ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ತಾವಾಯಿತು, ತಮ್ಮ ಸಿನಿಮಾ ಕೆಲಸವಾಯಿತು ಎಂದು ಇದ್ದವರು. ಇದುವೆರೆಗೆ ಯಾವುದೇ ವಿವಾದಗಳ ಸುಳಿಯಲ್ಲಿ ಸಿಲುಕಿಕೊಂಡ ನಟರೂ ಅವರಲ್ಲ. ಇತ್ತೀಚೆಗೆ ನಟಿ ಕತ್ರಿನಾ ಕೈಫ್ (Katrina Kaif) ಜತೆ ಹಸೆಮಣೆಯೇರಿ ಖುಷಿಯಿಂದ ಇದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರ ವಿರುದ್ಧ ಪ್ರಕರಣವೊಂದು ದಾಖಲಾಗಿ, ದೊಡ್ಡ ಸುದ್ದಿಯಾಗಿತ್ತು.ಇದಕ್ಕೆ ಕಾರಣ ವಿಕ್ಕಿ ಕೌಶಲ್ ಇಂದೋರ್ನ ಬೀದಿಗಳಲ್ಲಿ ಸುತ್ತಾಡಿದ್ದು. ಹೌದು. ಅವರು ಚಿತ್ರೀಕರಣದ ಸಂದರ್ಭ ನಟಿ ಸಾರಾ ಅಲಿ ಖಾನ್ ಜತೆಯಲ್ಲಿ ಬೈಕ್ ಒಂದರಲ್ಲಿ ಕುಳಿತು ಡಿಗ್ಲಾಮ್ ಲುಕ್ನಲ್ಲಿ ಬೈಕ್ ಸವಾರಿ ಮಾಡಿದ್ದರು. ಈ ಸಂದರ್ಭದ ಚಿತ್ರಗಳು ಸಖತ್ ವೈರಲ್ ಆಗಿತ್ತು. ಅದನ್ನು ನೋಡಿದ ವ್ಯಕ್ತಿಯೋರ್ವರು ಆ ಬೈಕ್ನಲ್ಲಿ ಬಳಸಲಾಗಿರುವ ನಂಬರ್ ಪ್ಲೇಟ್ ತಮ್ಮ ಹೆಸರಿನಲ್ಲಿದೆ. ಅನುಮತಿ ಪಡೆಯದೆ ಅಕ್ರಮವಾಗಿ ವಿಕ್ಕಿ ಕೌಶಲ್ ಅದನ್ನು ಬಳಸಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೇಶಾದ್ಯಂತ ಸುದ್ದಿಯಾಗಿದ್ದ ಈ ಪ್ರಕರಣ ತೀವ್ರ ಚರ್ಚೆಯನ್ನೂ ಹುಟ್ಟುಹಾಕಿತ್ತು. ಅಲ್ಲದೇ ಚಿತ್ರತಂಡ ಈ ಕುರಿತು ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲವೇ ಎಂದೂ ನೆಟ್ಟಿಗರು ಪ್ರಶ್ನಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುವುದಾಗಿ ಹೇಳಿಕೆಯನ್ನೂ ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ಇಡೀ ಪ್ರಕರಣಕ್ಕೆ ಕಾರಣವಾದ ಅಚ್ಚರಿಯ ಅಂಶವನ್ನು ಬಹಿರಂಗಗೊಳಿಸಿದ್ದಾರೆ.
ವಿಕ್ಕಿ ಕೌಶಲ್ ಬಳಸಿದ ನಂಬರ್ ಪ್ಲೇಟ್ ಅಕ್ರಮವೇ?; ತನಿಖೆಯಲ್ಲಿ ಬಯಲಾಯ್ತು ಅಚ್ಚರಿಯ ವಿಚಾರ:
ದೂರುದಾರರ ಕಂಪ್ಲೇಂಟ್ ಆಧಾರದಲ್ಲಿ ಮೊಟಾರ್ ಸೈಕಲ್ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಚಿತ್ರತಂಡ ಇಂದೋರ್ನಲ್ಲೇ ಇದ್ದರೆ ಅಲ್ಲಿಗೆ ತೆರಳಿ ಪರಿಶೀಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಅವರು ತನಿಖೆ ನಡೆಸಿದ್ದು, ಒಂದೇ ದಿನದಲ್ಲಿ ಪ್ರಕರಣಕ್ಕೆ ಕಾರಣವಾದ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಪೊಲೀಸ್ ತಿಳಿಸಿದ ವಿಚಾರ ಅಚ್ಚರಿಗೆ ಕಾರಣವಾಗಿರುವುದಲ್ಲದೇ, ಹೀಗೂ ಆಗುತ್ತದೆಯೇ ಎಂದು ಜನರು ಕಣ್ಣರಳಿಸಿದ್ದಾರೆ.
