ಬಾಲಿವುಡ್ನಲ್ಲಿ ಪ್ರಣಯ ಪಕ್ಷಿಗಳಿಗೆ ಲೆಕ್ಕವಿಲ್ಲ. ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರೆ ಸಾಕು, ಆ ನಟ-ನಟಿಯರ ನಡುವೆ ಲವ್ ಬೆಳೆದುಬಿಡುತ್ತದೆ. ಆದರೆ ಆ ಸಂಬಂಧ ಹೆಚ್ಚು ದಿನ ಉಳಿದುಕೊಳ್ಳುವುದು ಅಪರೂಪ. ನಟ ಟೈಗರ್ ಶ್ರಾಫ್ (Disha Patani) ಮತ್ತು ನಟಿ ದಿಶಾ ಪಟಾನಿ (Tiger Shroff) ಅವರು ಕಳೆದ 6 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅವರಿಬ್ಬರು ಲಿವ್-ಇನ್-ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂಬ ಮಾಹಿತಿ ಕೂಡ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜೋಡಿ ಹಕ್ಕಿಗಳು ಬ್ರೇಕಪ್ (Break up) ಮಾಡಿಕೊಂಡಿವೆ ಎನ್ನುತ್ತಿವೆ ಮೂಲಗಳು. ಅಷ್ಟಕ್ಕೂ ಇಬ್ಬರ ನಡುವಿನ ಪ್ರೀತಿ ಅಂತ್ಯವಾಗಲು ಕಾರಣ ಏನು? ಮದುವೆ ಪ್ರಸ್ತಾಪ! ಹೌದು, ಹೀಗೊಂದು ಗಾಸಿಪ್ ಬಿ-ಟೌನ್ ಅಂಗಳದಲ್ಲಿ ಕೇಳಿಬರುತ್ತಿದೆ.
ಹಿಂದಿ ಚಿತ್ರರಂಗದಲ್ಲಿ ಅನೇಕ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕತ್ರಿನಾ ಕೈಫ್, ಆಲಿಯಾ ಭಟ್ ಮುಂತಾದ ನಟಿಯರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅದೇ ರೀತಿ ತಾವು ಕೂಡ ಮದುವೆ ಆಗಬೇಕು ಎಂಬ ಹಂಬಲ ದಿಶಾ ಪಟಾನಿ ಮನದಲ್ಲಿ ಮೂಡಿದೆ. ಆದರೆ ಅದಕ್ಕೆ ಟೈಗರ್ ಶ್ರಾಫ್ ಕಡೆಯಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ಗುಸುಗುಸು ಹಬ್ಬಿದೆ.
ಗರ್ಲ್ಫ್ರೆಂಡ್ ದಿಶಾ ಪಟಾನಿಯ ಆಸೆಗೆ ಇಂಬು ನೀಡಲು ಟೈಗರ್ ಶ್ರಾಫ್ ಈಗಲೇ ಸಿದ್ಧರಿಲ್ಲವಂತೆ. ಹಾಗಾಗಿ ಇಷ್ಟು ಬೇಗ ಮದುವೆ ಆಗುವುದು ಬೇಡ ಎಂದು ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಮೂಡಿದೆ. ಆ ಕಾರಣದಿಂದಲೇ ಬ್ರೇಕಪ್ ನಿರ್ಧಾರಕ್ಕೆ ಬರಲಾಗಿದೆ ಎಂದು ಗಾಸಿಪ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ವಿಷಯದ ಬಗ್ಗೆ ಅಧಿಕೃತವಾಗಿ ಯಾರೂ ಹೇಳಿಕೆ ನೀಡಿಲ್ಲ.
ಬಾಲಿವುಡ್ನಲ್ಲಿ ಟೈಗರ್ ಶ್ರಾಫ್ ಅವರಿಗೆ ಸಖತ್ ಬೇಡಿಕೆ ಇದೆ. ಆ್ಯಕ್ಷನ್ ಹೀರೋ ಆಗಿ ಅವರು ಮಿಂಚುತ್ತಿದ್ದಾರೆ. ಈಗ ಅವರಿಗೆ 32 ವರ್ಷ ವಯಸ್ಸು. ಇಷ್ಟು ಬೇಗ ಮದುವೆ ಆಗಿ ಸಂಸಾರ ಆರಂಭಿಸಲು ಟೈಗರ್ ಶ್ರಾಫ್ ಸಿದ್ಧರಿಲ್ಲ. ಆದರೆ ಮದುವೆಗೆ ದಿಶಾ ಪಟಾನಿ ಅವಸರ ಮಾಡುತ್ತಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಕಿರಿಕ್ ಆಗಿದೆ ಎನ್ನಲಾಗಿದೆ.
ಇನ್ನು, ದಿಶಾ ಪಟಾನಿ ಕೂಡ ಬಹುಬೇಡಿಕೆ ಹೊಂದಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅವರು ಅಭಿನಯಿಸಿರುವ ‘ಏಕ್ ವಿಲನ್ ರಿಟರ್ನ್ಸ್’ ಚಿತ್ರ ಜುಲೈ 29ರಂದು ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.