ಕಲೆಗೆ ಭಾಷೆಯ ಗಡಿ ಇಲ್ಲ. ಸಿನಿಮಾ ಕೂಡ ರಾಜ್ಯ, ಭಾಷೆ, ದೇಶಗಳ ಗಡಿಯನ್ನು ಮೀರಿ ಬೆಳೆಯುವ ಮಾಧ್ಯಮ. ಕನ್ನಡದ ಹಲವು ತಂತ್ರಜ್ಞರು, ಕಲಾವಿದರು ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಕೆಲವು ನಿರ್ಮಾಪಕರು ಪರಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಿ ಗೆದ್ದಿದ್ದುಂಟು. ಈಗ ಅವರ ಸಾಲಿಗೆ ಸೇರುವ ಪ್ರಯತ್ನಕ್ಕೆ ಕನ್ನಡಿಗ ರಮೇಶ್ ರೆಡ್ಡಿ ಕೂಡ ಕೈ ಹಾಕಿದ್ದಾರೆ. ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅವರು ಈಗ ಬಾಲಿವುಡ್ (Bollywood ) ಚಿತ್ರವೊಂದಕ್ಕೆ ಬಂಡವಾಳ ಹೂಡಿದ್ದಾರೆ. ‘ದಿಲ್ ಹೈ ಗ್ರೇ’ (Dil Hai Gray) ಶೀರ್ಷಿಕೆಯ ಈ ಸಿನಿಮಾದಲ್ಲಿ ಖ್ಯಾತ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಅಭಿನಯಿಸುತ್ತಿದ್ದಾರೆ. ಊರ್ವಶಿ ಅವರಿಗೆ ಕನ್ನಡ ಚಿತ್ರರಂಗದ ಜೊತೆ ನಂಟಿದೆ. 2015ರಲ್ಲಿ ತೆರೆಕಂಡ ಕನ್ನಡದ ‘ಮಿಸ್ಟರ್ ಐರಾವತ’ ಸಿನಿಮಾದಲ್ಲಿ ಊರ್ವಶಿ ರೌಟೇಲಾ ನಾಯಕಿ ಆಗಿದ್ದರು. ಈಗ ಅವರು ನಟಿಸುತ್ತಿರುವ ಹಿಂದಿ ಸಿನಿಮಾವನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಕೆಲವು ಅಪ್ಡೇಟ್ ಮಾಹಿತಿಯನ್ನು ‘ದಿಲ್ ಹೈ ಗ್ರೇ’ ಚಿತ್ರತಂಡ ಹಂಚಿಕೊಂಡಿದೆ.
ಈ ಚಿತ್ರದಲ್ಲಿ ಒಂದು ರೋಚಕವಾದ ಕಥೆ ಇದೆ ಎಂದು ತಂಡ ಹೇಳಿಕೊಂಡಿದೆ. ‘ನಮ್ಮ ಸಿನಿಮಾದಲ್ಲಿ ಕಥೆಯೇ ಹೀರೋ. ಕ್ರೈಂ ಥ್ರಿಲ್ಲರ್ ಎಳೆಯಲ್ಲಿ ಸಾಗುವ ಈ ಸಿನಿಮಾ ಪ್ರಸ್ತುತ ಕಾಲಘಟ್ಟ ಹೆಚ್ಚು ಸೂಕ್ತವಾಗಿದೆ. ಈ ರೀತಿಯ ಸಿನಿಮಾವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಮತ್ತು ಅವರ ತಂಡ ಸಾಕಷ್ಟು ಶ್ರಮ ಹಾಕಿದೆ. ಸದ್ಯ ಬಹುತೇಕ ಕೆಲಸಗಳು ಮುಕ್ತಾಯದ ಹಂತದಲ್ಲಿದೆ. ಜುಲೈನಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಿದ್ದೇವೆ’ ಎಂದು ನಿರ್ಮಾಪಕ ರಮೇಶ್ ರೆಡ್ಡಿ ಮಾಹಿತಿ ನೀಡಿದ್ದಾರೆ.