ಅಷ್ಟಕ್ಕೂ ತನಿಖೆಯಲ್ಲಿ ಬಯಲಾಗಿದ್ದು ಇದು… ದೂರುದಾರ ಅರ್ಜಿಯಲ್ಲಿ ತಮ್ಮ ನಂಬರ್ ಪ್ಲೇಟ್ ‘4872’ ಎಂದು ಉಲ್ಲೇಖಿಸಿದ್ದರು. ಅದನ್ನೇ ಚಿತ್ರತಂಡ ಬಳಸಿದೆ ಎಂದಿದ್ದರು. ಪೊಲೀಸರು ಚಿತ್ರೀಕರಣಕ್ಕೆ ಬಳಸಿದ ಗಾಡಿಯನ್ನು ಪರಿಶೀಲಿಸಿದಾಗ ಆ ಗಾಡಿಯ ನಂಬರ್ನ ಕೊನೆಯ ಮೂರು ಸಂಖ್ಯೆ ಅದೇ ಇವೆ. ಆದರೆ ಮೊದಲ ನಂಬರ್ ಮಾತ್ರ ಬೇರೆಯಾಗಿತ್ತು!
ಹೌದು. ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಸವಾರಿ ಮಾಡಿದ್ದು, ‘1872’ ನಂಬರ್ ಪ್ಲೇಟ್ ಹೊಂದಿದ್ದ ಗಾಡಿಯಲ್ಲಿ. ಆದರೆ ಚಿತ್ರಗಳನ್ನು ಗಮನಿಸಿ, ದೂರು ನೀಡಿದ್ದ ದೂರುದಾರರಿಗೆ ಗೊಂದಲವಾಗಲು ಕಾರಣವಾಗಿದ್ದು- ಒಂದು ಬೋಲ್ಟ್! ಅದರಿಂದಾಗಿ ಅವರಿಗೆ ‘1’ ಸಂಖ್ಯೆ ‘4’ರಂತೆ ಕಂಡಿದೆ. ಹೀಗಾಗಿಯೇ ಅವರು ವಿಕ್ಕಿ ಬಳಸಿದ್ದ ಗಾಡಿ ‘4872’ ಎಂದು ಭಾವಿಸಿದ್ದರು. ಈ ಕುರಿತು ಪೊಲೀಸರು ಎಎನ್ಐಗೆ ಮಾಹಿತಿ ನೀಡಿದ್ದು, ಬೋಲ್ಟ್ನಿಂದಾಗಿ ಹಾಗೆ ಕಂಡಿದೆ. ಚಿತ್ರತಂಡ ಬಳಸಿದ ಸಂಖ್ಯೆಗೆ ಕಾನೂನಿನ ಅನ್ವಯ ಅನುಮತಿಯೂ ಇದೆ. ಅದರಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದಿದ್ದಾರೆ. ಇದರಿಂದ ವಿಕ್ಕಿ ಕೌಶಲ್ ಹಾಗೂ ಚಿತ್ರತಂಡ ನಿರಾಳವಾಗಿದೆ.
ಪೊಲೀಸರು ಹಂಚಿಕೊಂಡ ಮಾಹಿತಿ ಇಲ್ಲಿದೆ:
MP | We investigated the matter&found that the vehicle was not 4872 (as alleged by the complainant). The number was 1872 but due to a bolt, no 1 looked like number 4. They had permission for that number plate. We found no irregularities in it: Rajendra Soni, SHO, Banganga, Indore https://t.co/oJanl2wFhZ pic.twitter.com/tGkvElwQSi
— ANI (@ANI) January 3, 2022
ಈ ಪ್ರಕರಣದ ಮೂಲಕ ವಿಕ್ಕಿ ಕೌಶಲ್ಗೆ ಅಂಟಿದ್ದ ಅಪವಾದವೊಂದು ದೂರಾಗಿದೆ. ಇದರಿಂದ ಅವರು ನಿರಾಳರಾಗಿದ್ದಾರೆ. ವಿಕ್ಕಿ ಹಾಗೂ ಸಾರಾ ಅಲಿ ಖಾನ್ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದು, ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಲಕ್ಷ್ಮಣ್ ಉಟೇಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಲೂಕಾ ಚಪ್ಪಿ’ಯ ಸೀಕ್ವೆಲ್ ಇದಾಗಿರಲಿದೆ ಎನ್ನಲಾಗಿದ್ದು, ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ.
ಇದನ್ನೂ ಓದಿ:
ಐಶ್ವರ್ಯ ರೈ ತರ ಕಾಣ್ತೀಯ ಅಂತ ಹೇಳಿ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ!
Published On - 2:49 pm, Mon, 3 January 22