ನಟಿ ಅದಾ ಶರ್ಮಾ (Adah Sharma) ಅವರು ಮುಖ್ಯ ಭೂಮಿಕೆ ನಿಭಾಯಿಸಿದ ‘ದಿ ಕೇರಳ ಸ್ಟೋರಿ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ ಈ ಸಿನಿಮಾ ಈಗ 25 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಮೇ 5ರಂದು ‘ದಿ ಕೇರಳ ಸ್ಟೋರಿ’ (The Kerala Story) ಬಿಡುಗಡೆ ಆಯಿತು. ನೋಡನೋಡುತ್ತಿದ್ದಂತೆಯೇ 25 ದಿನ ಕಳೆದು ಹೋಗಿದೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಅದಾ ಶರ್ಮಾ ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ದೊಡ್ಡ ಮೈಲೇಜ್ ಸಿಕ್ಕಿದೆ. ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಅವರ ಖ್ಯಾತಿ ಕೂಡ ಹೆಚ್ಚಾಗಿದೆ. ನಾಲ್ಕನೇ ವೀಕೆಂಡ್ನಲ್ಲೂ ಅಬ್ಬರಿಸಿದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚಿನ್ನದ ಬೆಳೆ ತೆಗೆದಿದೆ. ಈವರೆಗೂ ಒಟ್ಟು ಕಲೆಕ್ಷನ್ 225 ಕೋಟಿ ರೂಪಾಯಿ ಆಗಿದೆ. ಇಂದಿಗೂ ‘ದಿ ಕೇರಳ ಸ್ಟೋರಿ’ ಸಿನಿಮಾ ಚರ್ಚೆಯಲ್ಲಿದೆ.
ಮೊದಲ ದಿನ ‘ದಿ ಕೇರಳ ಸ್ಟೋರಿ’ ಗಳಿಸಿದ್ದು ಕೇವಲ 8 ಕೋಟಿ ರೂಪಾಯಿ ಮಾತ್ರ. ನಂತರದ ದಿನಗಳಲ್ಲಿ ಇದರ ಕಲೆಕ್ಷನ್ ಹೆಚ್ಚಾಯಿತು. ಯಾವುದೇ ಸ್ಟಾರ್ ಹೀರೋಗಳು ಇಲ್ಲದ ಈ ಚಿತ್ರಕ್ಕೆ ಉತ್ತಮವಾಗಿ ಬಾಯಿ ಮಾತಿನ ಪ್ರಚಾರ ಸಿಕ್ಕಿತು. ಕೆಲವು ಕಡೆಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಇಲ್ಲದಿದ್ದರೂ ಕೂಡ ಇನ್ನುಳಿದ ರಾಜ್ಯಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಂಡಿತು. ವಾರದ ದಿನಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ವೀಕೆಂಡ್ಗಳಲ್ಲಿ ಇನ್ನೂ ಹೆಚ್ಚಿನ ಕಮಾಯಿ ಆಗಲು ಆರಂಭವಾಯಿತು. ಬಾಕ್ಸ್ ಆಫೀಸ್ ತಜ್ಞರಿಗೂ ಅಚ್ಚರಿ ಆಗುವ ರೀತಿಯಲ್ಲಿ ಈ ಸಿನಿಮಾಗೆ ಹಣ ಹರಿದುಬಂದಿದೆ. ಈವರೆಗೂ 225 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆದರೆ 250 ಕೋಟಿ ರೂಪಾಯಿ ತಲುಪುವುದು ಅನುಮಾನ ಎನ್ನಲಾಗುತ್ತಿದೆ.
