ಪ್ಯಾರಿಸ್ ಒಲಿಂಪಿಕ್ಸ್: ಭಾರತದ ಆಟಗಾರರಿಗೆ ಮನೆ ಊಟ ಹೊತ್ತೊಯ್ದ ಚಿರಂಜೀವಿ ಕುಟುಂಬ
ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಪ್ಯಾರಿಸ್ ಒಲಂಪಿಕ್ಸ್ಗೆ ಹೋಗಿದ್ದಾರೆ. ವಿಶೇಷವೆಂದರೆ ಒಲಂಪಿಕ್ಸ್ನಲ್ಲಿ ಭಾಗಿಯಾಗಿರುವ ದಕ್ಷಿಣ ಭಾರತದ ಕ್ರೀಡಾಪಟುಗಳಿಗೆ ಮನೆ ಊಟವನ್ನು ಇಲ್ಲಿಂದಲೇ ಹೊತ್ತುಕೊಂಡು ಹೋಗಿದ್ದಾರೆ! ಚಿರಂಜೀವಿ ಕುಟುಂಬದ ಈ ಕೆಲಸಕ್ಕೆ ನೆಟ್ಟಿಗರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಕುಟುಂಬ ಪ್ಯಾರಿಸ್ ಒಲಂಪಿಕ್ಸ್ ಉದ್ಗಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಮೆಗಾಸ್ಟಾರ್ ಪತ್ನಿ ಸುರೇಖಾ ಕೋನಿಡೆಲ, ರಾಮ್ ಚರಣ್ ತೇಜ ಮತ್ತು ಅವರ ಪತ್ನಿ ಉಪಾಸನಾ ಕೋನಿಡೆಲ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಂಧ್ರ-ತೆಲಂಗಾಣದ ಅಥ್ಲೀಟ್ಗಳ ಜೊತೆಗೆ ಭಾರತದ ಹಲವು ಅಥ್ಲೀಟ್ಗಳನ್ನು ಭೇಟಿಯಾದರು. ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖ ಒಲಿಂಪಿಕ್ಸ್ ಕ್ರೀಡಾ ಜ್ಯೋತಿ ಹಿಡಿದು ಸಂಭ್ರಮಿಸಿದರು. ಇದರ ಜೊತೆಗೆ ಮತ್ತೊಂದು ವಿಶೇಷವೆಂದರೆ ಚಿರಂಜೀವಿ ಮತ್ತು ಕುಟುಂಬ ಭಾರತದ ಆಟಗಾರರಿಗಾಗಿ ದೊಡ್ಡ ಬ್ಯಾಗಿನಲ್ಲಿ ‘ಮನೆ ಊಟ’ ಕೊಂಡೊಯ್ದಿದ್ದಾರೆ!
ಹೌದು, ದಕ್ಷಿಣ ಭಾರತದವರಿಗೆ ಉಪ್ಪಿನ ಕಾಯಿ, ರಸಂ, ಪುಲಿಯೋಗರೆ, ಉಪ್ಪಿಟ್ಟುಗಳು ಮನೆ ಊಟದಂತೆ. ಆದರೆ ಪ್ಯಾರಿಸ್ನಲ್ಲಿ ಇವೆಲ್ಲ ಸಿಗಬೇಕಲ್ಲ. ಹಾಗಾಗಿ ಚಿರಂಜೀವಿ ಮತ್ತು ಕುಟುಂಬದವರು ಇಲ್ಲಿಂದಲೇ ಉಪ್ಪಿನಕಾಯಿ, ಪುಳಿಯೋಗರೆ, ಉಪ್ಪಿಟ್ಟು, ರಸಂ ಮಿಕ್ಸ್ಗಳನ್ನು ದೊಡ್ಡ ಬ್ಯಾಗಿನಲ್ಲಿ ತುಂಬಿಕೊಂಡು ಪ್ಯಾರಿಸ್ಗೆ ಕೊಂಡೊಯ್ದಿದ್ದಾರೆ. ಅಲ್ಲಿನ ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಆಟಗಾರರಿಗೆ ಅವುಗಳನ್ನೆಲ್ಲ ಉಚಿತವಾಗಿ ನೀಡಿದ್ದಾರೆ. ಚಿರಂಜೀವಿ ಕುಟುಂಬದ ಈ ಸತ್ಕಾರ್ಯಕ್ಕೆ ಭರಪೂರ ಜನಬೆಂಬಲ ವ್ಯಕ್ತವಾಗಿದೆ.
