ಅನೇಕ ಕಾರಣಗಳಿಂದಾಗಿ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಬಗ್ಗೆ ಚರ್ಚೆ ಆಗುತ್ತಿದೆ. ಚಿತ್ರರಂಗದ ಅನೇಕ ಸಿದ್ಧಸೂತ್ರಗಳನ್ನು ಮುರಿದು ಈ ಚಿತ್ರ ಸಾಧನೆ ಮಾಡಿದೆ. ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತ ಅಚ್ಚರಿ ಮೂಡಿಸುತ್ತಿದೆ. ವಿವೇಕ್ ಅಗ್ನಿಹೋತ್ರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ವಿಥುನ್ ಚಕ್ರವರ್ತಿ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಿಲೀಸ್ ಆಗಿ 10 ದಿನ ಕಳೆದಿದ್ದರೂ ಕೂಡ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದು ಈ ಸಿನಿಮಾದ ಹೆಚ್ಚುಗಾರಿಕೆ. ಈಗ ಈ ಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ನಿರ್ಧರಿಸಿದ್ದಾರೆ. ಆ ಮೂಲಕ ಅವರು ಜನರಿಗೆ ಬಂಪರ್ ಆಫರ್ ನೀಡಿದ್ದಾರೆ. ಒಂದು ವಾರಗಳ ಕಾಲ ಉಚಿತವಾಗಿ ಅವರು ಸಿನಿಮಾ ತೋರಿಸಲಿದ್ದಾರೆ. ವಿಜಯಪುರದ (Vijayapura) ‘ಅಪ್ಸರಾ’ ಚಿತ್ರಮಂದಿರದಲ್ಲಿ ಅದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಹೇಳಲಾಯಿತು. ಈ ಸಿನಿಮಾ ನೋಡಿದ ಪ್ರೇಕ್ಷಕರು ಎಮೋಷನಲ್ ಆಗಿ ಚಿತ್ರಮಂದಿರದಿಂದ ಹೊರಬರುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕಾರಣಿಗಳು ಈ ಸಿನಿಮಾವನ್ನು ಹೊಗಳಿದ್ದಾರೆ. ಶಾಸಕರು ಮತ್ತು ಸಚಿವರಿಗೆ ಕೆಲವೇ ದಿನಗಳ ಹಿಂದೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈಗ ಜನರು ಉಚಿತವಾಗಿ ಸಿನಿಮಾ ನೋಡಲಿ ಎಂಬ ಉದ್ದೇಶದಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯವಸ್ಥೆ ಮಾಡಿದ್ದಾರೆ.
ಇಂದಿನಿಂದ (ಮಾ.21) ಒಂದು ವಾರಗಳ ಕಾಲ ವಿಜಯಪುರದ ‘ಅಪ್ಸರಾ’ ಚಿತ್ರಮಂದಿರದಲ್ಲಿ ಮಧ್ಯಾಹ್ನದ ಒಂದು ಶೋ ಅನ್ನು ಜನರು ಉಚಿತವಾಗಿ ನೋಡಬಹುದು. ಮಧ್ಯಾಹ್ನ 3 ಗಂಟೆಯಿಂದ 6 ಗಂಟೆವರೆಗೆ ನಡೆಯುವ ಪ್ರದರ್ಶನದ ವೆಚ್ಚವನ್ನು ಸ್ವತಃ ಭರಿಸಲು ಬಸನಗೌಡ ಪಾಟೀಲ್ ಯತ್ನಾಳ್ ಮುಂದೆ ಬಂದಿದ್ದಾರೆ. ಆ ಮೂಲಕ ಜನರು ಈ ಸಿನಿಮಾವನ್ನು ನೋಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ‘ಉರಿ’, ‘ಬೇಬಿ’ ಹಾಗೂ ‘ತಾನಾಜಿ’ ಚಿತ್ರಗಳು ಬಿಡುಗಡೆ ಆದಾಗಲೂ ಅವರು ಉಚಿತವಾಗಿ ಸಿನಿಮಾ ಪ್ರದರ್ಶಿಸಲು ಅವಕಾಶ ಕಲ್ಪಿಸಿದ್ದರು.
ಈ ಸಿನಿಮಾದಲ್ಲಿ ಸತ್ಯದ ಅನಾವರಣ ಆಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಸಿದ್ಧಾಂತದ ಪ್ರಚಾರಕ್ಕೆ ಹಿಂಸೆಯ ವೈಭವೀಕರಣ ಆಗಿದೆ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಅದೇನೇ ಇರಲಿ, ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಶೀಘ್ರವೇ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದು ಖಚಿತ ಆಗಿದೆ.
ರಾಮ್ ಗೋಪಾಲ್ ವರ್ಮಾ ಹೊಗಳಿಕೆ:
‘ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಾನು ಸಿನಿಮಾ ವಿಮರ್ಶೆ ಮಾಡುತ್ತಿದ್ದೇನೆ. ಈ ಸಿನಿಮಾದ ವಿವಾದಾತ್ಮಕ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಸಿನಿಮಾವನ್ನು ಹೇಗೆ ಮಾಡಬೇಕು ಎಂಬುದನ್ನು ನಾವೆಲ್ಲ ನಂಬಿದ್ದೆವೋ ಅದೆಲ್ಲವನ್ನೂ ಈ ಚಿತ್ರ ಬದಲಾಯಿಸಿದೆ. ಡ್ರಾಮಾ ಸೃಷ್ಟಿಸಲು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರಯತ್ನಿಸಿಲ್ಲ. ಅನುಪಮ್ ಖೇರ್ ನಟನೆ ಚೆನ್ನಾಗಿದೆ. 10 ದಿನಗಳ ಹಿಂದೆ ನನ್ನನ್ನೂ ಸೇರಿದಂತೆ ಇಡೀ ಸಿನಿಮಾ ಜಗತ್ತು ನಂಬಿದ್ದೇ ಬೇರೆ. ದೊಡ್ಡ ಬಜೆಟ್ನ ಸಿನಿಮಾಗಳು, ಸ್ಟಾರ್ ಹೀರೋಗಳ ಸಿನಿಮಾಗಳು ಮಾತ್ರ ಜನರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುತ್ತವೆ ಅಂತ ನಂಬಿದ್ದೆವು. ಆ ಎಲ್ಲ ನಂಬಿಕೆ ಮತ್ತು ನಿಯಮಗಳನ್ನು ಈ ಸಿನಿಮಾ ಮುರಿದು ಹಾಕಿದೆ. ಜನರನ್ನು ಇಂಪ್ರೆಸ್ ಮಾಡಬೇಕು ಎಂಬ ಪ್ರಯತ್ನವನ್ನೇ ವಿವೇಕ್ ಅಗ್ನಿಹೋತ್ರಿ ಮಾಡಿಲ್ಲ’ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಇದನ್ನೂ ಓದಿ:
‘ದಿ ಕಾಶ್ಮೀರ್ ಫೈಲ್ಸ್’ಗಿಂತಲೂ ಹೆಚ್ಚು IMDb ರೇಟಿಂಗ್ ಪಡೆದ ‘ಜೇಮ್ಸ್’; 10ಕ್ಕೆ 9.9 ನೀಡಿದ ಪ್ರೇಕ್ಷಕರು
‘ದಿ ಕಾಶ್ಮೀರ್ ಫೈಲ್ಸ್’ 200 ಕೋಟಿ ರೂ. ಗಳಿಸೋದು ಖಚಿತ; ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರದ್ದೇ ಆರ್ಭಟ