‘ದಿ ಗೇಮ್ ಆಫ್ ಗಿರ್ಗಿಟ್’ ಎಂಬ ಸಿನಿಮಾಗೆ ಅದಾ ಶರ್ಮಾ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ನ ಖ್ಯಾತ ನಟ ಶ್ರೇಯಸ್ ತಲ್ಪಡೆ ಕೂಡ ನಟಿಸುತ್ತಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಭಾರಿ ಕುಖ್ಯಾತಿ ಪಡೆದಿದ್ದ ಬ್ಲೂ ವೇಲ್ ಗೇಮ್ ಕುರಿತು ಈ ಸಿನಿಮಾ ಸಿದ್ಧವಾಗಲಿದೆ ಎಂಬುದು ವಿಶೇಷ. ‘ಗಾಂಧಾರ್ ಫಿಲ್ಮ್ಸ್ ಆ್ಯಂಡ್ ಸ್ಟುಡಿಯೋ ಪ್ರೈವೇಟ್ ಲಿಮಿಡೆಟ್’ ಸಂಸ್ಥೆ ಮೂಲಕ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಅದಾ ಶರ್ಮಾ ಅವರು ಪೊಲೀಸ್ ಪಾತ್ರ ಮಾಡಲಿದ್ದಾರೆ.
ಇದನ್ನೂ ಓದಿ: Kamal Haasan: ‘ದಿ ಕೇರಳ ಸ್ಟೋರಿ ಒಂದು ಪ್ರೊಪೊಗಾಂಡ ಸಿನಿಮಾ, ಅದರಲ್ಲಿ ಸತ್ಯ ಇಲ್ಲ’: ಕಮಲ್ ಹಾಸನ್ ನೇರ ಟೀಕೆ
ಈ ಸಿನಿಮಾದಲ್ಲಿ ನಟಿಸಲು ಅದಾ ಶರ್ಮಾ ಅವರು ಖುಷಿಯಾಗಿದ್ದಾರೆ. ‘ತಮಗೆ ತಾವೇ ಹಾನಿ ಮಾಡಿಕೊಳ್ಳುವ ಅಥವಾ ಬೇರೆಯವರಿಗೆ ಹಾನಿ ಮಾಡುವ ರೀತಿಯಲ್ಲಿ ಆ ಗೇಮ್ ಇತ್ತು. ಆ ಸಮಸ್ಯೆಗೆ ಪರಿಹಾರ ನೀಡುವ ಪಾತ್ರ ನನ್ನದು’ ಎಂದು ಅವರು ಹೇಳಿದ್ದಾರೆ. ಈ ಹಿಂದೆ ‘ಕಮಾಂಡೋ’ ಸಿನಿಮಾದಲ್ಲಿ ಕೂಡ ಅದಾ ಶರ್ಮಾ ಅವರು ಪೊಲೀಸ್ ಪಾತ್ರ ಮಾಡಿದ್ದರು. ಈಗ ಮತ್ತೊಮ್ಮೆ ಖಾಕಿ ಧರಿಸುತ್ತಿದ್ದಾರೆ.
ಇದನ್ನೂ ಓದಿ: Sudipto Sen: ಆಸ್ಪತ್ರೆ ಸೇರಿದ್ದ ‘ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್ ಆರೋಗ್ಯ ಈಗ ಹೇಗಿದೆ?
‘ದಿ ಗೇಮ್ ಆಫ್ ಗಿರ್ಗಿಟ್’ ಚಿತ್ರಕ್ಕೆ ವಿಶಾಲ್ ಪಾಂಡ್ಯ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಈಗಲೇ ಕುತೂಹಲ ಸೃಷ್ಟಿ ಆಗಿದೆ. ಒಂದು ಕಾಲದಲ್ಲಿ ಬ್ಲೂ ವೇಲ್ ಗೇಮ್ ಬಗ್ಗೆ ಸಾಕಷ್ಟು ಕ್ರೇಜ್ ಇತ್ತು. ಯುವಕರು ಈ ಗೇಮ್ಗೆ ಅಡಿಕ್ಟ್ ಆಗಿದ್ದರು. ಅದರಿಂದ ಸಾಕಷ್ಟು ಅನಾಹುತಗಳು ಆದ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಅಂಥ ಖತರ್ನಾಕ್ ಗೇಮ್ ಕುರಿತು ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾ ಸಿದ್ಧವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.