‘ದಿ ಕಾಶ್ಮೀರ್​ ಫೈಲ್ಸ್​​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಹಿನ್ನೆಲೆ ಏನು? ಇಲ್ಲಿದೆ ಅವರ ಲವ್​ಸ್ಟೋರಿ

| Updated By: ಮದನ್​ ಕುಮಾರ್​

Updated on: Mar 27, 2022 | 9:19 AM

Pallavi Joshi | Vivek Agnihotri: ವಿವೇಕ್​ ಅಗ್ನಿಹೋತ್ರಿ-ಪಲ್ಲವಿ ಜೋಶಿ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಚಿತ್ರರಂಗದ ವ್ಯಕ್ತಿಯನ್ನೇ ಮದುವೆ ಆಗಿರುವುದಕ್ಕೆ ಪಲ್ಲವಿ ಜೋಶಿ ಅವರಿಗೆ ಖುಷಿ ಇದೆ.

‘ದಿ ಕಾಶ್ಮೀರ್​ ಫೈಲ್ಸ್​​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಹಿನ್ನೆಲೆ ಏನು? ಇಲ್ಲಿದೆ ಅವರ ಲವ್​ಸ್ಟೋರಿ
ವಿವೇಕ್ ಅಗ್ನಿಹೋತ್ರಿ, ಪಲ್ಲವಿ ಜೋಶಿ
Follow us on

ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡಿರುವ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾದ ಬಗ್ಗೆ ಪರ-ವಿರೋಧದ ಚರ್ಚೆ ಆಗುತ್ತಿದೆ. 1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Director Vivek Agnihotri) ಅವರು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ವಿವೇಕ್​ ಅಗ್ನಿಹೋತ್ರಿ ಅವರು ಅನೇಕ ವರ್ಷಗಳಿಂದ ಬಾಲಿವುಡ್​ನಲ್ಲಿ ಇದ್ದರೂ ಕೂಡ ಅವರಿಗೆ ದೇಶಾದ್ಯಂತ ಜನಪ್ರಿಯತೆ ಸಿಕ್ಕಿದ್ದು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಿಂದ. ಈಗ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಿದ್ದಾರೆ. ವಿವೇಕ್​ ಅಗ್ನಿಹೋತ್ರಿ ಅವರ ಪತ್ನಿ ಪಲ್ಲವಿ ಜೋಶಿ (Pallavi Joshi) ಬಗ್ಗೆಯೂ ಜನರು ಗೂಗಲ್​ನಲ್ಲಿ ಸರ್ಚ್​ ಮಾಡುತ್ತಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ಪಲ್ಲವಿ ಜೋಶಿ ಕೂಡ ನಟಿಸಿದ್ದಾರೆ. ರಾಧಿಕಾ ಮೆನನ್​ ಎಂಬ ಪ್ರೊಫೆಸರ್​ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿವೇಕ್​ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ಮದುವೆ ಆಗಿದ್ದು ಯಾವಾಗ? ಇಬ್ಬರ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಆ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿದೆ ಉತ್ತರ..

ಚಿತ್ರರಂಗದಲ್ಲಿ ಪಲ್ಲವಿ ಜೋಶಿ ಮತ್ತು ವಿವೇಕ್​ ಅಗ್ನಿಹೋತ್ರಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಜಾಹೀರಾತು ನಿರ್ಮಾಣ ಕ್ಷೇತ್ರದಲ್ಲಿ ವಿವೇಕ್​ ಅಗ್ನಿಹೋತ್ರಿ ಕೆಲಸ ಮಾಡುತ್ತಿದ್ದರು. ಇನ್ನು, ಪಲ್ಲವಿ ಜೋಶಿ ಅವರು ಬಾಲನಟಿಯಾಗಿಯೇ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಪ್ಯಾರಲಲ್​ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಕಿರುತೆರೆ ಲೋಕದಲ್ಲೂ ಅವರು ಸಖತ್​ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಹಲವು ವರ್ಷಗಳ ಹಿಂದೆ ಮ್ಯೂಸಿಕ್​ ಕಾರ್ಯಕ್ರಮವೊಂದರಲ್ಲಿ ಪಲ್ಲವಿ ಜೋಶಿ ಮತ್ತು ವಿವೇಕ್​ ಅಗ್ನಿಹೋತ್ರಿ ಅವರ ಮೊದಲ ಭೇಟಿ ಆಯಿತು. ಇಬ್ಬರಿಗೂ ಪರಸ್ಪರ ಪರಿಚಯ ಇರಲಿಲ್ಲ. ಕಾಮನ್​ ಫ್ರೆಂಡ್​ ಮೂಲಕ ಅವರ ನಡುವೆ ಪರಿಚಯ ಬೆಳೆಯಿತು. ಮೊದಲ ಭೇಟಿಯಲ್ಲಿ ವಿವೇಕ್​ ಅವರನ್ನು ಕಂಡಾಗ ಪಲ್ಲವಿ ಜೋಶಿಗೆ ಒಳ್ಳೆಯ ಭಾವನೆ ಮೂಡಲಿಲ್ಲ! ‘ಶಾದಿ ಟೈಮ್ಸ್​’ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪಲ್ಲವಿ​ ಮಾತನಾಡಿದ್ದರು. ‘ನನಗೆ ಬಾಯಾರಿಕೆ ಆಗಿತ್ತು. ವಿವೇಕ್​ ಅವರು ಕುಡಿಯಲು ಏನೋ ತಂದುಕೊಟ್ಟರು. ಮೊದಲಿಗೆ ನನಗೆ ಅವರು ಇಷ್ಟ ಆಗಲಿಲ್ಲ. ಅವರು ಸ್ವಲ್ಪ ಒರಟು ಸ್ವಭಾವದವರು ಅಂತ ನನಗೆ ಅನಿಸಿತು’ ಎಂದು ಪಲ್ಲವಿ ಹೇಳಿದ್ದರು.

