
ಗಾಯಕ, ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಅವರ ಹೊಸ ಹಾಡು ‘ಮೈಮಾಟ’ ಬಿಡುಗಡೆ ಆದಾಗಿನಿಂದ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಹಾಡಿನಲ್ಲಿ ಇರುವ ಸಾಹಿತ್ಯವನ್ನು ಗಮನಿಸಿದ ವೀಕ್ಷಕರು ಬಗೆಬಗೆಯ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಚಂದನ್ ಶೆಟ್ಟಿ ಅವರ ಮಾಜಿ ಪತ್ನಿ ನಿವೇದಿತಾ ಗೌಡ ಅವರಿಗೆ ಈ ಸಾಹಿತ್ಯ ಸಂಬಂಧಿಸಿದೆ ಎಂದು ಕೆಲವರು ಊಹಿಸಿದ್ದಾರೆ. ಆದರೆ ಅಂತಹ ಊಹಾಪೋಹಗಳಿಗೆ ಈಗ ಸ್ವತಃ ಚಂದನ್ ಶೆಟ್ಟಿ ಅವರೇ ಸ್ಪಷ್ಟನೆ ನೀಡಿದ್ದಾರೆ.
‘ಎಲ್ಲರಿಗೂ ಒಂದು ಸಣ್ಣ ಸ್ಪಷ್ಟನೆ. ನನ್ನ ಇತ್ತೀಚಿನ ‘ಮೈಮಾಟ’ ಹಾಡಿನ ಆರಂಭದಲ್ಲೇ ತಿಳಿಸಿರುವಂತೆ, ಈ ಹಾಡನ್ನು ಕೇವಲ ಮನರಂಜನೆಗಾಗಿ ರಚಿಸಲಾಗಿದ್ದು, ಯಾರನ್ನೂ ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶ ಹೊಂದಿಲ್ಲ. ಈ ರೀತಿಯ ಹೊಸ ಸಂಗೀತ ಶೈಲಿಯನ್ನು ಪ್ರಯತ್ನಿಸಬೇಕೆಂಬ ಆಸೆ ನನಗೆ ಬಹಳ ಹಿಂದಿನಿಂದಲೂ ಇತ್ತು. ನನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಗೂ ಮೊದಲೇ ಈ ಹಾಡನ್ನು ಸಿದ್ಧಪಡಿಸಲಾಗಿತ್ತು’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
‘ಆದರೆ ಇತ್ತೀಚೆಗೆ ಕೆಲವು ಸುದ್ದಿ ಮಾಧ್ಯಮಗಳಲ್ಲಿ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಅನೇಕ ಪ್ರಶ್ನೆಗಳು ಹಾಗೂ ಊಹಾಪೋಹಗಳು ಕೇಳಿಬರುತ್ತಿರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ. ದಯವಿಟ್ಟು ಈ ಹಾಡನ್ನು ನನ್ನ ವೈಯಕ್ತಿಕ ಜೀವನದೊಂದಿಗೆ ಹೋಲಿಸಿ ಅನಗತ್ಯ ಊಹಾಪೋಹಗಳು ಹಾಗೂ ನಕಾರಾತ್ಮಕತೆಯನ್ನು ಹರಡಬೇಡಿ ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ’ ಎಂದು ಚಂದನ್ ಶೆಟ್ಟಿ ಮನವಿ ಮಾಡಿದ್ದಾರೆ.
‘ಸಂಗೀತ ಎನ್ನುವುದು ಸೃಜನಶೀಲತೆಯ ಅಭಿವ್ಯಕ್ತಿ. ಪ್ರತಿಯೊಂದು ಹಾಡೂ ಕಲಾವಿದನ ವೈಯಕ್ತಿಕ ಜೀವನದ ಕಥೆಯಾಗಿರಬೇಕೆಂದಿಲ್ಲ. ಈ ಹಾಡಿಗೆ ನೀವು ತೋರಿಸುತ್ತಿರುವ ಅಪಾರ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಯೇ ನನಗೆ ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡಲು ಸ್ಫೂರ್ತಿ. ಎಲ್ಲರಿಗೂ ಪ್ರೀತಿ ಮತ್ತು ಗೌರವ’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ‘ಭೂತಕಾಲ ನನ್ನ ಬಿಡುತ್ತಿಲ್ಲ’; ಚಂದನ್ ಶೆಟ್ಟಿಗೆ ಕೌಂಟರ್ ಕೊಟ್ರಾ ನಿವೇದಿತಾ ಗೌಡ?
ಈ ಹಾಡು ಬಿಡುಗಡೆ ಆದ ಸಂದರ್ಭದಲ್ಲೇ ನಿವೇದಿತಾ ಗೌಡ ಅವರು ಒಂದು ಪೋಸ್ಟ್ ಮಾಡಿದರು. ‘ನಾನು ಎಲ್ಲೋ ಓದಿದ್ದೆ- ಮಹತ್ವಾಕಾಂಕ್ಷೆ ಇರುವ ಹುಡುಗಿ ಅದ್ಭುತ ಸ್ನೇಹಿತರನ್ನು ಹೊಂದಿರುವುದು ಮತ್ತು ದುರಾದೃಷ್ಟದ ಪ್ರೇಮ ಜೀವನವನ್ನು ಹೊಂದಿರುವುದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ತರಹ. ಆದರೆ ನನ್ನದು ಒಂದು ಹಾರರ್ ಕಥೆ ಆಗಿತ್ತು. ಭೂತಕಾಲ ನನ್ನನ್ನು ಬಿಟ್ಟು ಕದಲುತ್ತಿಲ್ಲ’ ಎಂದು ಬರೆದುಕೊಂಡಿದ್ದರು. ಆ ಕಾರಣದಿಂದಲೇ ಚರ್ಚೆ ಶುರುವಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.