ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ತಯಾರಾದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files) ಸೂಪರ್ ಹಿಟ್ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಹೊಸ ಹೊಸ ದಾಖಲೆಗಳನ್ನು ಈ ಚಿತ್ರ ನಿರ್ಮಿಸುತ್ತಿದೆ. ದಿನದಿಂದ ದಿನಕ್ಕೆ ಈ ಚಿತ್ರದ ಕಮಾಯಿ ಹೆಚ್ಚುತ್ತಿದೆ. ದೇಶದ ಅನೇಕ ನಗರಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾಗಿ 8 ದಿನ ಕಳೆದರೂ ಕೂಡ ಅನೇಕ ಕಡೆಗಳಲ್ಲಿ ಈಗಲೂ ಹೌಸ್ಫುಲ್ ಪ್ರದರ್ಶನ ಆಗುತ್ತಿದೆ. ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ಈ ಸಿನಿಮಾ ಬಗ್ಗೆ ಪರ-ವಿರೋಧದ ಚರ್ಚೆ ಜೋರಾಗಿದೆ. ಇದರಿಂದ ಕೂಡ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಕ್ಕಂತಾಗಿದೆ. ಪ್ರಭಾಸ್ (ರಾಧೆ ಶ್ಯಾಮ್), ಅಕ್ಷಯ್ ಕುಮಾರ್ (ಬಚ್ಚನ್ ಪಾಂಡೆ) ಮುಂತಾದ ಸ್ಟಾರ್ ನಟ ಸಿನಿಮಾಗಳನ್ನು ಕೂಡ ಹಿಂದಿಕ್ಕಿ ‘ದಿ ಕಾಶ್ಮೀರ್ ಫೈಲ್ಸ್’ ಜಯಭೇರಿ ಬಾರಿಸುತ್ತಿದೆ. 8ನೇ ದಿನ ಈ ಸಿನಿಮಾ 19.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಮೂಲಕ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರದ ಒಟ್ಟು ಕಮಾಯಿ (The Kashmir Files Total collection) 116.45 ಕೋಟಿ ರೂಪಾಯಿ ಆಗಿದೆ!
‘ದಿ ಕಾಶ್ಮೀರ್ ಫೈಲ್ಸ್’ ಮಾ.11ರಂದು ತೆರೆಕಂಡಿತು. ಅನುಪಮ್ ಖೇರ್, ಪಲ್ಲವಿ ಜೋಶಿ, ವಿಥುನ್ ಚರ್ಕವರ್ತಿ, ಪುನೀತ್ ಇಸ್ಸಾರ್, ದರ್ಶನ್ ಕುಮಾರ್ ಮುಂತಾದವರು ನಟಿಸಿರುವ ಈ ಸಿನಿಮಾಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದರು. ಅದರ ಪರಿಣಾಮವಾಗಿ ದೇಶಾದ್ಯಂತ ಈ ಚಿತ್ರದ ಬಗ್ಗೆ ಆಸಕ್ತಿ ಮೂಡುವಂತಾಯಿತು. ಅನೇಕ ರಾಜ್ಯಗಳ ರಾಜಕಾರಣಿಗಳು ಸಿನಿಮಾ ವೀಕ್ಷಿಸಿದರು. ಅದರಿಂದಾಗಿ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತು. ಪ್ರೇಕ್ಷಕರು ಮುಗಿಬಿದ್ದು ಈ ಸಿನಿಮಾವನ್ನು ನೋಡಲು ಆರಂಭಿಸಿದರು. 8ನೇ ದಿನ ಕಳೆಯುವುದರೊಳಗೆ ಈ ಚಿತ್ರ ಶತಕೋಟಿ ರೂಪಾಯಿ ಕ್ಲಬ್ ಸೇರಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಆ ಬಳಿಕವಂತೂ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಕಮಾಲ್ ಮಾಡುತ್ತಿದೆ. ಈ ಸಿನಿಮಾದ ಪ್ರತಿದಿನದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ:
1ನೇ ದಿನ: 3.55 ಕೋಟಿ ರೂಪಾಯಿ
2ನೇ ದಿನ: 8.50 ಕೋಟಿ ರೂಪಾಯಿ
