ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೂರು ದಶಕಗಳ ಅನುಭವವನ್ನು ಇಟ್ಟುಕೊಂಡು ಅವರು ಮುಂದೆ ಸಾಗುತ್ತಿದ್ದಾರೆ. ಇತ್ತೀಚಿನ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣದಿದ್ದರೂ ಅವರಿಗೆ ಇರುವ ಡಿಮ್ಯಾಂಡ್ ಕಮ್ಮಿ ಆಗಿಲ್ಲ. ಇನ್ನು ಅಕ್ಷಯ್ ಕುಮಾರ್ ಅವರು ಅನೇಕ ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಹಣವನ್ನು ಅವರು ಸಮಾಜಕ್ಕಾಗಿ ದೇಣಿಗೆ ನೀಡಿದ್ದುಂಟು. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ನೋಡಿದಾಗ ಅವರಿಗೆ ರಾಜಕೀಯಕ್ಕೆ (Politics) ಬರುವ ಆಲೋಚನೆ ಏನಾದರೂ ಇದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಅಕ್ಷಯ್ ಕುಮಾರ್ ಅವರು ನೇರವಾಗಿ ಉತ್ತರಿಸಿದ್ದಾರೆ. ಸದ್ಯಕ್ಕೆ ತಮಗೆ ಸಿನಿಮಾ ಕೆಲಸಗಳಲ್ಲಿ ಖುಷಿ ಇರುವುದಾಗಿ ಅವರು ತಿಳಿಸಿದ್ದಾರೆ. ಅವರ ಮಾತಿನ ಅರ್ಥ ಏನು? ಮುಂದೆ ಓದಿ..
ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿದ ಬಳಿಕ ರಾಜಕೀಯಕ್ಕೆ ಬಂದು ಯಶಸ್ವಿ ಆದವರು ಅನೇಕರಿದ್ದಾರೆ. ಜನರ ಬಗ್ಗೆ ಕಾಳಜಿ ಇರುವ ಹೀರೋಗಳು ರಾಜಕೀಯಕ್ಕೆ ಎಂಟ್ರಿ ನೀಡಲಿ ಎಂಬ ಆಶಯ ಅವರ ಅಭಿಮಾನಿಗಳಿಗೂ ಇರುತ್ತದೆ. ಆದರೆ ಸದ್ಯಕ್ಕಂತೂ ತಾವು ರಾಜಕೀಯಕ್ಕೆ ಸೇರುವುದಿಲ್ಲ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
‘ನಾನು ಸಿನಿಮಾ ಮಾಡುವುದರಲ್ಲಿ ಖುಷಿಯಾಗಿ ಇದ್ದೇನೆ. ಒಬ್ಬ ನಟನಾಗಿ ಸಾಮಾಜಿಕ ಕಳಕಳಿಯಿಂದ ಏನೆಲ್ಲ ಸಾಧ್ಯವೋ ಅದನ್ನು ಮಾಡುತ್ತೇನೆ. ನಾನು 150 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ಅದರಲ್ಲಿ ‘ರಕ್ಷಾ ಬಂಧನ್’ ಸಿನಿಮಾ ನನ್ನ ಮನಸ್ಸಿಗೆ ಹತ್ತಿರವಾಗಿದೆ. ಸಾಮಾಜಿಕ ಕಳಕಳಿ ಇರುವ ಕಮರ್ಷಿಯಲ್ ಸಿನಿಮಾಗಳನ್ನೂ ನಿರ್ಮಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಹಲವು ಕಾರಣಗಳಿಂದಾಗಿ ‘ರಕ್ಷಾ ಬಂಧನ್’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಇತ್ತೀಚೆಗೆ ರಿಲೀಸ್ ಆದ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡುವಲ್ಲಿ ವಿಫಲ ಆಗಿರುವುದರಿಂದ ಅಕ್ಷಯ್ ಕುಮಾರ್ ಅವರಿಗೆ ಬಾಕ್ಸ್ ಆಫೀಸ್ನಲ್ಲಿ ತುರ್ತಾಗಿ ಒಂದು ಗೆಲುವು ಬೇಕಿದೆ. ‘ರಕ್ಷಾ ಬಂಧನ್’ ಸಿನಿಮಾ ಆಗಸ್ಟ್ 11ರಂದು ಬಿಡುಗಡೆ ಆಗಲಿದೆ. ಅದೇ ದಿನ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಕೂಡ ಬಿಡುಗಡೆ ಆಗುತ್ತಿರುವುದರಿಂದ ಎರಡೂ ಸಿನಿಮಾಗಳ ನಡುವೆ ಕ್ಲ್ಯಾಶ್ ಏರ್ಪಡಲಿದೆ.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ ನಕಲಿ ಮೀಸೆಯೇ ‘ಸಾಮ್ರಾಟ್ ಪೃಥ್ವಿರಾಜ್’ ಸೋಲಿಗೆ ಕಾರಣ? ಹೊಸ ಆರೋಪ
ಆಗಸ್ಟ್ 11ಕ್ಕೆ ಆಮಿರ್ ಖಾನ್ ವರ್ಸಸ್ ಅಕ್ಷಯ್ ಕುಮಾರ್; ಪ್ರೇಕ್ಷಕರ ಬೆಂಬಲ ಯಾರ ಸಿನಿಮಾಗೆ?
Published On - 7:44 am, Tue, 5 July 22