Medha Shankar: ‘12th ಫೇಲ್’ ನಾಯಕಿ ಮೇಧಾ ಖಾತೆಯಲ್ಲಿ ಇತ್ತು ಕೇವಲ 257 ರೂಪಾಯಿ
ವೃತ್ತಿ ಜೀವನದಲ್ಲಿ ಹಲವು ಸವಾಲುಗಳನ್ನು ಮೇಧಾ ಎದುರಿಸಿದ್ದರು. 2020 ತುಂಬಾ ಕೆಟ್ಟದಾಗಿತ್ತು. ಆ ಸಮಯದಲ್ಲಿ ಪ್ರಪಂಚದಾದ್ಯಂತ ಕೊವಿಡ್ ಬಂದಿತ್ತು. ಆ ಸಮಯದಲ್ಲಿ ಮೇಧಾ ಬ್ಯಾಂಕ್ ಖಾತೆಯಲ್ಲಿ ಕೇವಲ 257 ರೂಪಾಯಿ ಇತ್ತು. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ವಿಕ್ರಾಂತ್ ಮಾಸ್ಸಿ ಮತ್ತು ಮೇಧಾ ಶಂಕರ್ (Medha Shankar) ನಟನೆಯ ‘12th ಫೇಲ್’ ಸಿನಿಮಾ ಕಳೆದ ವರ್ಷದ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಇದು 2023ನೇ ಸಾಲಿನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿತು. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಈ ಸಿನಿಮಾ ಇಷ್ಟವಾಗಿದೆ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಪಾತ್ರದಲ್ಲಿ ವಿಕ್ರಾಂತ್ ಹಾಗೂ ಐಆರ್ಎಸ್ ಅಧಿಕಾರಿ ಶ್ರದ್ಧಾ ಜೋಷಿ ಪಾತ್ರದಲ್ಲಿ ಮೇಧಾ ನಟಿಸಿದ್ದಾರೆ. ನೈಜ ಜೀವನ ಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ ಸಿಕ್ಕಿದೆ. ‘12th ಫೇಲ್’ ಸಿನಿಮಾ IMDb ನಲ್ಲಿ 9.1 ರೇಟಿಂಗ್ ಪಡೆದುಕೊಂಡಿದೆ. ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವಾಗಲೇ ಇತ್ತೀಚಿನ ಸಂದರ್ಶನವೊಂದರಲ್ಲಿ ಮೇಧಾ ಶಂಕರ್ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ತಮ್ಮ ಖಾತೆಯಲ್ಲಿ ಕೇವಲ 257 ರೂಪಾಯಿ ಇತ್ತು ಎನ್ನುವ ವಿಚಾರ ರಿವೀಲ್ ಮಾಡಿದ್ದಾರೆ.
‘ಐಎಂಡಿಬಿ’ಗೆ ನೀಡಿದ ಸಂದರ್ಶನದಲ್ಲಿ ಮೇಧಾ ಮಾತನಾಡಿದ್ದಾರೆ. ಈ ವೇಳೆ ತಮ್ಮ ಹೋರಾಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಮೇಧಾ 2015ರಲ್ಲಿ ನಟನೆಗೆ ಕಾಲಿಟ್ಟರು. ಅವರು ಮೊದಲು ನಟಿಸಿದ್ದು ಶಾರ್ಟ್ಫಿಲ್ಮ್ನಲ್ಲಿ. 2022ರಲ್ಲಿ ಅವರು ‘12th ಫೇಲ್’ ಚಿತ್ರಕ್ಕಾಗಿ ಕಾಸ್ಟಿಂಗ್ ಏಜೆನ್ಸಿಗೆ ಆಡಿಷನ್ ನೀಡಿದರು. ನಂತರ ನಿರ್ದೇಶಕ ವಿಧು ವಿನೋದ್ ಚೋಪ್ರಾ ತಂಡವು ಮೇಧಾ ಅವರ ಸ್ಕ್ರೀನ್ ಟೆಸ್ಟ್ ನಡೆಸಿತು. ಶ್ರದ್ಧಾ ಜೋಶಿ ಪಾತ್ರಕ್ಕೆ ತಾವು ಆಯ್ಕೆಯಾದ ವಿಚಾರ ತಿಳಿದ ಮೇಧಾ ತಮ್ಮ ತಂದೆಯನ್ನು ತಬ್ಬಿಕೊಂಡರಂತೆ. ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಸಹೋದರನಿಗೆ ಕರೆ ಮಾಡಿ ಸಂತಸದ ಸುದ್ದಿ ಹಂಚಿಕೊಂಡಿದ್ದರು.
ಹಳೆಯ ದಿನಗಳನ್ನು ಶ್ರದ್ಧಾ ಸ್ಮರಿಸಿದ್ದಾರೆ. ‘ವೃತ್ತಿ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದೇನೆ. 2020 ತುಂಬಾ ಕೆಟ್ಟದಾಗಿತ್ತು. ಆ ಸಮಯದಲ್ಲಿ ಪ್ರಪಂಚದಾದ್ಯಂತ ಅನೇಕ ಘಟನೆಗಳು ನಡೆಯುತ್ತಿದ್ದವು. ಆ ಸಮಯದಲ್ಲಿ ನನ್ನ ಬ್ಯಾಂಕ್ ಖಾತೆಯಲ್ಲಿ ಕೇವಲ 257 ರೂಪಾಯಿ ಇತ್ತು. ಖ್ಯಾತಿ, ಹಣಕ್ಕಾಗಿ ನಾನು ಉದ್ಯಮಕ್ಕೆ ಬರಲು ಬಯಸಲಿಲ್ಲ. ನಾನು ಈ ವಿಷಯಗಳ ಬಗ್ಗೆ ಯೋಚಿಸಲೇ ಇಲ್ಲ. ಆದರೆ ನನಗೆ ಕ್ರಾಫ್ಟ್ ಮತ್ತು ಕಲೆಯ ಬಗ್ಗೆ ತುಂಬಾ ಒಲವು ಇತ್ತು. ಹೀಗಾಗಿ ನಾನು ಈ ಕ್ಷೇತ್ರಕ್ಕೆ ಪ್ರವೇಶಿಸಿದೆ. ನಟನೆಯೇ ನನ್ನ ಜಗತ್ತು ಎಂದು ಅರಿತುಕೊಂಡೆ’ ಎಂದು ಮೇಧಾ ಹೇಳಿದ್ದಾರೆ.
ಇದನ್ನೂ ಓದಿ: ರಾಮನ ಭಕ್ತರಿಗೆ ಅಪಮಾನ: ಹಳೆ ಟ್ವೀಟ್ಗೆ ಕ್ಷಮೆ ಕೇಳಿದ ‘12th ಫೇಲ್’ ನಟ
‘12th ಫೇಲ್’ ಸಿನಿಮಾ 2023ರ ಅಕ್ಟೋಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿಧು ವಿನೋದ್ ಚೋಪ್ರಾ ನಿರ್ದೇಶನದ ಈ ಚಿತ್ರವು ಪ್ರಸ್ತುತ ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದರಲ್ಲಿ ವಿಕ್ರಾಂತ್ ಮಸ್ಸಿ, ಮೇಧಾ ಶಂಕರ್, ಸಂಜಯ್ ಬಿಷ್ಣೋಯ್ ಮತ್ತು ಹರೀಶ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:57 am, Tue, 27 February 24