ಟಿವಿ9 ಸಮೀಕ್ಷೆ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವಿವಾದದ ಬಗ್ಗೆ ಜನರಿಗೆ ಇದೆ ಹಲವು ಬಗೆಯ ಭಾವನೆ
Tv9 Kannada Poll: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಹುಟ್ಟಿಕೊಂಡಿರುವ ವಿವಾದದ ಬಗ್ಗೆ ಜನರಿಗೆ ಯಾವ ರೀತಿಯ ಅಭಿಪ್ರಾಯ ಇದೆ ಎಂಬುದು ‘ಟಿವಿ9 ಸಮೀಕ್ಷೆ’ ಮೂಲಕ ತಿಳಿದುಬಂದಿದೆ. ಅನೇಕರು ಈ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸಿನಿಮಾ ಎಂದರೆ ಅದು ‘ದಿ ಕಾಶ್ಮೀರ್ ಫೈಲ್ಸ್’ (The Kashmir Files). ಸಿನಿಮಾದ ಮೇಕಿಂಗ್, ನಟರ ಅಭಿನಯ, ತಾಂತ್ರಿಕ ಅಂಶಗಳಿಗಿಂತಲೂ ಹೆಚ್ಚಾಗಿ ಹಿಂದೂ-ಮುಸ್ಲಿಂ ಎಂಬ ವಿಷಯ ಚರ್ಚೆ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಜನರು ಈ ಬಗ್ಗೆ ಪರ-ವಿರೋಧದ ಮಾತುಗಳನ್ನು ಆಡುತ್ತಿದ್ದಾರೆ. ರಾಜಕಾರಣಿಗಳು ಕೂಡ ಈ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳಲು ಆರಂಭಿಸಿದ ಬಳಿಕ ಅದು ಪೊಲಿಟಿಕಲ್ ಸ್ವರೂಪ ಪಡೆದುಕೊಂಡಿದೆ. ಅದರಿಂದ ವಿವಾದವೂ ಹುಟ್ಟಿಕೊಂಡಿತು. ಈ ವಿವಾದ ಬಗ್ಗೆ ಜನರಿಗೆ ಯಾವ ರೀತಿಯ ಅಭಿಪ್ರಾಯ ಇದೆ ಎಂಬ ಬಗ್ಗೆ ಟಿವಿ9 ಸಮೀಕ್ಷೆ (Tv9 Kannada Digital Survey) ನಡೆಸಿದೆ. ಅದಕ್ಕೆ ಫೇಸ್ಬುಕ್ನಲ್ಲಿ 450ಕ್ಕೂ ಹೆಚ್ಚು, ಇನ್ಸ್ಟಾಗ್ರಾಮ್ನಲ್ಲಿ 30ಕ್ಕೂ ಹೆಚ್ಚು, ಯೂಟ್ಯೂಬ್ನಲ್ಲಿ 360ಕ್ಕೂ ಹೆಚ್ಚು ಕಮೆಂಟ್ಗಳ ಮೂಲಕ ಜನರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಿಜವಾದ ಸಮಸ್ಯೆಗಳತ್ತ ಗಮನ ಹರಿಸುವುದರ ಬದಲು ರಾಜಕಾರಣಿಗಳು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಇಟ್ಟುಕೊಂಡು ಜನರನ್ನು ವಿಭಜಿಸುವ ತಂತ್ರ ರೂಪಿಸಿದ್ದಾರೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ಈ ಸಿನಿಮಾದಲ್ಲಿ ಸತ್ಯದ ಅನಾವರಣ ಕೂಡ ಆಗಿದೆ ಎಂದು ಬಹುತೇಕರು ಹೇಳಿದ್ದಾರೆ. ಒಟ್ಟಾರೆ ಈ ಸಮೀಕ್ಷೆಗೆ ಸಿಕ್ಕ ಪ್ರತಿಕ್ರಿಯ ಸಾರಾಂಶ ಇಲ್ಲಿದೆ..