ಆ ಭೇಟಿಯ ಬಳಿಕ ವಿವೇಕ್​ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ನಡುವೆ ಸ್ನೇಹ ಬೆಳೆಯಿತು. ಅವರಿಬ್ಬರು ಪದೇಪದೇ ಭೇಟಿ ಮಾಡಲು ಆರಂಭಿಸಿದರು. ನಂತರ ಅವರ ಸ್ನೇಹವು ಪ್ರೀತಿಯಾಗಿ ಬದಲಾಯಿತು. ಮೂರು ವರ್ಷಗಳ ಕಾಲ ರಿಲೇಶನ್​ಶಿಪ್​ನಲ್ಲಿ ಇದ್ದ ಈ ಜೋಡಿ ಹಕ್ಕಿಗಳು 1997ರ ಜೂ.28ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ನೆರವೇರಿತು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಚಿತ್ರರಂಗದ ವ್ಯಕ್ತಿಯನ್ನೇ ಮದುವೆ ಆಗಿರುವುದಕ್ಕೆ ಪಲ್ಲವಿ ಜೋಶಿ ಅವರಿಗೆ ಖುಷಿ ಇದೆ. ಯಾಕೆಂದರೆ ಕೆಲಸದ ವಾತಾವರಣದ ಬಗ್ಗೆ ಪರಸ್ಪರ ಇಬ್ಬರಿಗೂ ಅರ್ಥ ಆಗುತ್ತದೆ. ‘ಒಬ್ಬ ಡಾಕ್ಟರ್​ ಅಥವಾ ಇಂಜಿನಿಯರ್​ ಜೊತೆ ನನ್ನ ಮದುವೆ ಆಗಿದಿದ್ದರೆ ಇಂಥ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ’ ಎಂಬುದು ಪಲ್ಲವಿ ಜೋಶಿ ಅಭಿಪ್ರಾಯ.

‘ದಿ ತಾಷ್ಕೆಂಟ್​ ಫೈಲ್ಸ್​’, ‘ದಿ ಕಾಶ್ಮೀರ್​ ಫೈಲ್ಸ್​’ ಮುಂತಾದ ಸಿನಿಮಾಗಳಲ್ಲಿ ವಿವೇಕ್​ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ಅವರು ಜೊತೆಯಾಗಿ ಕೆಲಸ ಮಾಡಿದ್ದಾರೆ. ‘ದಿ ತಾಷ್ಕೆಂಟ್​ ಫೈಲ್ಸ್​’ ಚಿತ್ರದ ನಟನೆಗಾಗಿ ಪಲ್ಲವಿ ಜೋಶಿ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ ಸಿಕ್ಕಿತು.

ಇದನ್ನೂ ಓದಿ:

‘ದಿ ಕಾಶ್ಮೀರ್​ ಫೈಲ್ಸ್​’ ಮಾತ್ರವಲ್ಲ, ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ ಇತರೆ ಚಿತ್ರಗಳ ಬಗ್ಗೆ ನಿಮಗೆ ಗೊತ್ತಾ?

ವಿವೇಕ್​ ಅಗ್ನಿಹೋತ್ರಿ ಹಿನ್ನೆಲೆ ಏನು? ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ದೇಶಕರ ಬಗ್ಗೆ ಇಲ್ಲಿದೆ ಮಾಹಿತಿ..