ಚಿತ್ರಮಂದಿರದ ಬಳಿಕ ಒಟಿಟಿಯಲ್ಲೂ ದಾಖಲೆ ಬರೆದ ‘ದಿ ಕೇರಳ ಸ್ಟೋರಿ’
ವಿವಾದದ ಮೂಲಕವೇ ಹೆಚ್ಚು ಸುದ್ದಿ ಆಗಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ಈಗ ಮತ್ತೆ ಚರ್ಚೆ ಆಗುತ್ತಿದೆ. ಕಳೆದ ವರ್ಷ ಥಿಯೇಟರ್ನಲ್ಲಿ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿದ್ದ ಈ ಸಿನಿಮಾ ಈಗ ಒಟಿಟಿಯಲ್ಲಿ ವೀಕ್ಷಣಗೆ ಲಭ್ಯವಾಗಿದೆ. ಒಟಿಟಿಯಲ್ಲೂ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಾಣುತ್ತಿದೆ. ಈ ಚಿತ್ರಕ್ಕೆ ಸುದೀಪ್ತೋ ಸೇನ್ ನಿರ್ದೇಶನ ಮಾಡಿದ್ದಾರೆ.
ನಟಿ ಅದಾ ಶರ್ಮಾ (Adah Sharma) ಅವರು ಮುಖ್ಯ ಭೂಮಿಕೆ ನಿಭಾಯಿಸಿರುವ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 2023ರ ಮೇ 5ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಥಿಯೇಟರ್ನಲ್ಲಿ ಅಬ್ಬರಿಸಿದ ರೀತಿಯೇ ಒಟಿಟಿಯಲ್ಲೂ ಈ ಸಿನಿಮಾ ಧೂಳೆಬ್ಬಿಸುತ್ತಿದೆ. ‘ಜೀ5’ (Zee5) ಒಟಿಟಿ ಮೂಲಕ ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ವಿವಾದಾತ್ಮಕ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಆ ಕಾರಣದಿಂದ ಪ್ರೇಕ್ಷಕರು ಕುತೂಹಲದಿಂದ ವೀಕ್ಷಿಸಿದ್ದಾರೆ.
ಸುದೀಪ್ತೋ ಸೇನ್ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಸಾಕಷ್ಟು ಕಷ್ಟ ಅನುಭವಿಸುವ ಹುಡುಗಿಯ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಕೆಲವರು ಈ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕ ‘ದಿ ಕೇರಳ ಸ್ಟೋರಿ’ ಬಗ್ಗೆ ಮತ್ತೆ ಚರ್ಚೆ ಜೋರಾಗಿದೆ.
ಇದನ್ನೂ ಓದಿ: ಚರ್ಮದ ಸಮಸ್ಯೆಯಿಂದ ಬಳಲುತ್ತಿರುವ ‘ದಿ ಕೇರಳ ಸ್ಟೋರಿ ಖ್ಯಾತಿ’ಯ ಅದಾ ಶರ್ಮ
‘ದಿ ಕೇರಳ ಸ್ಟೋರಿ’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು ಬರೋಬ್ಬರಿ 242 ಕೋಟಿ ರೂಪಾಯಿ. ವಿದೇಶದ ಕಲೆಕ್ಷನ್ ಸೇರಿದರೆ ಅಂದಾಜು 303 ಕೋಟಿ ರೂಪಾಯಿ ಆಗಲಿದೆ. ಅದೇ ರೀತಿ ಒಟಿಟಿಯಲ್ಲೂ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಮೊದಲ ವೀಕೆಂಡ್ನಲ್ಲಿ 150 ಮಿಲಿಯನ್ ನಿಮಿಷಗಳ ವೀಕ್ಷಣೆ ಕಂಡಿದೆ. ಇದು ದಾಖಲೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
‘THE KERALA STORY’ INCREDIBLE VIEWERSHIP… #TheKeralaStory is a success story on OTT as well: 150 million+ watch minutes during the launch weekend… Now streaming on #Zee5 [@ZEE5India].#TheKeralaStoryOnZEE5 #VipulAmrutlalShah pic.twitter.com/zOmZlNNmz6
— taran adarsh (@taran_adarsh) February 19, 2024
ಚಿತ್ರಮಂದಿರದಲ್ಲಿ 9 ತಿಂಗಳ ಹಿಂದೆಯೇ ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆ ಆಗಿದ್ದರೂ ಕೂಡ ಒಟಿಟಿಗೆ ಬರಲು ತಡವಾಯಿತು. ಇದರಲ್ಲಿ ಕಾಂಟ್ರವರ್ಸಿ ಇದೆ ಎಂಬ ಕಾರಣಕ್ಕೆ ಅನೇಕ ಒಟಿಟಿ ಪ್ಲಾಟ್ಫಾರ್ಮ್ಗಳು ಈ ಸಿನಿಮಾವನ್ನು ಪ್ರಸಾರ ಮಾಡಲು ಹಿಂದೇಟು ಹಾಕಿದ್ದವು. ಅಂತಿಮವಾಗಿ ‘ಜೀ5’ ಮೂಲಕ ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಈ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟಿ ಅದಾ ಶರ್ಮಾ ಅವರ ಬೇಡಿಕೆ ಹೆಚ್ಚಾಗಿದೆ. ಅನೇಕ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಹಲವು ಪ್ರಾಜೆಕ್ಟ್ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.