ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರ ಬಹಿಷ್ಕರಿಸುವಂತೆ ಒತ್ತಾಯ; ಕಾರಣ ಏನು?
Boycott Pushpa In Karnataka: ಕರ್ನಾಟಕದ ಚಿತ್ರಮಂದಿರಗಳಲ್ಲಿ ‘ಪುಷ್ಪ’ ಚಿತ್ರದ ಕನ್ನಡ ವರ್ಷನ್ಗಿಂತಲೂ ಹೆಚ್ಚಾಗಿ ತೆಲುಗು ವರ್ಷನ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಇದು ಕನ್ನಡ ಸಿನಿಪ್ರೇಕ್ಷಕರ ಕೋಪಕ್ಕೆ ಕಾರಣ ಆಗಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಪುಷ್ಪ’ (Pushpa Movie) ಚಿತ್ರ ಶುಕ್ರವಾರ (ಡಿ.17) ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರು ನಟಿಸಿದ್ದಾರೆ. ಅದ್ದೂರಿಯಾಗಿ ಬಿಡುಗಡೆ ಆಗುತ್ತಿರುವ ಈ ಸಿನಿಮಾ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ. ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯ ಹೇರಲಾಗುತ್ತಿದೆ. ಹಾಗಾಗಿ ಟ್ವಿಟರ್ನಲ್ಲಿ #BoycottPushpaInKarnataka ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಇದು ಚಿತ್ರತಂಡಕ್ಕೆ ಮುಳುವಾಗುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡಿದ್ದು, ಕನ್ನಡದ ಖ್ಯಾತ ನಟ ಡಾಲಿ ಧನಂಜಯ ಕೂಡ ಅಭಿನಯಿಸಿದ್ದಾರೆ.
‘ಪುಷ್ಪ’ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗಿ ಇನ್ನುಳಿದ ಭಾಷೆಗಳಿಗೆ ಡಬ್ ಆಗಿದೆ. ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್ ಆಗಿ ತೆರೆಕಾಣುತ್ತಿದೆ. ಆದರೆ ಕರ್ನಾಟಕದ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ ವರ್ಷನ್ಗಿಂತಲೂ ತೆಲುಗು ವರ್ಷನ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಕನ್ನಡ ಸಿನಿಪ್ರೇಕ್ಷಕರ ಕೋಪಕ್ಕೆ ಕಾರಣ ಆಗಿದೆ. ಟ್ವಿಟರ್ನಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.
‘ನಾವು ಇಲ್ಲಿಯವರೆಗೆ ಈ ಚಿತ್ರಕ್ಕೆ ಬೆಂಬಲ ನೀಡಿದ್ದಕ್ಕೆ ಕಾರಣವೇ ಕನ್ನಡ. ನಮ್ಮ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತದೆ ಅಂತ ಸಪೋರ್ಟ್ ಮಾಡಿದ್ವಿ. ಆದರೆ ಈಗ ತೆಲುಗು ವರ್ಷನ್ ರಾರಾಜಿಸುತ್ತಿದೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ‘ಪುಷ್ಪ’ ಚಿತ್ರತಂಡ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ.
ಶೇಕಡಾ ೯೦% ಮೇಲೆ ಕನ್ನಡ ಮಾತಾಡುವ ಜನ ಇರುವ ಶಿವಮೊಗ್ಗ ಅಲ್ಲಿ ಅಷ್ಟು ಶೋಗಳನ್ನ ತೆಲುಗು ಗೆ ಕೊಟ್ಟಿರೋದು ವಿಪರ್ಯಾಸ.#BoycottPushpaInKarnataka pic.twitter.com/nZK5i4bxJN
— AB 98 (@yash_abhimani98) December 15, 2021
Dear @alluarjun, why are you dumping Telugu version in Karnataka when you have Kannada version? You and your marketing team has got it all wrong. This is not going well with Kannadigas. I won’t watch Pushpa unless released in Kannada across Karnataka.#BoycottPushpaInKarnataka
— Chetan Jeeral | ಚೇತನ್ ಜೀರಾಳ್ (@chetanjeeral) December 16, 2021
ಬೆಂಗಳೂರಿನಲ್ಲಿ ಮೊದಲ ದಿನವೇ ಈ ಸಿನಿಮಾದ ತೆಲುಗು ಅವತರಣಿಕೆಯ 650 ಹೆಚ್ಚು ಶೋಗಳು ಪ್ರದರ್ಶನ ಕಾಣುತ್ತಿವೆ. ಆದರೆ ಕನ್ನಡ ವರ್ಷನ್ಗೆ ಕೇವಲ ಮೂರು ಶೋ ನೀಡಲಾಗಿದೆ! ಇದು ಕನ್ನಡ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದೆ. ಬೆಂಗಳೂರು ಮಾತ್ರವಲ್ಲದೇ ಬಹುತೇಕ ಜಿಲ್ಲಾ ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ಇದೆ. ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳ ಕನ್ನಡ ಅವತರಣಿಕೆಗಳು ಕೂಡ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿವೆ. ಆದರೂ ಸಹ ಬಿಡುಗಡೆ ಸಮಯದಲ್ಲಿ ಕನ್ನಡ ವರ್ಷನ್ ಅನ್ನು ಕಡೆಗಣಿಸಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ:
Allu Arjun: ಕನ್ನಡ ಮಾಧ್ಯಮಗಳ ಎದುರು ಬಹಿರಂಗ ಕ್ಷಮೆಯಾಚಿಸಿದ ಅಲ್ಲು ಅರ್ಜುನ್
ಸಮಂತಾ ಹಾಡಿನಲ್ಲಿ ಗಂಡಸರಿಗೆ ಅವಮಾನ; ‘ಪುಷ್ಪ’ ಚಿತ್ರದ ವಿರುದ್ಧ ದೂರು ನೀಡಿದ ಪುರುಷರ ಸಂಘಟನೆ