‘ದಿ ಕಾಶ್ಮೀರ್ ಫೈಲ್ಸ್’ ಈಗ ಕೇವಲ ಒಂದು ಸಿನಿಮಾ ಆಗಿ ಉಳಿದಿಲ್ಲ. ರಾಜಕೀಯದ ಕಣ್ಣಿನಿಂದಲೂ ಅದನ್ನು ನೋಡಲಾಗುತ್ತಿದೆ. ಒಟ್ಟಾರೆ ವಿವಾದಕ್ಕೆ ಕಾರಣವಾದ ಈ ಬೆಳವಣಿಗೆಯನ್ನು ಕೆಲವು ಟೀಕಿಸಿದ್ದಾರೆ. ‘ಭಾರತದಲ್ಲಿ ಎಷ್ಟೋ ಜನರ ಊಟ ಇಲ್ಲದೆ ಉದ್ಯೋಗ ಇಲ್ಲದೆ ಬೆಲೆ ಏರಿಕೆ ಬಿಸಿ ತಟ್ಟಿ ಜನರು ಸಾಯುತ್ತಿದ್ದಾರೆ. ಇದನ್ನು ಮಾರೆಮಾಚಲು ಈ ದರಿದ್ರ ಸರ್ಕಾರಗಳು ತಿಂಗಳಿಗೆ ಒಂದರಂತೆ ಜನರಲ್ಲಿ ಬೇಡವಾದ ವಿಷಯಗಳನ್ನು ಬಿಟ್ಟು ನೀವು ಕಚ್ಚಾಡುವ ಪರಿಸ್ಥಿತಿಗೆ ತಂದು, ಈ ಬಿಜೆಪಿ ನಾಯಕರು ತಮ್ಮ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ವಿಷಯಗಳು 2023ರ ಚುನಾವಣೆಯವರಿಗೂ ನಡೆಯುತ್ತಲೇ ಇರುತ್ತವೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
‘ಯಾವುದೇ ಸಿನಿಮಾ ಇರಲಿ, ನೋಡೋದು ಬಿಡೋದು ದೇಶದ ಜನರಿಗೆ ಬಿಟ್ಟಿದ್ದು. ಈ ಸಿನಿಮಾ ನೋಡದವರು ದೇಶದ್ರೋಹಿ ಅನ್ನೋದು. ಸರ್ಕಾರ ಟ್ಯಾಕ್ಸ್ ಪ್ರೀ ಮೊಡೋದು, ಎಂಎಲ್ಎ ಉಚಿತ ಟಿಕೆಟ್ ಕೊಡಿಸೋದು, ದೇಶದ ಒಂದು ಪಕ್ಷದ ಸರ್ಕಾರಗಳು ಈ ಸಿನಿಮಾ ಬಗ್ಗೆ ಮುತುವರ್ಜಿ ವಹಿಸಿದರೆ, ಇಂತಹ ಅನೇಕ ಹಿಂಸಾತ್ಮಕ ಸಿನಿಮಾಗಳಿಗೂ ಟ್ಯಾಕ್ಸ್ ಪ್ರಿ ಮಾಡುವರೇ.. ಮುತುವರ್ಜಿ ವಹಿಸಿ ಮಾತನಾಡುವರೆ. ಇಲ್ಲ ಅಲ್ಲವೇ. ಹಾಗಾಗಿ.. ಸರ್ಕಾರ ಈ ವಿಷಯದಲ್ಲಿ ಮೂಗು ತೂರಿಸುವುದು ಸರಿಯಲ್ಲ’ ಎಂಬ ಅಭಿಪ್ರಾಯ ಕೂಡ ನೆಟ್ಟಿಗರಿಂದ ವ್ಯಕ್ತವಾಗಿದೆ. ‘ಕಾಶ್ಮೀರಿ ಪಂಡಿತರು ಮತ್ತು ಇತರರ ಮೇಲೆ ನಡೆಯುವ ದೌರ್ಜನ್ಯಗಳ ಬಗೆ ಅರಿವಿದೆ; ಅವರ ನೋವುಗಳಿಗೆ ಸ್ಪಂದಿಸುವ ಬದಲು ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಭಾವನಾತ್ಮಕವಾಗಿ ಅವರನ್ನು ಓಟ್ ಬ್ಯಾಂಕ್ ಆಗಿ ಮಾರ್ಪಾಡು ಮಾಡಿಕೊಂಡು ಕೆಟ್ಟ ರಾಜಕೀಯ ಮಾಡುತ್ತಿವೆ ಎಂದೆನಿಸುತದೆ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
‘ಇಷ್ಟು ದಿನ ಕಾಶ್ಮೀರಿ ಪಂಡಿತರ ಹತ್ಯೆ ಬಗ್ಗೆ ಇದ್ದ ಸತ್ಯವನ್ನು ಮುಚ್ಚಿಡಲಾಗಿತ್ತು. ಈಗ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಸತ್ಯ ಬಹಿರಂಗ ಆಗಿದೆ’ ಎಂದು ಕೆಲವರು ಹೇಳಿದ್ದಾರೆ. ‘ವಿವಾದ ಅನ್ನೋ ಮಾತು ಯಾಕೆ ಬರುತ್ತೆ? ಸತ್ಯ ಅರಗಿಸಿಕೊಳ್ಳದವರು ಹೀಗೆ ಏನೇನೋ ಹೇಳ್ತಾರೆ. ಅಲ್ಲಿ ಆದ ಪರಿಸ್ಥಿತಿಯೇ ಇಲ್ಲಿ ಕೂತು ಟೀಕೆ ಮಾಡುವವರಿಗೆ ಬಂದಾಗಲೇ ಅರಿವಾಗೋದು ಸತ್ಯನಾ ಅಥವಾ ಸುಳ್ಳಾ ಅಂತ’ ಎಂದು ವ್ಯಕ್ತಿಯೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಕಾಶ್ಮೀರಿ ಪಂಡಿತರಿಗೆ ನ್ಯಾಯ ಕೊಡಿಸಿ. ಮರಳಿ ಅವರು ಕಾಶ್ಮೀರದಲ್ಲಿ ಜೀವನ ನಡೆಸುವಂತೆ ಮಾಡಲಿ’ ಎಂದು ಕೆಲವರು ಆಶಯ ವ್ಯಕ್ತಪಡಿಸಿದ್ದಾರೆ. ‘ಕೊರೊನಾ ಸಮಯದಲ್ಲಿ ಒಂದು ಚಿಕ್ಕ ವೈರಸ್ಗೆ ಹೆದರಿ ತಮ್ಮ ಹೆತ್ತವರನ್ನೇ ಸುಡುಗಾಡಿನಲ್ಲಿ ಬಿಟ್ಟು ಓಡಿ ಹೋದ ಮಕ್ಕಳು ಇವತ್ತು ಕಾಶ್ಮೀರದ ಪಂಡಿತರ ಸಾವಿಗೆ ಎದೆ ಬಡಿದುಕೊಂಡು ಸಾಯುತ್ತಾ ಇದ್ದಾರೆ’ ಎಂದು ನೆಟ್ಟಿಗರೊಬ್ಬರು ಟೀಕೆ ಮಾಡಿದ್ದಾರೆ. ‘ಇದೊಂದು ಸಿನಿಮಾ ಅಲ್ಲ. ಇದು ಇತಿಹಾಸ. ಇಂಥ ಭವಿಷ್ಯ ನಮಗೆ ಮತ್ತೆ ಬರಬಾರದು ಎಂದು ನಾವು ಎಚ್ಚೆತ್ತುಕೊಳ್ಳಬೇಕು. ಆಗಿರುವ ತಪ್ಪುಗಳಿಂದ ಪಾಠ ಕಲಿಯಬೇಕು’ ಎಂದು ಕೂಡ ಜನರು ಕಮೆಂಟ್ ಮಾಡಿದ್ದಾರೆ.