ಇದನ್ನೂ ಓದಿ:ಪ್ಯಾರಿಸ್ ಒಲಿಂಪಿಕ್ಸ್: ಭಾರತದ ಆಟಗಾರರಿಗೆ ಮನೆ ಊಟ ಹೊತ್ತೊಯ್ದ ಚಿರಂಜೀವಿ ಕುಟುಂಬ
ಚಿರಂಜೀವಿ ದೊಡ್ಡ ಸ್ಟಾರ್ ನಟ, ಅವರ ಪುತ್ರ ರಾಮ್ ಚರಣ್ ತೇಜ ಸಹ ಪ್ಯಾನ್ ಇಂಡಿಯಾ ನಟ. ರಾಮ್ ಚರಣ್ ಪತ್ನಿ ಉಪಾಸನಾ ಜನಪ್ರಿಯ ಬ್ಯುಸಿನೆಸ್ ವುಮನ್. ಚಿರಂಜೀವಿ ಪತ್ನಿ ಸುರೇಖ ಸಹ ಈಗ ಬ್ಯುಸಿನೆಸ್ ವುಮನ್ ಎನಿಸಿಕೊಂಡಿದ್ದಾರೆ. ಸುರೇಖ ಅವರು ಬಹಳ ಚೆನ್ನಾಗಿ ಅಡುಗೆ ಮಾಡುವವರಾಗಿದ್ದು ಈಗ ತಮ್ಮದೇ ಬ್ರ್ಯಾಂಡ್ನ ಇನ್ಸ್ಟಂಟ್ ಆಹಾರದ ಬ್ರ್ಯಾಂಡ್ ಪ್ರಾರಂಭಿಸಿದ್ದಾರೆ. ಇದಕ್ಕೆ ಸೊಸೆ ಉಪಾಸನಾ ಬೆಂಬಲ ದೊರೆತಿದ್ದು, ‘ಅತ್ತಮಾಸ್ ಕಿಚನ್’ ಹೆಸರಿನ ಆರ್ಗಾನಿಕ್ ರೆಡಿಮೇಡ್ ಫುಡ್ ಮಾರಾಟ ಮಾಡುತ್ತಿದ್ದಾರೆ.
ಅತ್ತಾಮಾಸ್ ಕಿಚನ್ ಹೆಸರಿನ ಮೂಲಕ ಸುರೇಖ ಅವರೇ ತಯಾರಿಸಿರುವ ಉಪ್ಪಿನಕಾಯಿ, ರೆಡಿಮೇಡ್ ಪುಳಿಯೋಗರೆ, ರೆಡಿಮೇಡ್ ಉಪ್ಪಿಟ್ಟು, ರೆಡಿ ಮಿಕ್ಸ್ ರಸಂ, ಪೊಂಗಲ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಮಹಿಳೆಯರನ್ನು ಸೇರಿಸಿಕೊಂಡು ಸ್ವತಃ ಸುರೇಖ ಕೋನಿಡೆಲ ಅವರೇ ಅಡುಗೆಗಳನ್ನು ಮನೆಯಲ್ಲೇ ತಯಾರಿಸಿ ಪ್ಯಾಕಿಂಗ್ ಮಾಡಿ ಅದನ್ನು ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:32 pm, Mon, 29 July 24