‘ರಾಮ್ ಚರಣ್ ಹೊಸ ತಲೆಮಾರಿನ ಮೆಗಾಸ್ಟಾರ್’; ತಮ್ಮ ಬಿರುದನ್ನು ಮಗನಿಗೆ ಕೊಟ್ಟ ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ ಅವರು 'ಪೆದ್ದಿ' ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಮಗ ರಾಮ್ ಚರಣ್ ಅವರನ್ನು 'ಹೊಸ ತಲೆಮಾರಿನ ಮೆಗಾಸ್ಟಾರ್' ಎಂದು ಶ್ಲಾಘಿಸಿದರು. ‘ಪೆದ್ದಿ’ ಚಿತ್ರದಲ್ಲಿ ಚರಣ್ ಪಾತ್ರವಾಗಿ ಜೀವಿಸಿದ್ದಾನೆ ಎಂದ ಚಿರಂಜೀವಿ ಭಾವುಕರಾದರು. ಮಗನ ಯಶಸ್ಸಿಗೆ ತಂದೆಯಾಗಿ ತಮಗೆ ಅತೀವ ಸಂತಸವಿದೆ ಎಂದು ಚಿರಂಜೀವಿ ಹೇಳಿದ್ದು, ಅವರ ಮಾತುಗಳು ವೈರಲ್ ಆಗಿವೆ.

ಮೆಗಾಸ್ಟಾರ್ ಚಿರಂಜೀವಿ ಅವರು (Chiranjeevi) ಸದ್ಯ ನಿರ್ದೇಶಕ ಬಾಬಿ ಅವರ ಮುಂಬರುವ ಸಿನಿಮಾ ಶೂಟ್ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ, ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ‘ಪೆದ್ದಿ’ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿರುವ ತಮ್ಮ ಮಗ ರಾಮ್ ಚರಣ್ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಾಮ್ ಚರಣ್ ಹೊಸ ತಲೆಮಾರಿನ ಮೆಗಾಸ್ಟಾರ್ ಎಂದು ಶ್ಲಾಘಿಸಿದ್ದಾರೆ. ಈ ಮೊದಲು ಚಿರಂಜೀವಿ ಅವರನ್ನು ಮೆಗಾಸ್ಟಾರ್ ಎಂದು ಕರೆಯಲಾಗುತ್ತಿತ್ತು. ಈ ಪಟ್ಟವನ್ನು ಅವರು ಮಗನಿಗೆ ನೀಡಿದ್ದಾರೆ.
- ಮಗ ರಾಮ್ ಚರಣ್ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ತಂದೆ ಚಿರಂಜೀವಿ.
- ರಾಮ್ ಚರಣ್ ಹೊಸ ತಲೆಮಾರಿನ ಮೆಗಾಸ್ಟಾರ್ ಎಂದು ಒಪ್ಪಿದ ಚಿರಂಜೀವಿ.
- ಮಗನ ಸಾಧನೆ ಮತ್ತು ಯಶಸ್ಸು ಕಂಡು ಭಾವುಕರಾದ ಮೆಗಾಸ್ಟಾರ್ ಚಿರಂಜೀವಿ.
‘ಚರಣ್ ಈ ಸಿನಿಮಾದಲ್ಲಿ ಕೇವಲ ನಟಿಸಿಲ್ಲ, ಆ ಪಾತ್ರವಾಗಿ ಜೀವಿಸಿದ್ದಾನೆ. ಅದಕ್ಕಾಗಿಯೇ ಇನ್ನು ಮುಂದೆ ಅವನು ಬರೀ ‘ಚಿರಂಜೀವಿ’ಯ ಮಗ ಮಾತ್ರವಲ್ಲ, ಅವನೇ ಸ್ವತಃ ಚರಂಜೀವಿ (ಚರಣ್ ಜೀವಿ) ಆಗಿದ್ದಾನೆ. ಇದು ನನ್ನ ಮನದಾಳದಿಂದ ಬರುತ್ತಿರುವ ಮಾತುಗಳು’ ಎಂದು ಹೊಗಳಿದರು ಚಿರಂಜೀವಿ.
‘ನಿನ್ನೆ ತಾನೇ ದೆಹಲಿಯಲ್ಲಿ ನಡೆದ ರಿಪಬ್ಲಿಕ್ ಟಿವಿ ಕಾಂಕ್ಲೇವ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರಣ್ ಕೂಡ ಭಾಗವಹಿಸಿದ್ದನು. ಆ ಕಾರ್ಯಕ್ರಮದಲ್ಲಿ ಮೋದಿ ಅವರು ಚರಣ್‌ನನ್ನು ಹೊಸ ತಲೆಮಾರಿನ ಮೆಗಾಸ್ಟಾರ್ ಎಂದು ಕರೆದು ಗೌರವಿಸಿದರು’ ಎಂಬುದಾಗಿ ಚಿರಂಜೀವಿ ಹೇಳಿದ್ದಾರೆ.
‘ಇಂತಹ ದೊಡ್ಡ ಅವಕಾಶಗಳು ನನ್ನ ಕಾಲದಲ್ಲಿ ನನಗೆ ಸಿಕ್ಕಿರಲಿಲ್ಲ. ಆದರೆ ಚರಣ್‌ಗೆ ಈ ಅವಕಾಶ ಸಿಕ್ಕಿದೆ. ಅವನು ಅದನ್ನು ಅತ್ಯುತ್ತಮವಾಗಿ ಸಾಬೀತುಪಡಿಸಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾನೆ. ಆದ್ದರಿಂದ, ಚರಣ್‌ನನ್ನು ಮುಂದೆ ಬಿಟ್ಟು ನಾನು ಹಿಂದೆ ನಿಲ್ಲುವುದೇ ಸೂಕ್ತ ಮತ್ತು ಅದುವೇ ಸರಿ. ಮಕ್ಕಳು ಬೆಳೆದು ಮುಂದೆ ಹೋಗುತ್ತಿರುವಾಗ ಪೋಷಕರಿಗೆ ಸಿಗುವ ಆನಂದ ಅಷ್ಟಿಷ್ಟಲ್ಲ. ರಂಗಸ್ಥಲಂ ಸಿನಿಮಾದಿಂದ ಈ ಪೆದ್ದಿವರೆಗೆ ಒಬ್ಬ ತಂದೆಯಾಗಿ ನನಗೆ ನೂರಕ್ಕೆ ನೂರರಷ್ಟು ಖುಷಿ ಇದೆ’ ಎಂದು ಭಾವುಕರಾಗಿ ಮಾತನಾಡಿದರು.
ಇದನ್ನೂ ಓದಿ: ಸಮಂತಾ ತಾಯಿ ಆಗೋ ವಿಷಯವನ್ನು ಖಚಿತಪಡಿಸಿದ ಚಿರಂಜೀವಿ
ಚಿರಂಜೀವಿ ಅವರು ತಮ್ಮ ಮಗನ ಯಶಸ್ಸನ್ನು ಕಂಡು ವೇದಿಕೆಯ ಮೇಲೆ ಅತ್ಯಂತ ಭಾವುಕರಾಗಿ ಮತ್ತು ಹೆಮ್ಮೆಯಿಂದ ಮಾತನಾಡಿದ್ದಾರೆ. ಮಗನ ಸಾಧನೆಗೆ ತಂದೆಯಾಗಿ ಬೆನ್ನು ತಟ್ಟಿರುವ ಚಿರಂಜೀವಿ ಅವರ ಈ ವೀಡಿಯೋ ಮತ್ತು ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಿನಿ ವಲಯದಲ್ಲಿ ವೈರಲ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




