ನಟನೆಗೆ ವಿದಾಯ ಹೇಳಲು ಆಮಿರ್ ಖಾನ್ ನಿರ್ಧಾರ ಮಾಡಿದ್ದ ಸಂಗತಿ ಬಯಲು; ಮಾಜಿ ಪತ್ನಿ ಏನು ಹೇಳಿದ್ರು?
Aamir Khan: ಸಿನಿಮಾರಂಗವನ್ನು ಬಿಟ್ಟು ಬಿಡಬೇಕು ಎಂದು ಆಮಿರ್ ಖಾನ್ ಅವರಿಗೆ ಅನಿಸಿದ್ದಕ್ಕೆ ಬಲವಾದ ಕಾರಣ ಇದೆ. ಇಷ್ಟು ವರ್ಷಗಳ ತಮ್ಮ ವೃತ್ತಿಜೀವನದ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.
ನಟ ಆಮಿರ್ ಖಾನ್ (Aamir Khan) ಅವರಿಗೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಡಿಮ್ಯಾಂಡ್ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆ ಬಗ್ಗೆ ಬೇರೆಯದೇ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ.11ರಂದು ಆ ಚಿತ್ರ ತೆರೆಕಾಣಲಿದೆ. ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕ ಪದೇಪದೇ ಮುಂದೂಡಲ್ಪಡುತ್ತಿದೆ. ಈಗ ಅವರು ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರಚಾರದ ಕಡೆಗೆ ಗಮನ ಹರಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಆಮಿರ್ ಖಾನ್ ಅವರು ಕೆಲವು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೆಲವೇ ತಿಂಗಳ ಹಿಂದೆ ಅವರು ನಟನೆಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದರು! ಆ ವಿಚಾರವನ್ನು ಈಗ ಆಮಿರ್ ಖಾನ್ ಬಾಯಿ ಬಿಟ್ಟಿದ್ದಾರೆ. ತಮ್ಮ ಈ ಗಟ್ಟಿ ನಿರ್ಧಾರವನ್ನು ಮಾಜಿ ಪತ್ನಿ ಕಿರಣ್ ರಾವ್ (Kiran Rao) ಬಳಿ ಅವರು ಹೇಳಿಕೊಂಡಿದ್ದರಂತೆ. ಆಗ ಕಿರಣ್ ರಾವ್ ಏನು ಹೇಳಿದ್ದರು? ಈ ಎಲ್ಲ ವಿಚಾರವನ್ನು ಈಗ ಆಮಿರ್ ಖಾನ್ ಬಹಿರಂಗಪಡಿಸಿದ್ದಾರೆ.
ಸಿನಿಮಾರಂಗವನ್ನು ಬಿಟ್ಟು ಬಿಡಬೇಕು ಎಂದು ಆಮಿರ್ ಖಾನ್ ಅವರಿಗೆ ಅನಿಸಿದ್ದಕ್ಕೆ ಬಲವಾದ ಕಾರಣ ಇದೆ. ಇಷ್ಟು ವರ್ಷಗಳ ತಮ್ಮ ವೃತ್ತಿಜೀವನದ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. 23ನೇ ವಯಸ್ಸಿನಲ್ಲೇ ಅವರು ಹೀರೋ ಆದರು. ಆ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಕೆಲಸದಲ್ಲಿ ಬ್ಯುಸಿ ಆಗಿಬಿಟ್ಟರು. ಈ ಪಯಣದಲ್ಲಿ ಅವರಿಗೆ ಮನೆ, ಸಂಸಾರ, ಹೆಂಡತಿ, ಮಕ್ಕಳ ಕಡೆಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆ ಬಗ್ಗೆ ಅವರಿಗೆ ಈಗ ಪಶ್ಚಾತಾಪ ಕಾಣುತ್ತಿದೆ.
