ದಿ ಕೇರಳ ಸ್ಟೋರಿ ಚಿತ್ರತಂಡಕ್ಕೆ ಉಡುಗೊರೆ ನೀಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ

The Kerala Story: ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದ್ದು, ಸಿನಿಮಾ ತಂಡವು ಯುಪಿ ಸಿಎಂ ಯೋಗಿ ಆದಿತ್ಯನಾಥರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದೆ.

ದಿ ಕೇರಳ ಸ್ಟೋರಿ ಚಿತ್ರತಂಡಕ್ಕೆ ಉಡುಗೊರೆ ನೀಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ್
Follow us
ಮಂಜುನಾಥ ಸಿ.
|

Updated on: May 10, 2023 | 9:56 PM

ಬಿಡುಗಡೆಗೆ ಮುನ್ನವೇ ವಿವಾದ ಎಬ್ಬಿಸಿದ್ದ ‘ದಿ ಕೇರಳ ಸ್ಟೋರಿ‘ (The Kerala Story) ಸಿನಿಮಾ ಬಿಡುಗಡೆ ಬಳಿಕ ಬಾಕ್ಸ್ ಆಫೀಸ್ (Box Office)​ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಕೇವಲ ಐದು ದಿನದಲ್ಲಿ ಐವತ್ತು ಕೋಟಿಗೂ ಹೆಚ್ಚು ಹಣವನ್ನು ‘ದಿ ಕೇರಳ ಸ್ಟೋರಿ’ ಸಿನಿಮಾ ಕಲೆಕ್ಷನ್ ಮಾಡಿದೆ. ಇದರ ಜೊತೆಗೆ ಬಿಜೆಪಿ ಅಧಿಕಾರವಿರುವ ಕೆಲವು ರಾಜ್ಯಗಳಲ್ಲಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಸಿಗುವ ಜೊತೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ನೆರವಿನಿಂದ ಭರ್ಜರಿ ಪ್ರಚಾರವೂ ದೊರೆತಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ಮಧ್ಯ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ದೊರೆತಿದ್ದು, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿಡಿಯೋ ಮೂಲಕ ಇದೊಂದು ನೋಡಲೇ ಬೇಕಾದ ಸಿನಿಮಾ ಎಂದು ಕರೆ ನೀಡಿದ್ದರು. ಅದರ ಬಳಿಕ ಉತ್ತರ ಪ್ರದೇಶದಲ್ಲಿಯೂ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ತೆರಿಗೆ ವಿನಾಯಿತಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದರು. ಇಂದು ‘ದಿ ಕೇರಳ ಸ್ಟೋರಿ’ ಸಿನಿಮಾ ತಂಡವು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದು ಅವರಿಗೆ ಧನ್ಯವಾದ ಅರ್ಪಿಸಿದೆ.

ತಮ್ಮನ್ನು ಭೇಟಿಯಾದ ‘ದಿ ಕೇರಳ ಸ್ಟೋರಿ’ ಸಿನಿಮಾ ತಂಡಕ್ಕೆ ವಿಶೇಷ ಉಡುಗೊರೆಗಳನ್ನು ಸಿಎಂ ಯೋಗಿ ಆದಿತ್ಯನಾಥ್ ನೀಡಿದ್ದಾರೆ. ಭೇಟಿ ವೇಳೆ ನಟಿ ಅದಾ ಶರ್ಮಾ, ನಿರ್ದೇಶಕ ಸುದಿಪ್ತೊ ಸೇನ್, ನಿರ್ಮಾಪಕ ವಿಪುಲ್ ಅಮೃತ್​ಲಾಲ್ ಶಾ ಅವರುಗಳು ಇದ್ದರು. ಉತ್ತರ ಪ್ರದೇಶದಲ್ಲಿ ತಮ್ಮ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಕ್ಕೆ ಧನ್ಯವಾದ ಅರ್ಪಿಸಲು ಚಿತ್ರತಂಡವು ಸಿಎಂ ಅವರನ್ನು ಲಖನೌನಲ್ಲಿ ಭೇಟಿಯಾಗಿತ್ತು.

ಇದನ್ನೂ ಓದಿ:The Kerala Story: ಹಾಫ್​ ಸೆಂಚುರಿ ಬಾರಿಸಿದ ‘ದಿ ಕೇರಳ ಸ್ಟೋರಿ’; 5 ದಿನವೂ ಅಬ್ಬರಿಸಿದ ಚಿತ್ರಕ್ಕೆ 56 ಕೋಟಿ ರೂಪಾಯಿ ಗಳಿಕೆ

ಮಧ್ಯ ಪ್ರದೇಶ, ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಣೆ ಆಗಿದೆ. ಆದರೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿನಿಮಾಕ್ಕೆ ವಿರೋಧವೂ ವ್ಯಕ್ತವಾಗಿದೆ. ತಮಿಳುನಾಡಿನ ಕೆಲವೆಡೆ ದಿ ಕೇರಳ ಸ್ಟೋರಿ ಸಿನಿಮಾದ ಪ್ರದರ್ಶನಕ್ಕೆ ಅಡ್ಡಿಪಡಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿಯೂ ಸಿನಿಮಾ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗಿದೆ. ಕೇರಳ ಸರ್ಕಾರವು ಸಹ ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ದಿ ಕೇರಳ ಸ್ಟೋರಿ ಸಿನಿಮಾವು ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರದ ಕತೆಯನ್ನು ಒಳಗೊಂಡಿದೆ. ಚಿತ್ರತಂಡವು ಟ್ರೈಲರ್ ಬಿಡುಗಡೆ ಮಾಡಿದಾಗ ಕೇರಳದಲ್ಲಿ 32,000 ಹಿಂದು ಹಾಗೂ ಕ್ರಿಶ್ಚಿಯನ್ ಯುವತಿಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ, ಹಲವರನ್ನು ಐಸಿಸ್ ಕ್ಯಾಂಪ್​ಗಳಿಗೆ ಕಳಿಸಲಾಗಿದೆ ಎಂದಿತ್ತು. ಸಿನಿಮಾದ ವಿರುದ್ಧ ಕೇರಳ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಕೇರಳದಲ್ಲಿ ಸಿನಿಮಾ ಬಿಡುಗಡೆ ಆಗದಂತೆ ತಡೆಯಲು ಕಾನೂನು ಹೋರಾಟವನ್ನು ಮಾಡಿತು. ಆದರೆ ಸಿನಿಮಾ ನಿಷೇಧಕ್ಕೆ ಒಪ್ಪದ ನ್ಯಾಯಾಲಯವು ಕೇರಳ ಸರ್ಕಾರದ ಮನವಿಯನ್ನು ತಳ್ಳಿ ಹಾಕಿತು.

ಇದೀಗ ದಿ ಕೇರಳ ಸ್ಟೋರಿ ಸಿನಿಮಾ, ದೇಶದ ಹಲವು ನಗರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆ ಆದ ಕೇವಲ ಐದು ದಿನಕ್ಕೆ 56 ಕೋಟಿ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