‘ದಿ ಕಾಶ್ಮೀರ್​ ಫೈಲ್ಸ್​’ 200 ಕೋಟಿ ರೂ. ಗಳಿಸೋದು ಖಚಿತ; ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರದ್ದೇ ಆರ್ಭಟ

The Kashmir Files Box Office Collection: ಪ್ರತಿ ದಿನವೂ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ಬಾಕ್ಸ್​ ಆಫೀಸ್​ ಗಳಿಕೆ ಹೆಚ್ಚುತ್ತಲೇ ಇದೆ. 9ನೇ ದಿನವಾದ ಶನಿವಾರ (ಮಾ.19) ಈ ಚಿತ್ರಕ್ಕೆ 24.80 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.

‘ದಿ ಕಾಶ್ಮೀರ್​ ಫೈಲ್ಸ್​’ 200 ಕೋಟಿ ರೂ. ಗಳಿಸೋದು ಖಚಿತ; ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರದ್ದೇ ಆರ್ಭಟ
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅನುಪಮ್ ಖೇರ್
Follow us
| Updated By: ಮದನ್​ ಕುಮಾರ್​

Updated on: Mar 20, 2022 | 1:05 PM

ಭಾರತೀಯ ಚಿತ್ರರಂಗದಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾ ಹಲವು ದಾಖಲೆಗಳನ್ನು ಮಾಡುತ್ತಿದೆ. ದಿನದಿಂದ ದಿನಕ್ಕೆ ಈ ಚಿತ್ರದ ಗಲ್ಲಾಪೆಟ್ಟಿಗೆ ಗಳಿಕೆ ಜಾಸ್ತಿ ಆಗುತ್ತಲೇ ಇದೆ. ಈ ಬೆಳವಣಿಗೆ ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಆಗಿ 9 ದಿನ ಕಳೆದಿದೆ. ಆದರೂ ಕೂಡ ಇಂದಿಗೂ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ದೇಶಾದ್ಯಂತ ಜನರು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಪರಿಣಾಮವಾಗಿ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್ (The Kashmir Files Box Office Collection)​ ಗಣನೀಯವಾಗಿ ಏರಿಕೆ ಆಗಿದೆ. ಈ ಸಿನಿಮಾ ಎದುರು ಬಿಡುಗಡೆಯಾದ ಹಲವು ಚಿತ್ರಗಳು ಸೋತು ಸುಣ್ಣವಾಗಿವೆ. ‘ರಾಧೆ ಶ್ಯಾಮ್’​, ‘ಬಚ್ಚನ್​ ಪಾಂಡೆ’ ಸಿನಿಮಾಗಳಿಗೂ ಟಫ್​ ಪೈಪೋಟಿ ನೀಡಿ ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ದಾಖಲೆ ಮಾಡುತ್ತಿದೆ. ಈ ಚಿತ್ರಕ್ಕೆ ವಿವೇಕ್​ ಅಗ್ನಿಹೋತ್ರಿ (Vivek Agnihotri) ನಿರ್ದೇಶನ ಮಾಡಿದ್ದು, ಅವರಿಗೆ ಅನೇಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಹಾಗೆಯೇ ಕೆಲವು ವಿವಾದಗಳಿಗೂ ಈ ಸಿನಿಮಾ ಕಾರಣ ಆಗಿದೆ.

ಯಾವುದೇ ಸಿನಿಮಾ ಬಿಡುಗಡೆ ಆದಾಗ ಮೊದಲ ಮೂರು ದಿನ ಭರ್ಜರಿ ಕಲೆಕ್ಷನ್​ ಆಗುತ್ತದೆ. ನಂತರದ ದಿನಗಳಲ್ಲಿ ಕಲೆಕ್ಷನ್​ ನಿಧಾನವಾಗಿ ಕುಸಿಯುತ್ತದೆ. ಆದರೆ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ವಿಚಾರದಲ್ಲಿ ಅದು ಉಲ್ಟಾ ಆಗಿದೆ. ಮೊದಲ ದಿನ ಅತಿ ಕಡಿಮೆ, ಅಂದರೆ 3.55 ಕೋಟಿ ರೂಪಾಯಿ ಗಳಿಸಿದ ಈ ಸಿನಿಮಾ ಮರುದಿನದಿಂದಲೇ ಕಲೆಕ್ಷನ್​ ಹೆಚ್ಚಿಸಿಕೊಂಡಿತು. ಪ್ರತಿ ದಿನವೂ ಈ ಚಿತ್ರದ ಬಾಕ್ಸ್​ ಆಫೀಸ್​ ಗಳಿಕೆ ಹೆಚ್ಚುತ್ತಲೇ ಇದೆ. 9ನೇ ದಿನವಾದ ಶನಿವಾರ (ಮಾ.19) ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರಕ್ಕೆ 24.80 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 9 ದಿನಕ್ಕೆ ಒಟ್ಟು ಕಲೆಕ್ಷನ್​ 141 ಕೋಟಿ ರೂಪಾಯಿ ಆಗಿದೆ.

ಅತಿ ಶೀಘ್ರದಲ್ಲೇ ಈ ಸಿನಿಮಾ 200 ಕೋಟಿ ರೂಪಾಯಿ ಮಾಡಲಿದೆ ಎಂಬುದು ದಟ್ಟವಾಗಿದೆ. ಇಂದು (ಮಾ.20) ಭಾನುವಾರ ಆದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಿದ್ದಾರೆ. ಸಹಜವಾಗಿಯೇ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ಕಲೆಕ್ಷನ್​ ಹೆಚ್ಚಾಗಲಿದೆ. ಭಾನುವಾರ 30 ಕೋಟಿ ರೂಪಾಯಿ ಗಳಿಕೆ ಆಗಬಹುದು ಎಂದು ಗಲ್ಲಾಪೆಟ್ಟಿಗೆ ಲೆಕ್ಕಾಚಾರ ಬಲ್ಲವರು ಊಹಿಸುತ್ತಿದ್ದಾರೆ. ದೇಶದ ಬಹುತೇಕ ಕಡೆಗಳಲ್ಲಿ ಈ ಚಿತ್ರದ ಭಾನುವಾರದ (ಮಾ.20) ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ.

ಸಿನಿಮಾಗೆ ಅಭೂತಪೂರ್ವ ಗೆಲುವು ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ವಿವಾದಗಳು ಹೆಚ್ಚಿರುವ ಕಾರಣ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಯಶಸ್ಸಿನ ಬಳಿಕ ಅವರು ‘ದಿ ದಿಲ್ಲಿ ಫೈಲ್ಸ್​’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ:

The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಆಗುವ ಅವಘಡಗಳ​ ಬಗ್ಗೆ ಆತಂಕ ಹೊರಹಾಕಿದ ಪ್ರಕಾಶ್​ ರಾಜ್​