‘ನನ್ನ ಕನಸುಗಳನ್ನು ನನಸು ಮಾಡಿಕೊಳ್ಳುವುದರಲ್ಲೇ ನನ್ನ ಜೀವನ ಕಳೆದುಬಿಟ್ಟೆ ಅಂತ ನನಗೆ ಅನಿಸುತ್ತದೆ. ಈ ಪಯಣದಲ್ಲಿ ನಾನು ನನ್ನ ಪ್ರೀತಿಪಾತ್ರರ ಬಗ್ಗೆ ಗಮನವೇ ನೀಡಲಿಲ್ಲ. ಅಪ್ಪ-ಅಮ್ಮ, ಸಹೋದರರು, ಮಕ್ಕಳು, ಮೊದಲ ಹೆಂಡತಿ ರೀನಾ, ಎರಡನೇ ಹೆಂಡತಿ ಕಿರಣ್ ರಾವ್, ಅತ್ತೆ-ಮಾವಂದಿರು.. ಹೀಗೆ ಯಾರಿಗೂ ಕೂಡ ನಾನು ಸಮಯ ನೀಡಲು ಸಾಧ್ಯವಾಗಲಿಲ್ಲ. ನನ್ನ ಮಗಳಿಗೆ ಈಗ 23 ವರ್ಷ ವಯಸ್ಸು. ಚಿಕ್ಕವಳಿದ್ದಾಗ ಅವಳು ನನ್ನ ಉಪಸ್ಥಿತಿಯನ್ನು ತುಂಬ ಮಿಸ್ ಮಾಡಿಕೊಂಡಿರುತ್ತಾಳೆ ಎಂಬುದು ನನಗೆ ಗೊತ್ತು. ಆಕೆಗೆ ಅವಳದ್ದೇ ಆದ ಭಾವನೆಗಳು ಇರುತ್ತವೆ. ಆ ಸಂದರ್ಭದಲ್ಲಿ ಅವಳ ಜೊತೆ ನಾನು ಇರಲಿಲ್ಲ. ಆಕೆಯ ಭಾವನೆಗಳ ಬಗ್ಗೆ ನನಗೆ ತಿಳಿದಿರಲೇ ಇಲ್ಲ. ಆದರೆ ನನ್ನ ನಿರ್ದೇಶಕರ ಕನಸು, ಭಯ, ಭರವಸೆಗಳ ಬಗ್ಗೆ ನನಗೆ ತಿಳಿದಿತ್ತು’ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಈ ಎಲ್ಲ ವಿಚಾರಗಳನ್ನು ಆಲೋಚನೆ ಮಾಡಿದ ಬಳಿಕ ಆಮಿರ್ ಖಾನ್ ಅವರು ಚಿತ್ರರಂಗಕ್ಕೆ ಗುಡ್ಬೈ ಹೇಳಲು ನಿರ್ಧರಿಸಿದ್ದರು. ಅದನ್ನು ಕುಟುಂಬದವರ ಜೊತೆ ಹೇಳಿಕೊಂಡಿದ್ದರು. ಆದರೆ ಮನೆಯವರು ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಫ್ಯಾಮಿಲಿ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವಂತೆ ಹೆಂಡತಿ-ಮಕ್ಕಳು ಸಲಹೆ ನೀಡಿದರು. ‘ನನ್ನ ನಿರ್ಧಾರ ತಿಳಿದು ಕಿರಣ್ ರಾವ್ ಅವರಿಗೆ ತೀವ್ರ ನೋವಾಗಿತ್ತು. ಕಣ್ಣೀರು ತುಂಬಿಕೊಂಡ ಅವರು ಈ ನಿರ್ಧಾರ ಬದಲಾಯಿಸುವಂತೆ ಸಲಹೆ ನೀಡಿದರು. ನಿಮ್ಮ ನರನಾಡಿಗಳಲ್ಲಿ ಸಿನಿಮಾ ಪ್ರವಹಿಸುತ್ತಿದೆ ಅಂತ ಹೇಳಿದರು’ ಎಂದಿದ್ದಾರೆ ಆಮಿರ್ ಖಾನ್.
ಕೆಲವೇ ದಿನಗಳ ಹಿಂದೆ ಮಾಜಿ ಪತ್ನಿಯರ ಬಗ್ಗೆ ಆಮಿರ್ ಖಾನ್ ಮಾತನಾಡಿದ್ದರು. ವಿಚ್ಛೇದನ ಪಡೆದಿದ್ದರೂ ಕೂಡ ರಿನಾ ದತ್ತ ಮತ್ತು ಕಿರಣ್ ರಾವ್ ಜೊತೆ ತಾವು ಸಂಪರ್ಕ ಹೊಂದಿರುವುದಾಗಿ ಅವರು ತಿಳಿಸಿದ್ದರು.
ಇದನ್ನೂ ಓದಿ:
‘ಡಿವೋರ್ಸ್ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್ ಖಾನ್
‘ಕೆಜಿಎಫ್ 2’ ಜತೆಗಿನ ರೇಸ್ನಿಂದ ಹಿಂದೆ ಸರಿದ ‘ಲಾಲ್ ಸಿಂಗ್ ಛಡ್ಡಾ’; ಆಮಿರ್ ಖಾನ್ ನೀಡಿದ ಕಾರಣ ಏನು?