Article 370 Movie: ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ‘ಆರ್ಟಿಕಲ್ 370’ ಸಿನಿಮಾ ಬ್ಯಾನ್
ಭಾರತದಲ್ಲಿ ‘ಆರ್ಟಿಕಲ್ 370’ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಇದರಿಂದಾಗಿ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಚಿತ್ರದ ಕಲೆಕ್ಷನ್ ಕುಗ್ಗಲಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಿದ್ದಕ್ಕೆ ಸೂಕ್ತ ಕಾರಣ ಏನು ಎಂಬುದನ್ನು ತಿಳಿಸಿಲ್ಲ. ಯಾಮಿ ಗೌತಮ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಕಾಶ್ಮೀರದಲ್ಲಿ ಆರ್ಟಿಕಲ್ 370 (Article 370) ರದ್ದು ಮಾಡಿದ ಘಟನೆಯನ್ನು ಆಧರಿಸಿ ಸಿನಿಮಾ ಮೂಡಿಬಂದಿದೆ. ‘ಆರ್ಟಿಕಲ್ 370’ ಚಿತ್ರಕ್ಕೆ ಆದಿತ್ಯ ಸುಹಾಸ್ ನಿರ್ದೇಶನ ಮಾಡಿದ್ದಾರೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗುತ್ತಿದೆ. ವಿದೇಶದಲ್ಲೂ ಒಳ್ಳೆಯ ಕಮಾಯಿ ಆಗುತ್ತಿದೆ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ (Gulf Countries) ಈ ಸಿನಿಮಾವನ್ನು ನಿಷೇಧಿಸಲಾಗಿದೆ. ಇದರಿಂದ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ. ‘ಆರ್ಟಿಕಲ್ 370’ ಸಿನಿಮಾದಲ್ಲಿ ಯಾಮಿ ಗೌತಮ್ (Yami Gautam) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರಿಯಾಮಣಿ ಕೂಡ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪಾಕ್ ವಿರೋಧಿ ಅಂಶಗಳು ‘ಆರ್ಟಿಕಲ್ 370’ ಸಿನಿಮಾದಲ್ಲಿ ಇದೆ. ಅದೇ ಕಾರಣಕ್ಕಾಗಿ ಗಲ್ಫ್ ರಾಷ್ಟ್ರಗಳಲ್ಲಿ ಈ ಚಿತ್ರವನ್ನು ಬ್ಯಾನ್ ಮಾಡಿರಬಹುದು. ಆದರೆ ಅಲ್ಲಿನ ಸೆನ್ಸಾರ್ ಮಂಡಳಿಯವರು ಈ ಚಿತ್ರವನ್ನು ನಿಷೇಧಿಸಿದ್ದಕ್ಕೆ ಸೂಕ್ತ ಕಾರಣ ನೀಡಿಲ್ಲ. ಇತ್ತೀಚೆಗೆ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ನಟನೆಯ ‘ಫೈಟರ್’ ಸಿನಿಮಾವನ್ನು ಕೂಡ ಅಲ್ಲಿ ಬ್ಯಾನ್ ಮಾಡಲಾಗಿತ್ತು.
ಸಾಮಾನ್ಯವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಸಿನಿಮಾಗಳಿಗೆ ಬೇಡಿಕೆ ಇರುತ್ತದೆ. ಹಿಂದಿ ಸಿನಿಮಾಗಳನ್ನು ಅಲ್ಲಿನ ಜನರು ನೋಡಿ ಎಂಜಾಯ್ ಮಾಡುತ್ತಾರೆ. ಅದರಿಂದ ಬಾಲಿವುಡ್ ಬಾಕ್ಸ್ ಆಫೀಸ್ಗೆ ಉತ್ತಮ ಕಮಾಯಿ ಆಗುತ್ತದೆ. ಈ ರೀತಿ ಬ್ಯಾನ್ ಮಾಡಿದರೆ ಸಿನಿಮಾದ ಗಳಿಕೆಗೆ ಹೊಡೆತ ಬೀಳುತ್ತದೆ. ಸದ್ಯ ‘ಆರ್ಟಿಕಲ್ 370’ ಸಿನಿಮಾಗೆ ಹಾಗೆಯೇ ಆಗಿದೆ. ಭಾರತದಲ್ಲಿ ಈ ಸಿನಿಮಾ ಮೂರು ದಿನಕ್ಕೆ 25 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ‘ಆರ್ಟಿಕಲ್ 370’ ಸಿನಿಮಾದಲ್ಲಿ ಮಿಂಚಿದ ನಟಿ ಯಾಮಿ ಗೌತಮ್
‘ಆರ್ಟಿಕಲ್ 370’ ಸಿನಿಮಾದ ಬಿಡುಗಡೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಈ ಚಿತ್ರದ ಬಗ್ಗೆ ಮಾತನಾಡಿದ್ದರು. ‘ಈ ವಾರ ಆರ್ಟಿಕಲ್ 370 ರದ್ದು ಕುರಿತು ಸಿನಿಮಾ ಬರುತ್ತಿದೆ ಎಂದು ಕೇಳಿದ್ದೇನೆ. ಇಡೀ ದೇಶದಲ್ಲಿ ನಿಮ್ಮ ಜೈಕಾರ ಆಗಲಿದೆ ಅಂತ ನನಗೆ ಅನಿಸುತ್ತದೆ. ಸಿನಿಮಾ ಹೇಗಿದೆ ಎಂಬುದು ನನಗೆ ತಿಳಿದಿಲ್ಲ. ಜನರಿಗೆ ಸೂಕ್ತ ಮಾಹಿತಿ ನೀಡಲು ಉಪಯೋಗ ಆಗುತ್ತದೆ’ ಎಂದು ನರೇಂದ್ರ ಮೋದಿ ಹೇಳಿದ್ದರು. ಈ ಚಿತ್ರವನ್ನೇ ಗಲ್ಫ್ ರಾಷ್ಟ್ರಗಳಲ್ಲಿ ಬ್ಯಾನ್ ಮಾಡಿರುವುದು ಅಚ್ಚರಿ ಮೂಡಿಸಿದೆ.
‘ಆರ್ಟಿಕಲ್ 370’ ಸಿನಿಮಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತು:
View this post on Instagram
ಬಾಕ್ಸ್ ಆಫೀಸ್ ಬಗ್ಗೆ ಮಾಹಿತಿ:
ಫೆ.23ರಂದು ‘ಆರ್ಟಿಕಲ್ 370’ ಚಿತ್ರ ಬಿಡುಗಡೆ ಆಯಿತು. ಮೊದಲ ದಿನ ಈ ಸಿನಿಮಾಗೆ 6.12 ಕೋಟಿ ರೂಪಾಯಿ ಕಮಾಯಿ ಆಯಿತು. 2ನೇ ದಿನವಾದ ಫೆಬ್ರವರಿ 24ರಂದು 9.08 ಕೋಟಿ ರೂಪಾಯಿ ಕಲೆಕ್ಷನ್ ಆಯ್ತು. 3ನೇ ದಿನ (ಫೆ.25) ಈ ಚಿತ್ರವು 10.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸೋಮವಾರ (ಫೆ.26) ಸಹ ಅನೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ವಿದೇಶದ ಗಳಿಕೆಯೂ ಸೇರಿದರೆ ಮೂರು ದಿನಕ್ಕೆ 34.71 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.