ಕೊರೊನಾ ಕಾಲಘಟ್ಟದ ನಂತರ ಪ್ರೇಕ್ಷಕರು ಪ್ರಸ್ತುತ ಚಿತ್ರಮಂದಿರಗಳಿಗೆ ತೆರಳಿ ಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ. ಇದೇ ಕಾರಣದಿಂದ ದೊಡ್ಡ ಬಜೆಟ್ ಚಿತ್ರಗಳು ಸಾಲುಸಾಲಾಗಿ ತೆರೆಕಾಣುತ್ತಿವೆ. ಬಹಳ ಕಾಲದ ನಂತರ ಚಿತ್ರಮಂದಿರಗಳು ಸಂಪೂರ್ಣ ಸಾಮರ್ಥ್ಯದೊಂದಿಗೆ ವೀಕ್ಷಣೆಗೆ ಲಭ್ಯವಾದರೂ ಕೂಡ, ಪ್ರೇಕ್ಷಕರು ತಮಗೆ ಉತ್ತಮ ಎನಿಸಿದ ಚಿತ್ರಗಳನ್ನಷ್ಟೇ ಆಯ್ದುಕೊಳ್ಳುತ್ತಿದ್ದಾರೆ. ಸ್ಟಾರ್ ಸಿನಿಮಾ ಎಂದಾಕ್ಷಣ ಚಿತ್ರಮಂದಿರಕ್ಕೆ ತೆರಳುತ್ತಿಲ್ಲ. ಬಾಲಿವುಡ್ನಲ್ಲಿ ಇದಕ್ಕೆ ತಾಜಾ ಉದಾಹರಣೆ ಕಣ್ಣ ಮುಂದಿದೆ. ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಮಾರ್ಚ್ 11ರಂದು ರಿಲೀಸ್ ಆಗಿತ್ತು. ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ತೆರೆಕಂಡ ಈ ಸಿನಿಮಾಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಿದ್ದು ‘ರಾಧೆ ಶ್ಯಾಮ್’. ಮೊದಲ ದಿನ ಕೇವಲ 630 ಚಿತ್ರಮಂದಿರಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ತೆರೆಕಂಡಿತ್ತು. ಆದರೆ ಜನರ ಪ್ರತಿಕ್ರಿಯೆ ಉತ್ತಮವಾಗಿ ಬಂದಂತೆಯೇ ಇದೀಗ ಚಿತ್ರವು ಸಾವಿರಾರು ಸ್ಕ್ರೀನ್ಗಳಲ್ಲಿ ಪ್ರದರ್ಶನವಾಗುತ್ತಿದೆ. ಈ ನಡುವೆ ‘ರಾಧೆ ಶ್ಯಾಮ್’ ಹಿಂದಿ ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಬಾಲಿವುಡ್ನಲ್ಲಿ ಚಿತ್ರದ ಕಲೆಕ್ಷನ್ ತಗ್ಗಿತ್ತು. ಅಷ್ಟೇ ಅಲ್ಲ, ಒಂದು ವಾರದ ನಂತರ ತೆರೆ ಕಂಡ ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ಗೂ (Bachchhan Paandey) ‘ದಿ ಕಾಶ್ಮೀರ್ ಫೈಲ್ಸ್’ ಪ್ರಬಲ ಸ್ಪರ್ಧೆ ನೀಡಿದೆ.
ಹೋಳಿ ಹಬ್ಬದ ಪ್ರಯುಕ್ತ ‘ಬಚ್ಚನ್ ಪಾಂಡೆ’ ರಿಲೀಸ್ ಆಗಿತ್ತು. ಗ್ಯಾಂಗ್ಸ್ಟರ್ ಆಗಿ ಅಕ್ಷಯ್ ನಟಿಸಿರುವ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಬಾಲಿವುಡ್ನಲ್ಲಿತ್ತು. ಆದರೆ ಅದಾಗಲೇ ‘ದಿ ಕಾಶ್ಮೀರ್ ಫೈಲ್ಸ್’ 4,000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಪ್ರದರ್ಶನವಾಗುತ್ತಿತ್ತು. ಇದರಿಂದ ‘ಬಚ್ಚನ್ ಪಾಂಡೆ’ಗೆ ಸ್ಕ್ರೀನ್ಗಳ ಸಂಖ್ಯೆ ಕಡಿಮೆ ಸಿಕ್ಕಿತು. ಅಷ್ಟೇ ಅಲ್ಲದೇ, ನೆಗೆಟಿವ್ ವಿಮರ್ಶೆಗಳು ದೊರೆತವು. ಪರಿಣಾಮವಾಗಿ ಚಿತ್ರದ ಕಲೆಕ್ಷನ್ ಕಡಿಮೆಯಾಗಿದೆ.