3ನೇ ದಿನ: 15.10 ಕೋಟಿ ರೂಪಾಯಿ
4ನೇ ದಿನ: 15.05 ಕೋಟಿ ರೂಪಾಯಿ,
5ನೇ ದಿನ: 18 ಕೋಟಿ ರೂಪಾಯಿ
6ನೇ ದಿನ: 19.05 ಕೋಟಿ ರೂಪಾಯಿ
7ನೇ ದಿನ: 18.05 ಕೋಟಿ ರೂಪಾಯಿ
8ನೇ ದಿನ: 19.15 ಕೋಟಿ ರೂಪಾಯಿ
ಯಾವುದೇ ಕಮರ್ಷಿಯಲ್ ಅಂಶಗಳು ಇಲ್ಲದ ಈ ಸಿನಿಮಾ ಈ ಪರಿ ಕಲೆಕ್ಷನ್ ಮಾಡಿರುವುದು ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಹೆಚ್ಚು ಪ್ರಚಾರವಿಲ್ಲದೇ ಬಿಡುಗಡೆಯಾದ ಸಿನಿಮಾಗೆ ನಂತರದ ದಿನಗಳಲ್ಲಿ ಭರ್ಜರಿ ಪ್ರಚಾರ ಸಿಕ್ಕಿತು. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಎಮೋಷನಲ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಎಲ್ಲ ಅಂಶಗಳ ಕಾರಣದಿಂದ ಈ ಚಿತ್ರ ಧೂಳೆಬ್ಬಿಸುತ್ತಿದೆ.
#TheKashmirFiles creates HISTORY… *Day 8* of #TKF [₹ 19.15 cr] is AT PAR with #Baahubali2 [₹ 19.75 cr] and HIGHER THAN #Dangal [₹ 18.59 cr], the two ICONIC HITS… #TKF is now in august company of ALL TIME BLOCKBUSTERS… [Week 2] Fri 19.15 cr. Total: ₹ 116.45 cr. #India biz. pic.twitter.com/sjLWXV78J9
— taran adarsh (@taran_adarsh) March 19, 2022
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮಾಡಿದ್ದಕ್ಕಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಕೆಲವು ಬೆದರಿಕೆ ಕರೆಗಳು ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲೂ ಅವರಿಗೆ ಬೆದರಿಕೆ ಹಾಕಲಾಗಿದೆ. ಹಾಗಾಗಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲು ಕೇಂದ್ರ ಸರ್ಕಾರದಿಂದ ತೀರ್ಮಾನಿಸಲಾಗಿದೆ. 7ರಿಂದ 8 ಜನ CRPF ಕಮಾಂಡೋಗಳು ವಿವೇಕ್ ಅವರಿಗೆ ಭದ್ರತೆ ಒದಗಿಸಲಿದ್ದಾರೆ. ಸಿನಿಮಾದ ಬಿಡುಗಡೆಗೂ ಮುನ್ನವೇ ಅವರಿಗೆ ಅನೇಕರು ಕೊಲೆ ಬೆದರಿಗೆ ಹಾಕಿದ್ದರು. ಆ ಕಾರಣದಿಂದ ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಡಿಆ್ಯಕ್ಟೀವೇಟ್ ಮಾಡುವುದಾಗಿ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದರು. ಸಿನಿಮಾ ಬಿಡುಗಡೆ ಆದ ಬಳಿಕ ಬೆದರಿಕೆ ಕರೆಗಳು ಹೆಚ್ಚಿವೆ ಎನ್ನಲಾಗಿದೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು
‘ದಿ ಕಾಶ್ಮೀರ್ ಫೈಲ್ಸ್’ನಲ್ಲಿ ಹಿಂಸೆಯ ಚಿತ್ರಣ ಇದೆ, ಆದರೆ ಪರಿಹಾರ ಇಲ್ಲ; ಛತ್ತೀಸ್‌ಗಢ ಮುಖ್ಯಮಂತ್ರಿ ಟೀಕೆ