
2023ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ (National Award) ಘೋಷಣೆ ಮಾಡಲಾಯಿತು. 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ ಪಟ್ಟಿಯಲ್ಲಿ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಕೂಡ ಸ್ಥಾನ ಪಡೆದುಕೊಂಡಿದೆ. ಈ ಸಿನಿಮಾದ ನಿರ್ದೇಶನಕ್ಕಾಗಿ ಸುದೀಪ್ತೋ ಸೇನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ನೀಡಲಾಗಿದೆ. ಈ ಸಿನಿಮಾದ ಛಾಯಾಗ್ರಹಣಕ್ಕೆ ಕೂಡ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ವಿವಾದಾತ್ಮಕ ಅಂಶ ಇದೆ ಎಂಬ ಕಾರಣಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ನೀಡಿದನ್ನು ಹಲವರು ಖಂಡಿಸಿದ್ದಾರೆ. ಈ ನಡುವೆ ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಅವರು ಒಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್ತೋ ಸೇನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸಿನಿಮಾದ ತಾಂತ್ರಿಕ ಬಳಗದಲ್ಲಿ ಕೆಲಸ ಮಾಡಿದವರ ಬಗ್ಗೆ ಸುದೀಪ್ತೋ ಸೇನ್ ಅವರಿಗೆ ಹೆಮ್ಮೆ ಇದೆ. ಈ ಚಿತ್ರದ ಹಲವು ತಂತ್ರಜ್ಞರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು ಎಂದು ಅವರು ಹೇಳಿದ್ದಾರೆ. ಅಲ್ಲದೇ, ಸಿನಿಮಾ ನಟಿ ಅದಾ ಶರ್ಮಾ ಅವರಿಗೆ ‘ಅತ್ತುತ್ತಮ ನಟಿ’ ಪ್ರಶಸ್ತಿ ಸಿಕ್ಕಿಲ್ಲ ಎಂಬುದಕ್ಕೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ದಿ ಕೇರಳ ಸ್ಟೋರಿ’ ಚಿತ್ರವು ಕೇರಳ ರಾಜ್ಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಿದೆ ಎಂಬುದು ಹಲವರ ವಾದ. ಆ ಕಾರಣದಿಂದಲೇ ಕೇರಳದ ಅನೇಕರು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ನೀಡಿದ್ದು ಭಾರತೀಯ ಸಿನಿಮಾ ಪರಂಪರೆಗೆ ಮಾಡಿದ ಅವಮಾನ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇರಳ ಮುಖ್ಯಮಂತ್ರಿ ಹೇಳಿಕೆಗೆ ನಿರ್ದೇಶಕ ಸುದೀಪ್ತೋ ಸೇನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಪಿಣರಾಯಿ ವಿಜಯನ್ ಅವರು ನಮ್ಮ ಸಿನಿಮಾ ನೋಡಿಲ್ಲ ಎನಿಸುತ್ತದೆ. ಒಂದು ವೇಳೆ ಸಿನಿಮಾ ನೋಡಿದ್ದರೆ ಅವರು ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ’ ಎಂದು ಸುದೀಪ್ತೋ ಸೇನ್ ಹೇಳಿದ್ದಾರೆ. 2023ರ ಮೇ 5ರಂದು ಬಿಡುಗಡೆ ಆಗಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: ಚಿತ್ರಮಂದಿರದ ಬಳಿಕ ಒಟಿಟಿಯಲ್ಲೂ ದಾಖಲೆ ಬರೆದ ‘ದಿ ಕೇರಳ ಸ್ಟೋರಿ’
ಕನ್ನಡದ ಸಿನಿಮಾಗಳಿಗೆ ಈ ಬಾರಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಸಿಕ್ಕಿಲ್ಲ. ಶಾರುಖ್ ಖಾನ್ (ಜವಾನ್) ಮತ್ತು ವಿಕ್ರಾಂತ್ ಮಾಸಿ (12th ಫೇಲ್) ಅವರು ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ನಟಿ ರಾಣಿ ಮುಖರ್ಜಿ ಅವರು ‘ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ’ ಚಿತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.