‘ದಿ ಕಾಶ್ಮೀರ್ ಫೈಲ್ಸ್’ ಕಲೆಕ್ಷನ್ ಎಷ್ಟು?
ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ಅಕ್ಷಯ್ ನಟನೆಯ ‘ಬಚ್ಚನ್ ಪಾಂಡೆ’ ಕಾಶ್ಮೀರ್ ಫೈಲ್ಸ್ಗೆ ಪೈಪೋಟಿ ನೀಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಲೆಕ್ಕಾಚಾರ ತಲೆಕೆಳಗಾಗಿದೆ. ತೆರೆಕಂಡ 12 ದಿನದ ನಂತರವೂ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರ ಬಂಪರ್ ಗಳಿಕೆ ಮಾಡುತ್ತಿದೆ. ಮಂಗಳವಾರದಂದು ಚಿತ್ರವು 10.50 ಕೋಟಿ ರೂ ಕಲೆಕ್ಷನ್ ಮಾಡಿದ್ದು, ಈ ಮೂಲಕ ದೇಶದಲ್ಲಿ ಒಟ್ಟಾರೆ ಕಲೆಕ್ಷನ್ 190 ಕೋಟಿ ರೂಗೆ ಏರಿಕೆಯಾಗಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ದರ್ಶನ್ ಕುಮಾರ್ ಮೊದಲಾದ ಖ್ಯಾತ ಕಲಾವಿದರು ಬಣ್ಣಹಚ್ಚಿದ್ದಾರೆ.
‘ಬಚ್ಚನ್ ಪಾಂಡೆ’ ಕಲೆಕ್ಷನ್ ಎಷ್ಟು?
ಅಕ್ಷಯ್ ಕುಮಾರ್, ಕೃತಿ ಸನೋನ್, ಜಾಕ್ವೆಲಿನ್ ಫೆರ್ನಾಂಡಿಸ್ ಮೊದಲಾದ ತಾರೆಯರು ನಟಿಸಿರುವ ‘ಬಚ್ಚನ್ ಪಾಂಡೆ’ ನಿರೀಕ್ಷೆಗಿಂತ ಕಡಿಮೆ ಗಳಿಸುತ್ತಿದೆ. ತಮಿಳಿನ ‘ಜಿಗರ್ಥಂಡ’ ಚಿತ್ರದ ರಿಮೇಕ್ ಇದಾಗಿದ್ದು, ಬಾಲಿವುಡ್ಗೆ ಬೇಕಾದಂತೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಮಂಗಳವಾರ ಚಿತ್ರವು 3 ಕೋಟಿ ರೂ ಗಳಿಸಿದ್ದು. ಒಟ್ಟಾರೆ ಗಳಿಕೆ 40 ಕೋಟಿ ರೂಗೆ ಏರಿದೆ. ಹೋಳಿ ಹಬ್ಬವಿದ್ದ ಕಾರಣ ಲಾಂಗ್ ವೀಕೆಂಡ್ ಚಿತ್ರಕ್ಕೆ ಲಭ್ಯವಾಗಿತ್ತು. ಅದಾಗ್ಯೂ ಚಿತ್ರದ ಕಲೆಕ್ಷನ್ ಡೌನ್ ಆಗಿದೆ. ಅಕ್ಷಯ್ರಂತಹ ಸೂಪರ್ ಸ್ಟಾರ್ ಇದ್ದರೂ ಕೂಡ ಗಳಿಕೆ ಕಡಿಮೆಯಿರುವುದು ಚಿತ್ರತಂಡಕ್ಕೆ ತಲೆನೋವಾಗಿದೆ. ಈ ವಾರಾಂತ್ಯದಲ್ಲಿ ಚಿತ್ರ ಎಷ್ಟು ಗಳಿಸಬಹುದು ಎನ್ನುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ:
3 ದಿನ ಸಾರಿ ಕೇಳಿದ್ರು ಪುನೀತ್; ಅದಕ್ಕೆ ಕಾರಣ ಆಗಿದ್ದ ಆ ಘಟನೆ ಬಗ್ಗೆ ವಿವರಿಸಿದ ‘ಜೇಮ್ಸ್’ ವಿಲನ್
Randeep Hooda: ಅನೌನ್ಸ್ ಆಯ್ತು ‘ಸ್ವತಂತ್ರ ವೀರ್ ಸಾವರ್ಕರ್’; ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳೋರು ಯಾರು?