‘ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಸಿನಿಮಾ ಅನ್ನುವುದು ಬಿಟ್ಟು, ಬರೀ ಹಿಂದೂಗಳು ನೋಡಬೇಕಾದ ಸಿನಿಮಾ ಅಂತ ಪ್ರಜೆಗಳ ಮೈಂಡ್ ಡೈವರ್ಟ್ ಮಾಡುತ್ತಿದ್ದಾರೆ ರಾಜಕೀಯ ಪುಡಾರಿಗಳು. ಇದು ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಸಿನಿಮಾ’ ಎಂಬ ಕಮೆಂಟ್ ಸಹ ಬಂದಿದೆ. ‘ಕಾಶ್ಮೀರ್ ಫೈಲ್ ಫಿಲ್ಮ್ ನೋಡಿ ಅಂತಾ ಎಲ್ಲರೂ ಹೇಳ್ತಾ ಇದಾರೆ. ಆದ್ರೆ ಜೈ ಭೀಮ್ ಫಿಲ್ಮ್ ಬಗ್ಗೆ ಯಾರೂ ಮಾತಾಡಲಿಲ್ಲ ಯಾಕೆ?’ ಎಂಬ ಪ್ರಶ್ನೆಯನ್ನು ಕಮೆಂಟ್ಗಳ ಮೂಲಕ ಕೆಲವರು ಎತ್ತಿದ್ದಾರೆ. ಭಾರತದಲ್ಲಿ ಇನ್ನೂ ಅನೇಕ ಹತ್ಯಾಕಾಂಡಗಳು ನಡೆದಿವೆ. ಅವುಗಳ ಬಗ್ಗೆಯೂ ಸಿನಿಮಾ ಬರಲಿ ಎಂದು ಅನೇಕರು ಒತ್ತಾಯಿಸಿದ್ದಾರೆ.
‘ಇಂಥವಕ್ಕೆಲ್ಲ ಮಾನವೀಯ ಮೌಲ್ಯಗಳ ದೃಷ್ಟಿಯಲ್ಲಿ ಪರಿಹಾರ ಹುದುಕಿಕೊಳ್ಳಬೇಕೆ ವಿನಹ ರಾಜಕೀಯ ದೃಷ್ಟಿಯಿಂದ ಪರಿಹಾರ ಹುಡುಕಲು ಸಾಧ್ಯವಿಲ್ಲ. ರಾಜಕೀಯ ಪಕ್ಷಗಳು ತಮ್ಮ ರಾಜಕೀಯದ ಬೇಳೆಯನ್ನು ಬೇಯಿಸಿಕೊಳ್ಳುತ್ತೇವೆಯೇ ವಿನಃ ಇದಕ್ಕೆ ಪೂರ್ಣ ಪರಿಹಾರ ಯಾರಿಗೂ ಬೇಕಿಲ್ಲ’ ಎಂಬ ಕಮೆಂಟ್ ಕೂಡ ಬಂದಿದೆ.
ಇದನ್ನೂ ಓದಿ:
‘ದಿ ಕಾಶ್ಮೀರ್ ಫೈಲ್ಸ್’ ನಟರಿಗೆ ಸಿಕ್ಕಿದೆ ಕೋಟಿ ರೂ. ಸಂಬಳ; ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?
‘ದಿ ಕಾಶ್ಮೀರ್ ಫೈಲ್ಸ್’ ಮಾತ್ರವಲ್ಲ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಇತರೆ ಚಿತ್ರಗಳ ಬಗ್ಗೆ ನಿಮಗೆ ಗೊತ್ತಾ?