್ರೇಮಿಗಳ ದಿನಕ್ಕೆ ಗಲ್ಫ್ಸ್ಟ್ರೀಮ್ ಜೆಟ್ ಉಡುಗೊರೆ ನೀಡುತ್ತಿದ್ದೇನೆ. ಈ ಪ್ರೈವೇಟ್ ಜೆಟ್ನ ಒಳಗೆ ಮತ್ತು ಹೊರಗೆ ನಿನ್ನ ಹೆಸರಿನ ಅಕ್ಷರಗಳಾದ ಜೆಎಫ್ ಎಂಬುದನ್ನು ಬರೆಸಲಾಗಿದೆ. ಇದರಿಂದ ಪ್ರೈವೇಟ್ ಜೆಟ್ ತುಂಬ ಪರ್ಸನಲ್ ಎನಿಸುತ್ತದೆ’ ಎಂದು ಸುಕೇಶ್ ಚಂದ್ರಶೇಖರ್ ಪತ್ರ ಬರೆದಿದ್ದಾನೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಿನಿಮಾ ಕೆಲಸಗಳ ಸಲುವಾಗಿ ವಿವಿಧ ರಾಜ್ಯಗಳಿಗೆ ಹಾಗು ಬೇರೆ ಬೇರೆ ದೇಶಗಳಿಗೆ ತೆರಳುತ್ತಾ ಇರುತ್ತಾರೆ. ಅವರ ಪ್ರಯಾಣಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಈ ಪ್ರೈವೇಟ್ ಜೆಟ್ ನೀಡಿದ್ದಾನಂತೆ. ಅಲ್ಲದೇ, ಜಾಕ್ವೆಲಿನ್ ಫರ್ನಾಂಡಿಸ್ ಅವರ ಜನ್ಮ ದಿನಾಂಕವನ್ನೇ ರಿಜಿಸ್ಟ್ರೇಷನ್ ನಂಬರ್ ಆಗಿಸಲಾಗಿದೆ ಎಂದು ಕೂಡ ಪತ್ರದಲ್ಲಿ ಹೇಳಿದ್ದಾನೆ.
ಇದನ್ನೂ ಓದಿ: ಪ್ರೇಯಸಿಯ ಫ್ಯಾನ್ಸ್ಗೆ 25 ಕಾರು, 200 ಐಫೋನ್ ಗಿಫ್ಟ್ ಕೊಡುವೆ ಎಂದ ಸುಕೇಶ್ ಚಂದ್ರಶೇಖರ್
‘ನನಗೆ ಈ ವರ್ಷದ ವ್ಯಾಲೆಂಟೈನ್ಸ್ ಡೇ ತುಂಬ ವಿಶೇಷ ಯಾಕೆಂದರೆ, ಇನ್ಮುಂದೆ ನಾವು ಜೀವನದ ಎಲ್ಲ ವ್ಯಾಲೆಂಟೈನ್ಸ್ ಡೇಗಳನ್ನು ಒಟ್ಟಿಗೆ ಕಳೆಯಲಿದ್ದೇವೆ. ಅದಕ್ಕೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ’ ಎಂದು ಆತ ಪತ್ರದಲ್ಲಿ ಬರೆದಿದ್ದಾನೆ. ಇದಕ್ಕೆಲ್ಲ ಜಾಕ್ವೆಲಿನ್ ಫರ್ನಾಂಡಿಸ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯಬೇಕಿದೆ. ಈಗಾಗಲೇ ಅವರು ಈ ಕೇಸ್ನಿಂದ ತಮ್ಮ ಹೆಸರನ್ನು ಹೊರಗಿಡಬೇಕು ಎಂದು ತನಿಖಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.