ಭಾರತದಲ್ಲಿ ಟ್ರೋಲ್‌ ಆದ ಬೆನ್ನಲ್ಲೇ ನಟ ವರುಣ್ ಧವನ್‌ಗೆ ಹಾಲಿವುಡ್ ಆಫರ್?

ಇತ್ತೀಚಿನ ದಿನಗಳಲ್ಲಿ ನಟ ವರುಣ್ ಧವನ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಆದರೆ ಅವರಿಗೆ ಹಾಲಿವುಡ್​ನಿಂದ ಅವಕಾಶ ಬಂದಿದೆ ಎಂಬ ಸುದ್ದಿ ಅಚ್ಚರಿ ಮೂಡಿಸಿದೆ. ಹಾಲಿವುಡ್​ನ ಖ್ಯಾತ ನಿರ್ಮಾಪಕರ ಜೊತೆ ವರುಣ್ ಧವನ್ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಆ ಕುರಿತು ಇಲ್ಲಿದೆ ವಿವರ..

ಭಾರತದಲ್ಲಿ ಟ್ರೋಲ್‌ ಆದ ಬೆನ್ನಲ್ಲೇ ನಟ ವರುಣ್ ಧವನ್‌ಗೆ ಹಾಲಿವುಡ್ ಆಫರ್?
Varun Dhawan

Updated on: May 22, 2026 | 2:56 PM

ಬಾಲಿವುಡ್ ನಟ ವರುಣ್ ಧವನ್ (Varun Dhawan) ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್​ಗೆ ಒಳಗಾಗಿದ್ದರು. ಅವರ ನಗು ಚೆನ್ನಾಗಿಲ್ಲ ಎಂದು ಅನೇಕರು ಟ್ರೋಲ್ ಮಾಡಿದ್ದರು. ಅಲ್ಲದೇ, ‘ಬಾರ್ಡರ್ 2’ ಸಿನಿಮಾದಲ್ಲಿ ಅವರ ನಟನೆ ಸರಿಯಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದರು. ಸೈನಿಕನ ಪಾತ್ರಕ್ಕೆ ವರುಣ್ ಧವನ್ ಹೊಂದಿಕೆ ಆಗುವುದಿಲ್ಲ ಎಂದು ಅನೇಕರು ಲೇವಡಿ ಮಾಡಿದ್ದರು. ಆದರೆ, ಈ ಎಲ್ಲಾ ಟ್ರೋಲ್‌ಗಳ ಬೆನ್ನಲ್ಲೇ ವರುಣ್ ಧವನ್ ಅವರು ತಮ್ಮ ವೃತ್ತಿಜೀವನದಲ್ಲಿ ಭಾರಿ ದೊಡ್ಡ ಹೆಜ್ಜೆಯನ್ನಿಡಲು ಸಜ್ಜಾಗಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಹೌದು, ವರುಣ್ ಧವನ್ ಶೀಘ್ರದಲ್ಲೇ ಹಾಲಿವುಡ್‌ಗೆ (Hollywood) ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ನಟನ ಕಡೆಯಿಂದಾಗಲಿ ಅಥವಾ ಅವರ ತಂಡದಿಂದಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ, ಅಂತಾರಾಷ್ಟ್ರೀಯ ಪ್ರಾಜೆಕ್ಟ್ ಕುರಿತಾದ ಈ ಸುದ್ದಿ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ‘ಪಿಂಕ್‌ವಿಲ್ಲಾ’ ವರದಿಯ ಪ್ರಕಾರ, ಈ ಹಾಲಿವುಡ್ ಚಿತ್ರಕ್ಕೆ ಸಂಬಂಧಿಸಿದ ಮಾತುಕತೆಗಳು ಕಳೆದ ಕೆಲವು ವಾರಗಳಿಂದ ಸರಾಗವಾಗಿ ಮುನ್ನಡೆಯುತ್ತಿವೆ.

‘ವರುಣ್ ಧವನ್‌ಗೆ ಹಾಲಿವುಡ್ ಪ್ರಾಜೆಕ್ಟ್ ಒಂದರ ಆಫರ್ ಬಂದಿದ್ದು, ಅವರು ಇತ್ತೀಚೆಗೆ ಪ್ರಸಿದ್ಧ ಹಾಲಿವುಡ್ ನಿರ್ಮಾಪಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸದ್ಯ ಎರಡೂ ಕಡೆಯಿಂದಲೂ ಮಾತುಕತೆ ಅಂತಿಮ ಹಂತ ತಲುಪಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಪ್ರಾಜೆಕ್ಟ್ ವರುಣ್ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದ ದೊಡ್ಡ ಮೈಲಿಗಲ್ಲಾಗಲಿದೆ’ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಈ ಹಿಂದೆ ವರುಣ್ ಧವನ್ ಅವರು ತಮಗೆ ಹಾಲಿವುಡ್‌ನಲ್ಲಿ ನಟಿಸುವ ಆಸೆಯಿದೆ ಎಂದು ಹೇಳಿಕೊಂಡಿದ್ದರಿಂದ ಈ ಸುದ್ದಿ ಈಗ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ‘ಬಿ ಎ ಮ್ಯಾನ್, ಯಾರ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ವರುಣ್, ತಮ್ಮ ಆರಂಭದ ದಿನಗಳ ಆಸೆಗಳ ಬಗ್ಗೆ ಬಿಚ್ಚಿಟ್ಟಿದ್ದರು.

‘ನಾನು ಹಲವು ನಟನಾ ತರಗತಿಗಳಿಗೆ ಸೇರಿಕೊಂಡಿದ್ದೆ. ನನ್ನ ತಂದೆಗೆ ಶಾಕ್ ನೀಡಬೇಕು ಎಂಬ ಕಾರಣಕ್ಕೆ ಹಾಲಿವುಡ್ ಮೂಲಕವೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಬೇಕು ಎಂಬುದು ನನ್ನ ಯೋಜನೆಯಾಗಿತ್ತು. ನನ್ನನ್ನು ಸ್ಟೀವನ್ ಸ್ಪೀಲ್ಬರ್ಗ್ ಅಥವಾ ಅನುರಾಗ್ ಕಶ್ಯಪ್ ಲಾಂಚ್ ಮಾಡಬೇಕೆಂದು ಬಯಸಿದ್ದೆ. ಈ ಇಬ್ಬರಲ್ಲಿ ಒಬ್ಬರು ನನ್ನನ್ನು ಲಾಂಚ್ ಮಾಡಿದರೆ ಮಾತ್ರ ನನ್ನ ತಂದೆಗೆ ಭಾರಿ ಆಶ್ಚರ್ಯವಾಗುತ್ತದೆ ಎಂದುಕೊಂಡಿದ್ದೆ. ಆದರೆ, ಕರಣ್ ಜೋಹರ್ ನನ್ನನ್ನು ಬಾಲಿವುಡ್‌ಗೆ ಪರಿಚಯಿಸಿದಾಗಲೂ ನನ್ನ ತಂದೆ ಅಷ್ಟೇ ಆಶ್ಚರ್ಯಪಟ್ಟಿದ್ದರು’ ಎಂದು ವರುಣ್ ಧವನ್ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ

ವರುಣ್ ಧವನ್ ಅವರ ಈಗ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಪೂರ್ಣ ರೊಮ್ಯಾಂಟಿಕ್ ಕಮರ್ಷಿಯಲ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಡೇವಿಡ್ ಧವನ್ ನಿರ್ದೇಶನದ ಈ ಸಿನಿಮಾ ಜೂನ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us