ರಾಜಕೀಯದ ಅನೇಕ ವಿಚಾರಗಳ ಬಗ್ಗೆ ಕಂಗನಾ ರಣಾವತ್ (Kangana Ranaut) ಅವರು ಆಗಾಗ ಪ್ರತಿಕ್ರಿಯೆ ನೀಡಿದ್ದುಂಟು. ಈಗ ಟಿವಿ9 ನೆಟ್ವರ್ಕ್ ನಡೆಸುತ್ತಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today) ಕಾನ್ಕ್ಲೇವ್ನ 2ನೇ ದಿನ ಅತಿಥಿಯಾಗಿ ಬಂದ ಅವರು ಮತ್ತೆ ರಾಜಕೀಯದ ಕುರಿತು ಮಾತನಾಡಿದ್ದಾರೆ. ಲೋಕಸಭಾ ಚುನಾವಣೆ (Lok Sabha Elections) ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಕಂಗನಾ ರಣಾವತ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ. ‘ದೇಶಕ್ಕಾಗಿ ಏನನ್ನಾದರೂ ಮಾಡಲು ನನಗೆ ಸೀಟ್, ಟಿಕೆಟ್ ಅಥವಾ ಅಧಿಕಾರ ಬೇಕಿಲ್ಲ. ನಟಿಯಾಗಿಯೇ ನಾನು ರಾಜಕೀಯ ಪಕ್ಷಗಳ ಎದುರು ಹೋರಾಡಿದ್ದೇನೆ. ಒಂದು ವೇಳೆ ನಾನು ರಾಜಕೀಯಕ್ಕೆ ಬರಬೇಕು ಎಂದರೆ ಇದು ಸರಿಯಾದ ಸಮಯ’ ಎಂದು ಅವರು ಹೇಳಿದ್ದಾರೆ.
ಕಂಗನಾ ರಣಾವತ್ ಅವರು ಅನೇಕ ಬಾರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷದಿಂದ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದೇ ಎಂಬ ಕೌತುಕ ಎಲ್ಲರಲ್ಲೂ ಇದೆ. ಈಗ ಅವರು ‘ಇದು ಸರಿಯಾದ ಕಾಲ’ ಎಂದು ಟಿವಿ9 ವೇದಿಕೆಯಲ್ಲಿ ಘೋಷಿಸಿರುವುದರಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಈ ಸಂವಾದದಲ್ಲಿ ಅವರು ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ‘ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿ ಕಷ್ಟ ಇದೆ. ಚಿತ್ರರಂಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಿರ್ದೇಶಕಿಯರು ಹಾಗೂ ನಿರ್ಮಾಪಕಿಯರು ಇಲ್ಲ. ಈ ಟ್ರೆಂಡ್ ಬದಲಾಗಬೇಕು. ನಟಿಯಾಗಿ ನಾನು ಮಿತಿಗಳನ್ನು ಮೀರಬೇಕು’ ಎಂದು ಅವರು ಹೇಳಿದ್ದಾರೆ. ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಇಂದಿರಾ ಗಾಂಧಿಯ ಪಾತ್ರಕ್ಕೆ ಬಣ್ಣ ಹಚ್ಚುವುದರ ಜೊತೆಗೆ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಅವರು ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: What India Thinks Today: ಟಿವಿ9 ವೇದಿಕೆಯಲ್ಲಿ ‘ಕಾಂತಾರ’ ಸಾಧನೆ ಬಗ್ಗೆ ಆಯುಷ್ಮಾನ್ ಮಾತು
‘ನೀವು ಗ್ಲೋಬಲ್ ಆಗಬೇಕಿದ್ದರೆ ಮೊದಲು ಲೋಕಲ್ ಆಗಿರಬೇಕು ಎಂದು ಸತ್ಯಜಿತ್ ರೇ ಹೇಳಿದ್ದರು. ಅದನ್ನು ನಾನು ನಂಬುತ್ತೇನೆ. ನಮ್ಮ ಸ್ಥಳೀಯತೆಯನ್ನು ತೋರಿಸುವ ಸಿನಿಮಾಗಳು ಬರಬೇಕು. ನಾನು ಎಲ್ಲ ಬಗೆಯ ಪಾತ್ರಗಳನ್ನು ಮಾಡಿದ್ದೇನೆ. ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾಗಳನ್ನು ಮಾಡಿದ್ದೇನೆ. ಈ ದೇಶ ನನಗೆ ಸಾಕಷ್ಟನ್ನು ನೀಡಿದೆ. ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕಾಗಿಯೇ ನಾನು ರಾಷ್ಟ್ರವಾದಿ ಆಗಿದ್ದೇನೆ’ ಎಂದಿದ್ದಾರೆ ಕಂಗನಾ ರಣಾವತ್.
‘ತಲೈವಿ’ ಸಿನಿಮಾದಲ್ಲಿ ಜಯಲಲಿತಾ ಪಾತ್ರಕ್ಕೆ ಕಂಗನಾ ರಣಾವತ್ ಬಣ್ಣ ಹಚ್ಚಿದ್ದರು. ‘ಆ ಪಾತ್ರ ನನಗೆ ಬಹಳ ಮಹತ್ವದ್ದಾಗಿತ್ತು. ಪ್ರಾದೇಶಿಕ ರಾಜಕೀಯದ ಬಗ್ಗೆ ಆಳವಾಗಿ ತಿಳಿಯಲು ನನಗೆ ಅದು ಸಹಕಾರಿ ಆಯಿತು’ ಎಂದು ಅವರು ಹೇಳಿದರು. ನಟಿಯಾಗಿ ಬಂದು ಈಗ ನಿರ್ದೇಶಕಿ, ನಿರ್ಮಾಪಕಿ ಆಗುವ ಮಟ್ಟಕ್ಕೆ ಕಂಗನಾ ಬೆಳೆದು ನಿಂತಿದ್ದಾರೆ. ‘ಚಿತ್ರರಂಗದಲ್ಲಿ ಇರುವ ನಮಗೆ ಬಹಳ ಒತ್ತಡ ಇದೆ. ಜನರು ಇಷ್ಟಪಡುವ ಸಿನಿಮಾ ಮಾಡಬೇಕಾದ ಒತ್ತಡ ಇದೆ. ಹಾಗಾಗಿ ನಮ್ಮ ಸಾಮರ್ಥ್ಯಕ್ಕಿಂತಲೂ ಹೆಚ್ಚಿನದನ್ನು ಮಾಡಬೇಕಿದೆ’ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.