ಇತ್ತೀಚೆಗೆ ರಿಲೀಸ್ ಆದ ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ಹಾಗೂ ರಾಶಿ ಖನ್ನಾ ನಟನೆಯ ‘ಯೋಧ’ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿದೆ. ಈ ಚಿತ್ರ ಅಂದುಕೊಂಡ ರೀತಿಯಲ್ಲಿ ಕಮಾಯಿ ಮಾಡಿಲ್ಲ. ಭರ್ಜರಿ ಆ್ಯಕ್ಷನ್, ದೊಡ್ಡ ಬಜೆಟ್ ಇದ್ದ ಹೊರತಾಗಿಯೂ ಸಿನಿಮಾ ಗಳಿಕೆ ಮಾಡಿದ್ದು ಕೇವಲ 30 ಕೋಟಿ ರೂಪಾಯಿ. ಇದು ಚಿತ್ರತಂಡದ ಬೇಸರಕ್ಕೆ ಕಾಣ ಆಗಿದೆ. ಈ ಸಿನಿಮಾದ ಗಳಿಕೆ ಕಡಿಮೆ ಆಗಿರುವ ಬಗ್ಗೆ ರಾಶಿ ಖನ್ನಾ ಮಾತನಾಡಿದ್ದಾರೆ. ಥಿಯೇಟರ್ಗೆ ಜನರನ್ನು ಕರೆತರೋದು ಎಷ್ಟು ಚಾಲೆಂಜಿಂಗ್ ಎಂಬುದನ್ನು ಅವರು ಮಾತನಾಡಿದ್ದಾರೆ.
ಒಬ್ಬರಿಗೆ ಸಿನಿಮಾ ಇಷ್ಟ ಆದರೆ, ಇನ್ನೂ ಕೆಲವರಿಗೆ ಸಿನಿಮಾ ಇಷ್ಟ ಆಗುವುದಿಲ್ಲ. ಇದು ಅವರವರಿಗೆ ಬಿಟ್ಟ ಆಯ್ಕೆ. ಅದೇ ರೀತಿ ‘ಯೋಧ’ ಚಿತ್ರವನ್ನು ಒಂದಷ್ಟು ಮಂದಿ ಇಷ್ಟಪಟ್ಟರೆ, ಇನ್ನೂ ಕೆಲವರು ಇಷ್ಟಪಟ್ಟಿಲ್ಲ. ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 4 ಕೋಟಿ ರೂಪಾಯಿ. ಸಿನಿಮಾದ ಒಟ್ಟಾರೆ ಗಳಿಕೆಯೂ ಸಾಕಷ್ಟು ಕಡಿಮೆ ಆಗಿದೆ. ಒಟಿಟಿ ವ್ಯಾಪ್ತಿ ಹೆಚ್ಚಿರುವುದೂ ಸಿನಿಮಾ ಸೋಲಿಗೆ ಕಾರಣ ಎಂಬುದು ರಾಶಿ ಅಭಿಪ್ರಾಯ.
‘ಕೆಲವರಿಗೆ ಸಿನಿಮಾ ಇಷ್ಟ ಆಗಬಹುದು, ಇನ್ನೂ ಕೆಲವರಿಗೆ ಸಿನಿಮಾ ಇಷ್ಟ ಆಗದೇ ಇರಬಹುದು. ಎಲ್ಲಾ ರೀತಿಯ ಜನರೂ ಇರುತ್ತಾರೆ. ಸಿನಿಮಾ ರಿಲೀಸ್ ಆದಾಗ ಅದನ್ನು ಜನರು ಇಷ್ಟಪಡಬೇಕು ಎಂದು ನಾವು ಬಯಸುತ್ತೇವೆ. ಅವರನ್ನು ಥಿಯೇಟರ್ಗೆ ಕರೆದುಕೊಂಡು ಬರೋದು ದೊಡ್ಡ ಚಾಲೆಂಜ್. ಎಲ್ಲಾ ಸಿನಿಮಾಗಳು ಈಗ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ. ಇದನ್ನು ಸಿನಿಮಾ ನಿರ್ಮಾತೃರರು ಎದುರಿಸುತ್ತಿದ್ದಾರೆ’ ಎಂದಿದ್ದಾರೆ ರಾಶಿ ಖನ್ನಾ,
‘ನಾನು ಕೆಲವೊಮ್ಮೆ ಸಿನಿಮಾ ಒಟಿಟಿಯಲ್ಲಿ ಬರುತ್ತದೆ ಎಂದು ಥಿಯೇಟರ್ಗೆ ಹೋಗದೇ ಇದ್ದಿದ್ದೂ ಇದೆ. ನಾನು ಬೇರೆ ಬೇರೆ ಕೆಲಸದಲ್ಲಿ ಬ್ಯುಸಿ ಇರುತ್ತೇನೆ. ಇದು ಕೂಡ ಒಂದು ಕಾರಣ. ಜನರು ಕೂಡ ಇತ್ತೀಚೆಗೆ ಹೆಚ್ಚು ಬ್ಯುಸಿ ಆಗಿದ್ದಾರೆ. ಅವರನ್ನು ಥಿಯೇಟರ್ಗೆ ಕರೆತರುವುದೇ ಚಾಲೆಂಜ್. ಯೋಧ ಕೆಟ್ಟ ಸಿನಿಮಾ ಅಲ್ಲ. ಎಲ್ಲಾ ಸಿನಿಮಾಗಳಿಗೂ ಅದರದ್ದೇ ಆದ ನಿರ್ದಿಷ್ಟ ಸ್ಥಾನ ಇರುತ್ತದೆ. ಇದನ್ನು ಅರಿತು ಮುಂದಿನ ಸಿನಿಮಾ ಮಾಡಬೇಕು’ ಎಂದಿದ್ದಾರೆ ಅವರು.
ಸಿದ್ದಾರ್ಥ್ ಮಲ್ಹೋತ್ರಾಗೆ ದೊಡ್ಡ ಮಾರುಕಟ್ಟೆ ಇದೆ. ಆದಾಗ್ಯೂ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದ್ದು ಕೇವಲ 30 ಕೋಟಿ ರೂಪಾಯಿ. ಬಿಗ್ ಬಜೆಟ್ನಲ್ಲಿ ಈ ಸಿನಿಮಾ ಸಿದ್ಧಗೊಂಡಿತ್ತು. ಈ ಚಿತ್ರದಿಂದ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ನಷ್ಟ ಅನುಭವಿಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಒಂದೊಳ್ಳೆಯ ಹೈಜಾಕ್ ಸಿನಿಮಾ’; ‘ಯೋಧ’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು
ರಾಶಿ ಖನ್ನಾ ಅವರು ದಕ್ಷಿಣ ಹಾಗೂ ಬಾಲಿವುಡ್ ಎರಡರಲ್ಲೂ ಬ್ಯುಸಿ ಇದ್ದಾರೆ. ಅವರು ಸಿನಿಮಾ ಜೊತೆ ವೆಬ್ ಸೀರಿಸ್ಗಳಲ್ಲೂ ನಟಿಸಿದ್ದಾರೆ. ಈ ಮೊದಲು ಹಿಂದಿಯ ‘ರುದ್ರ’ ಹಾಗೂ ‘ಫರ್ಜಿ’ ಸೀರಿಸ್ನಲ್ಲಿ ನಟಿಸಿದ್ದರು. ಅವರು ಚಿತ್ರರಂಗಕ್ಕೆ ಬಂದು 10 ವರ್ಷಗಳ ಮೇಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