ಐಪಿಎಲ್ (IPL) ಶುರುವಾಗಿ ಕೆಲವೇ ದಿನಗಳಾಗಿವೆ. ಐಪಿಎಲ್ ಉದ್ಘಾಟನೆ ಈ ಬಾರಿ ಅದ್ಧೂರಿಯಾಗಿ ನೆರವೇರಿದೆ. ಹಲವು ತಾರಾ ನಟರು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಪಂದ್ಯಗಳನ್ನು ನೋಡಲು ಸಹ ಹಲವು ನಟ-ನಟಿಯರು ಆಗಮಿಸಿ ಮೆಚ್ಚಿನ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ. ಆದರೆ ಬಾಲಿವುಡ್ ನಟ ವರುಣ್ ಧವನ್ ಮಾತ್ರ ಐಪಿಎಲ್ನ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾಗಿದ್ದಾರೆ. ವರುಣ್ ಧವನ್ ಸಿಟ್ಟಿಗೆ ಕಾರಣವೂ ಇದೆ.
ನಿನ್ನೆ (ಮಾರ್ಚ್ 25) ನಡೆದ ಮುಂಬೈ ಹಾಗೂ ಗುಜರಾತ್ ನಡುವೆ ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ನಾಯಿಯೊಂದು ನುಗ್ಗಿತ್ತು. ಆದರೆ ನಾಯಿ ಮೈದಾನದ ಒಳಗೆ ಬರುವುದಕ್ಕೆ ಮೊದಲೇ ಭದ್ರತಾ ಸಿಬ್ಬಂದಿ ಅದನ್ನು ತಡೆಯಲು ಯತ್ನಿಸಿದರು. ಈ ವೇಳೆ ಹಲವರು ನಾಯಿಯನ್ನು ಕಾಲಿನಿಂದಲೂ ಒದ್ದರು. ಆದರೆ ಆ ನಾಯಿ ಎಲ್ಲರಿಂದಲೂ ತಪ್ಪಿಸಿಕೊಂಡು ಮೈದಾನದ ಒಳಕ್ಕೆ ಓಡಿ ಬಂತು. ಕೊನೆಗೆ ಹಾಗೋ ಹೀಗೋ ಮಾಡಿ ನಾಯಿಯನ್ನು ಮೈದಾನದಿಂದ ಹೊರಗೆ ಓಡಿಸಲಾಯ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಾಯಿಯನ್ನು ಒದ್ದ ಭದ್ರತಾ ಸಿಬ್ಬಂದಿ ವಿರುದ್ಧ ಹಲವರು ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲಿ ನಟ ವರುಣ್ ಧವನ್ ಸಹ ಒಬ್ಬರು. ಪ್ರಾಣಿ ಪ್ರೇಮಿಯಾಗಿರುವ ವರುಣ್ ಧವನ್, ಭದ್ರತಾ ಸಿಬ್ಬಂದಿ ನಾಯಿಯನ್ನು ತಡೆಯುವ ಭರದಲ್ಲಿ ಒದೆಯುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ‘ಅದು ನಾಯಿ, ಫುಟ್ಬಾಲ್ ಅಲ್ಲ. ಅಲ್ಲದೆ ಆ ನಾಯಿ ಯಾರಿಗೂ ಕಚ್ಚಲು ಬಂದಿಲ್ಲ, ಯಾರಿಗೂ ಅಪಾಯ ತಂದೊಡ್ಡುತ್ತಿರಲಿಲ್ಲ. ನಾಯಿಯನ್ನು ತಡೆಯಲು ಹಿಂಸೆ ಮಾಡುವುದರ ಬದಲು ಬೇರೆ ದಾರಿ ಕಂಡುಕೊಳ್ಳಬಹುದಿತ್ತು’ ಎಂದಿದ್ದಾರೆ.
ಇದನ್ನೂ ಓದಿ:ಲೈಂಗಿಕ ಕ್ರಿಯೆ ನಡೆಸುವಾಗ ಭಗವದ್ಗೀತೆ ಹಿಡಿದ ಯುವತಿ; ವಿವಾದಾತ್ಮಕ ದೃಶ್ಯವನ್ನು ಪ್ರಶ್ನಿಸಿದ ವರುಣ್ ಧವನ್
ವರುಣ್ ಧವನ್ ಮಾತ್ರವೇ ಅಲ್ಲದೆ, ನಟಿ ವೇದಿಕಾ ಸಹ ಈ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ‘ನಮ್ಮದೇ ಆಸ್ತಿ ಎಂಬಂತೆ ನಾಯಿಯನ್ನು ಒದೆಯಲಾಗುತ್ತಿದೆ. ಪ್ರಾಣಿ ಹಿಂಸೆ ಎಂಬುದು ನಮ್ಮ ದೇಶದ ಕ್ರೀಡೆ ಆಗಿಬಿಟ್ಟಿದೆಯೇ. ಪ್ರಾಣಿ ಹಿಂಸೆಯ ವಿರುದ್ಧ ಸೂಕ್ತವಾದ ಕಾನೂನು ಇಲ್ಲದೇ ಇರುವುದೇ ಇದಕ್ಕೆ ಕಾರಣ ಅನಿಸುತ್ತಿದೆ. ಪ್ರಾಣಿಗಳಿಗೆ ಈ ರೀತಿ ಹಿಂಸೆ ಕೊಟ್ಟು ತಮ್ಮನ್ನು ತಾವು ಮನುಷ್ಯರು ಎಂದು ಕರೆದುಕೊಳ್ಳುವ ಈ ಮನುಷ್ಯರಿಗೆ ಧಿಕ್ಕಾರವಿರಲಿ. ಪ್ರಾಣಿಗಳಿಗೆ ಹೊಡೆಯುವುದು, ಒದೆಯುವುದು, ಹಿಂಸೆ ಮಾಡುವುದು ನಮ್ಮ ಸಂಸ್ಕೃತಿ ಎಂಬಂತಾಗಿಬಿಟ್ಟಿದೆ. ವಿಡಿಯೋನಲ್ಲಿ ಒಬ್ಬ ವ್ಯಕ್ತಿಯಂತೂ ನಾಯಿಗೆ ಬಲವಾಗಿ ಹೊಡೆದಿದ್ದಾನೆ. ಯಾವಾಗ ನಾವು ಪ್ರಾಣಿಗಳಿಗೆ ಗೌರವ ಕೊಡುವುದನ್ನು ಕಲಿಯುತ್ತೇವೆ? ಸೌಮ್ಯವಾಗಿ ವ್ಯವಹರಿಸುವುದು ಕಲಿಯುತ್ತೇವೆ?’ ಎಂದು ಪ್ರಶ್ನೆ ಮಾಡಿದ್ದಾರೆ.
ನಾಯಿಗೆ ಹೊಡೆದಿರುವ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದು, ಹಲವರು ಭದ್ರತಾ ಸಿಬ್ಬಂದಿಯ ಈ ನಡೆಯನ್ನು ಖಂಡಿಸಿದ್ದಾರೆ. ಇನ್ನು ಕೆಲವರು ತಮಾಷೆಗೆ ವಿಡಿಯೋ ಹಂಚಿಕೊಂಡಿದ್ದಾರೆ. ನಾಯಿ ಮೈದಾನಕ್ಕೆ ಪ್ರವೇಶಿಸುತ್ತಿದ್ದಂತೆ ಕೆಲವರು ‘ಹಾರ್ದಿಕ್, ಹಾರ್ದಿಕ್’ ಎಂದು ಕೂಗಿರುವ ವಿಡಿಯೋ ಸಹ ಹರಿದಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:12 pm, Tue, 26 March 24