ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಮೂಲತಃ ಕನ್ನಡದವರು. ಆದರೆ ಅವರು ಹೆಚ್ಚು ಗುರುತಿಸಿಕೊಂಡಿದ್ದು ಹಿಂದಿ ಚಿತ್ರರಂಗದಲ್ಲಿ. ಇತ್ತೀಚಿನ ವರ್ಷಗಳಲ್ಲಿ ಅವರು ಕನ್ನಡ ಚಿತ್ರರಂಗದತ್ತಲೂ ಆಸಕ್ತಿ ತೋರಿಸುತ್ತಿದ್ದಾರೆ. ಈ ನಡುವೆ ಅವರು ಕೆಲವು ಮನರಂಜನಾ ವಾಹಿನಿಗಳ ಕಾರ್ಯಕ್ರಮಗಳಿಗೆ ಅತಿಥಿಯಾಗಿಯೂ ಭಾಗವಹಿಸುತ್ತಿದ್ದಾರೆ. ಅವರ ಮಕ್ಕಳಾದ ಅಹಾನ್ ಶೆಟ್ಟಿ (Ahan Shetty) ಮತ್ತು ಆಥಿಯಾ ಶೆಟ್ಟಿ (Athiya Shetty) ಅವರಿಗೆ ಸುಲಭವಾಗಿ ಬಾಲಿವುಡ್ಗೆ ಎಂಟ್ರಿ ಸಿಕ್ಕಿದೆ. ಈಗ ಅವರ ಇಡೀ ಕುಟುಂಬ (Suniel Shetty Family) ಸುಖವಾಗಿದೆ. ಆದರೆ ಸುನೀಲ್ ಶೆಟ್ಟಿ ತಂದೆಯ ಬದುಕು ಅಷ್ಟು ಸುಲಭದ್ದಾಗಿರಲಿಲ್ಲ. ಆ ಕುರಿತು ಸುನೀಲ್ ಶೆಟ್ಟಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಂದೆ ವೀರಪ್ಪ ಶೆಟ್ಟಿ (Veerappa Shetty) ಬಗ್ಗೆ ಅವರು ಹೆಮ್ಮೆಯಿಂದ ಮಾತನಾಡಿದ್ದಾರೆ. ಅಚ್ಚರಿ ಎಂದರೆ, ವೀರಪ್ಪ ಶೆಟ್ಟಿ ಅವರು ಹೋಟೆಲ್ ಕ್ಲೀನರ್ ಆಗಿದ್ದರು. ನಂತರ ಅದೇ ಕಟ್ಟಡಕ್ಕೆ ಮಾಲೀಕರಾದರು!
ಕಿರುತೆರೆಯ ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ 2’ ಕಾರ್ಯಕ್ರಮದಲ್ಲಿ ಸುನೀಲ್ ಶೆಟ್ಟಿ ಭಾಗವಹಿಸಿದ್ದರು. ಆಗ ಅವರು ತಂದೆಯ ಬಗೆಗಿನ ನೆನಪುಗಳನ್ನು ತೆರೆದಿಟ್ಟರು. ಕೆಲಸ ಹುಡುಕಿಕೊಂಡು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಗೆ ಬಂದಿದ್ದರು ಸುನೀಲ್ ಶೆಟ್ಟಿ ತಂದೆ. ‘ನಿಮ್ಮ ಹೀರೋ ಯಾರು ಅಂತ ಯಾರಾದರೂ ಕೇಳಿದರೆ ನಾನು ನನ್ನ ತಂದೆಯ ಹೆಸರು ಹೇಳುತ್ತೇನೆ. ಅಪ್ಪ ಎಂದರೆ ನನಗೆ ತುಂಬ ಹೆಮ್ಮೆ. ಅವರು ಬದುಕಿದ ರೀತಿ ತುಂಬ ಅದ್ಭುತವಾಗಿತ್ತು’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
‘ನಮ್ಮ ತಂದೆ ಕೇವಲ 9ನೇ ವಯಸ್ಸಿನಲ್ಲಿ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದರು. ಮೊದಲಿಗೆ ಹೋಟೆಲ್ ಕ್ಲೀನರ್ ಆಗಿ ಕೆಲಸ ಆರಂಭಿಸಿದರು. ಜೀವನ ನಡೆಸಲು ತಾವು ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ಎಂದಿಗೂ ನಾಚಿಕೆ ಅನಿಸಲಿಲ್ಲ. ಮೊದಲು ಕ್ಲೀನರ್ ಆಗಿದ್ದ ಬಿಲ್ಡಿಂಗ್ನಲ್ಲಿಯೇ ಅವರು ನಂತರ ಮ್ಯಾನೇಜರ್ ಆಗಿ ಬೆಳೆದರು. ಬಳಿಕ ಆ ಕಟ್ಟಡಗಳನ್ನು ಖರೀದಿಸಿ ಮಾಲೀಕರಾದರು. ಅವರು ಅಂಥ ವ್ಯಕ್ತಿ ಆಗಿದ್ದರು’ ಎಂದು ತಂದೆಯ ಬಗ್ಗೆ ಹೆಮ್ಮೆಯ ಮಾತುಗಳನ್ನು ಸುನೀಲ್ ಶೆಟ್ಟಿ ಹಂಚಿಕೊಂಡಿದ್ದಾರೆ.
‘ನಾವು ಏನು ಮಾಡುತ್ತೇವೋ ಆ ಕೆಲಸದ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಆ ಕೆಲಸವನ್ನು ಮನಸಾರೆ ಮಾಡಬೇಕು ಅಂತ ನನಗೆ ಕಲಿಸಿಕೊಟ್ಟಿದ್ದೇ ನನ್ನ ತಂದೆ’ ಎಂದಿದ್ದಾರೆ ಸುನೀಲ್ ಶೆಟ್ಟಿ. ‘ಅಪ್ಪನೇ ನನ್ನ ಹೀರೋ’ ಎಂದಿರುವ ಅವರ ಮಾತುಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ನಟಿಸಿರುವ ಮೊದಲ ಬಾಲಿವುಡ್ ಸಿನಿಮಾ ‘ತಡಪ್’ ಈಗ ಬಿಡುಗಡೆಗೆ ಸಜ್ಜಾಗಿದೆ. ಡಿ.3ರಂದು ಈ ಚಿತ್ರ ರಿಲೀಸ್ ಆಗಲಿದೆ. ಇದು ತೆಲುಗಿನ ‘ಆರ್ಎಕ್ಸ್100’ ಚಿತ್ರದ ಹಿಂದಿ ರಿಮೇಕ್.
ಇದನ್ನೂ ಓದಿ:
ಆರ್ಯನ್ ಖಾನ್ ಇನ್ನೂ ಮಗು ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ ನಟ ಸುನೀಲ್ ಶೆಟ್ಟಿ
ಸೊನಾಲಿ ಬೇಂದ್ರೆಗೆ ರಾತ್ರಿ ಕರೆ ಮಾಡಿ ‘ಓಡಿ ಹೋಗಿ ಮದ್ವೆ ಆಗೋಣ ಬಾ’ ಎಂದಿದ್ರಾ ಸುನೀಲ್ ಶೆಟ್ಟಿ? ಇಲ್ಲಿದೆ ಅಸಲಿ ವಿಷಯ