ನಾಗ ಚೈತನ್ಯ, ಶೋಭಿತಾ ಬಗ್ಗೆ ಭವಿಷ್ಯ: ಕ್ಷಮೆ ಕೇಳಿದ ಸೆಲೆಬ್ರಿಟಿ ಜ್ಯೋತಿಷಿ
Astrologer Venu Swamy: ಈ ಹಿಂದೆ ಚಿತ್ರರಂಗ ಹಾಗೂ ರಾಜಕೀಯ ರಂಗದ ಹಲವು ಸೆಲೆಬ್ರಿಟಿಗಳ ಭವಿಷ್ಯ ನುಡಿದಿದ್ದ ಜ್ಯೋತಿಷಿ ವೇಣು ಸ್ವಾಮಿ ಇದೀಗ ಬಹಿರಂಗ ಕ್ಷಮೆ ಕೇಳಿದ್ದಾರೆ. ತಾರಾ ಜೋಡಿಯೊಂದರ ಬಗ್ಗೆ ನುಡಿದಿದ್ದ ಭವಿಷ್ಯದಿಂದಾಗಿ ಅವರು ವಿವಾದದಲ್ಲಿ ಸಿಲುಕಿದ್ದರು. ಇಲ್ಲಿದೆ ನೋಡಿ ಪೂರ್ಣ ಮಾಹಿತಿ.
ವೇಣು ಸ್ವಾಮಿ ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ. ಸಿನಿಮಾ ಹಾಗೂ ರಾಜಕೀಯ ರಂಗದ ಪ್ರಮುಖರ ಭವಿಷ್ಯಗಳನ್ನು ಹೇಳಿ ಜನಪ್ರಿಯತೆ ಗಳಿಸಿದ್ದಾರೆ. ಸಮಂತಾ ಹಾಗೂ ನಾಗ ಚೈತನ್ಯ ಮದುವೆಯ ಸಮಯದಲ್ಲಿಯೇ ಈ ಜೋಡಿ ವಿಚ್ಛೇದನ ತೆಗೆದುಕೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದರು ವೇಣು ಸ್ವಾಮಿ. ಆ ಬಳಿಕ ಹಲವರು ಸ್ಟಾರ್ ನಟ, ನಟಿಯರ ಭವಿಷ್ಯವನ್ನು ನುಡಿದಿದ್ದರು. ನಟಿ ರಶ್ಮಿಕಾ ಮಂದಣ್ಣ ಸಹ ವೇಣು ಸ್ವಾಮಿ ಬಳಿ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ಇನ್ನೂ ಕೆಲವು ಟಾಲಿವುಡ್, ಸ್ಯಾಂಡಲ್ವುಡ್ ನಟಿಯರು ವೇಣು ಸ್ವಾಮಿ ಬಳಿ ಪೂಜೆಗಳನ್ನು ಮಾಡಿಸಿದ್ದಾರೆ. ಇದೀಗ ಈ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಬಹಿರಂಗ ಕ್ಷಮಾಪಣೆ ಕೇಳಿದ್ದಾರೆ.
ಈ ಹಿಂದೆ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಸಮಯದಲ್ಲಿ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ, ಜಗನ್ ಭಾರಿ ವಿಜಯ ಗಳಿಸಿ ಅಧಿಕಾರಕ್ಕೆ ಏರುತ್ತಾರೆ ಎಂದಿದ್ದರು. ಆದರೆ ಜಗನ್ ಹೀನಾಯ ಸೋಲು ಕಂಡರು. ಆಗ ವೇಣು ಸ್ವಾಮಿ, ಇನ್ನು ಮುಂದೆ ತಾನು ಭವಿಷ್ಯ ನುಡಿಯುವುದಿಲ್ಲ ಎಂದಿದ್ದರು. ಆದರೆ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಅವರುಗಳ ನಿಶ್ಚಿತಾರ್ಥ ಆದ ಬಳಿಕ ಮತ್ತೆ ಯೂಟ್ಯೂಬ್ ಚಾನೆಲ್ಗಳಲ್ಲಿ ಪ್ರತ್ಯಕ್ಷವಾದ ವೇಣು ಸ್ವಾಮಿ, ನಾಗ ಚೈತನ್ಯ ಮತ್ತು ಶೋಭಿತಾ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂದಿದ್ದರು.
ಇದನ್ನೂ ಓದಿ:ಅಲ್ಲು ಅರ್ಜುನ್ ಜಾತಕ ಹೇಗಿದೆ? ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ
ಮಾತ್ರವಲ್ಲದೆ ಶೋಭಿತಾ ಧುಲಿಪಾಲ ಬಗ್ಗೆ ತುಸು ನೆಗೆಟಿವ್ ಆಗಿಯೇ ಮಾತನಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು, ಸ್ವತಃ ನಾಗ ಚೈತನ್ಯ ಅವರೇ ವೇಣು ಸ್ವಾಮಿ ವಿರುದ್ಧ ದೂರು ನೀಡಿದ್ದರು. ಶೋಭಿತಾ ಬಗ್ಗೆ ಆಡಿರುವ ಮಾತುಗಳನ್ನು ಆಧರಿಸಿ ಮಹಿಳಾ ಆಯೋಗ ಸಹ ವೇಣು ಸ್ವಾಮಿಗೆ ನೊಟೀಸ್ ನೀಡಿತ್ತು. ಇದೀಗ ವೇಣು ಸ್ವಾಮಿ, ಮಹಿಳಾ ಆಯೋಗಕ್ಕೆ ಬೇಷರತ್ ಕ್ಷಮೆ ಯಾಚನೆ ಮಾಡಿದ್ದಾರೆ.
ಮಹಿಳಾ ಆಯೋಗದ ನೊಟೀಸ್ಗೆ ವಿರುದ್ಧವಾಗಿ ಹೈಕೋರ್ಟ್ನಲ್ಲಿ ವೇಣು ಸ್ವಾಮಿ ಅರ್ಜಿ ಸಹ ದಾಖಲಿಸಿದ್ದರು. ಆದರೆ ಅಲ್ಲಿಯೂ ಸಹ ವೇಣು ಸ್ವಾಮಿಗೆ ಹಿನ್ನಡೆ ಆಗಿದ್ದು, ಖಡ್ಡಾಯವಾಗಿ ಮಹಿಳಾ ಆಯೋಗದ ಮುಂದೆ ಹಾಜರಾಗಬೇಕು ಎಂದು ಆದೇಶಿಸಿತ್ತು. ಹೈಕೋರ್ಟ್ನಲ್ಲಿ ಹಿನ್ನಡೆ ಉಂಟಾದ ಬೆನ್ನಲ್ಲೆ ಮಹಿಳಾ ಆಯೋಗದ ಮುಂದೆ ಬೇಷರತ್ ಕ್ಷಮೆ ಯಾಚಿಸಿರುವ ವೇಣು ಸ್ವಾಮಿ ಇನ್ನು ಮುಂದೆ ಮಹಿಳೆಯರಿಗೆ ಅಗೌರವ ಆಗುವ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