‘ದಿಲ್ ಹೈ ಗ್ರೇ’ ಒಂದು ಕ್ರೈಂ ಥ್ರಿಲ್ಲರ್ ಪ್ರಕಾರಕ್ಕೆ ಸೇರುವ ಸಿನಿಮಾ. ಈ ಚಿತ್ರದಲ್ಲಿ ಮುಖ್ಯವಾಗಿ ಮೂರು ಪಾತ್ರಗಳು ಇರಲಿವೆ. ಆ ಪಾತ್ರಗಳ ಹಿನ್ನೆಲೆಯಲ್ಲಿ ಇಡೀ ಸಿನಿಮಾದ ಕಥೆ ಸಾಗಲಿದೆ. ನಟ ವಿನೀತ್ ಅವರು ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆನ್ಲೈನ್ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವ ವ್ಯಕ್ತಿಯಾಗಿ ಅಕ್ಷಯ್ ನಟಿಸಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್ನ ಖ್ಯಾತ ನಟಿ ಊರ್ವಶಿ ರೌಟೇಲಾ ಅಭಿನಯಿಸಿದ್ದಾರೆ. ಸುಸಿ ಗಣೇಶನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ತಾರಿಕ್ ಮೊಹಮ್ಮದ್, ನವೀನ್ ಪ್ರಕಾಶ್ ಅವರು ‘ದಿಲ್ ಹೈ ಗ್ರೇ’ ಚಿತ್ರದ ಬರವಣಿಗೆಯಲ್ಲಿ ಕೈ ಜೋಡಿಸಿದ್ದಾರೆ.
‘ನಾವು ಇರುವ ಇಡೀ ಜಗತ್ತೇ ಈಗ ಆನ್ಲೈನ್ ಮಯವಾಗಿದೆ. ಆ ಆನ್ಲೈನ್ನಿಂದ ಅನುಕೂಲಗಳು ಎಷ್ಟು ಇವೆಯೋ ಅಷ್ಟೇ ಅನಾನುಕೂಲಗಳು ಕೂಡ ಇವೆ. ಮೊಬೈಲ್, ಕಂಪ್ಯೂಟರ್ನಲ್ಲಿ ಇಂಟರ್ನೆಟ್ನಿಂದ ಮಹಿಳೆಯರು ಎದುರಿಸುವ ಆತಂಕಕಾರಿ ಸಮಸ್ಯೆಗಳನ್ನು ನಾವು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಸೈಬರ್ ಕ್ರೈಮ್ನ ಮತ್ತೊಂದು ಮುಖ ಈ ಕಥೆಯಲ್ಲಿ ಅನಾವರಣ ಆಗಲಿದೆ’ ಎಂದು ಕಥೆಯ ಬಗ್ಗೆ ಮಾಹಿತಿ ತೆರೆದಿಟ್ಟಿದ್ದಾರೆ ನಿರ್ದೇಶಕ ಸುಸಿ ಗಣೇಶನ್.
ಕನ್ನಡ ಚಿತ್ರರಂಗದಲ್ಲಿ ಕೆಲವು ಗಮನಾರ್ಹ ಸಿನಿಮಾಗಳನ್ನು ನಿರ್ಮಾಣ ಮಾಡಿದ ಅನುಭವ ರಮೇಶ್ ರೆಡ್ಡಿ ಅವರಿಗೆ ಇದೆ. ಮಾಲಾಶ್ರೀ ನಟನೆಯ ‘ಉಪ್ಪು ಹುಳಿ ಖಾರ’, ರಾಷ್ಟ್ರ ಪ್ರಶಸ್ತಿ ಪಡೆದ ‘ನಾತಿಚರಾಮಿ’, ಶ್ರೇಯಸ್ ಮಂಜು ನಟನೆಯ ‘ಪಡ್ಡೆಹುಲಿ’, ರಮೇಶ್ ಅರವಿಂದ್-ರಚಿತಾ ರಾಮ್ ಅಭಿನಯದ ‘100’ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿದ್ದಾರೆ. ಈಗ ‘ಗಾಳಿಪಟ 2’ ಸಿನಿಮಾವನ್ನು ಕೂಡ ಅವರು ನಿರ್ಮಿಸುತ್ತಿದ್ದಾರೆ. ರಮೇಶ್ ರೆಡ್ಡಿ ಅವರು ಹೋಮ್ ಬ್ಯಾನರ್ ‘ಸೂರಜ್ ಪ್ರೊಡಕ್ಷನ್ಸ್’ ಮೂಲಕ ‘ದಿಲ್ ಹೈ ಗ್ರೇ’ ಚಿತ್ರವನ್ನು ನಿರ್ಮಿಸಿ, ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ:
ನಟಿ ಊರ್ವಶಿ ರೌಟೇಲಾಗಾಗಿ 17 ಗಂಟೆ ಕಾದಿದ್ದ ಟೀಂ ಇಂಡಿಯಾ ಕ್ರಿಕೆಟಿಗ; ರಿಲೇಶನ್ಶಿಪ್ ವಿಚಾರ ನಿಜವೇ?
Published On - 3:27 pm, Fri, 8 April 22