ಚಿತ್ರಮಂದಿರಕ್ಕೆ ಜನರನ್ನು ಕರೆತರಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಪಿವಿಆರ್ (PVR) ಸಂಸ್ಥೆ ಒಂದು ಹೊಸ ಆಫರ್ ನೀಡಿದೆ. ಜನವರಿ 20ರಂದು ‘ಸಿನಿಮಾ ಲವರ್ಸ್ ಡೇ’ (Cinema Lovers Day) ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಅಂದು ಪಿವಿಆರ್ನಲ್ಲಿ ಪ್ರದರ್ಶನ ಆಗುವ ಎಲ್ಲ ಸಿನಿಮಾಗಳ ಟಿಕೆಟ್ ಬೆಲೆಯನ್ನು ಕೇವಲ 99 ರೂಪಾಯಿಗೆ ನಿಗದಿ ಮಾಡಲಾಗಿದೆ. ಈ ಆಫರ್ ಪಡೆಯಲು ಸಿನಿಮಾಸಕ್ತರು ಉತ್ಸುಕರಾಗಿದ್ದಾರೆ. ಪಿವಿಆರ್ ನೀಡುತ್ತಿರುವ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ (PVR Multiplex) ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳಿಗೆ ಇದರಿಂದ ಅನುಕೂಲ ಆಗಲಿದೆ.
ಕೇವಲ 99 ರೂಪಾಯಿಗೆ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡಬಹುದು ಎಂದರೆ ಇದು ಸೂಪರ್ ಆಫರ್. ಆದರೆ ಒಂದಷ್ಟು ಷರತ್ತುಗಳು ಕೂಡ ಇವೆ. ಈ ಆಫರ್ ಇರುವುದು ಜ.20ರಂದು ಮಾತ್ರ. ಚಂಡಿಗಡ, ಪಠಾಣ್ಕೋಟ್ ಮತ್ತು ಪಾಂಡಿಚರಿಯಲ್ಲಿ ಈ ಆಫರ್ ಅನ್ವಯ ಆಗುವುದಿಲ್ಲ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ 100 ರೂಪಾಯಿ ಟಿಕೆಟ್ ಬೆಲೆ ಜೊತೆಗೆ ಜಿಎಸ್ಟಿ ಕೂಡ ಇರಲಿದೆ. ತೆಲಂಗಾಣದಲ್ಲಿ 112 + ಜಿಎಸ್ಟಿ ಸೇರ್ಪಡೆ ಆಗಲಿದೆ. ನಾರ್ಮಲ್ ಸ್ಕ್ರೀನ್ಗಳಿಗೆ ಮಾತ್ರ ಈ ಆಫರ್ ಇರುತ್ತದೆ. 4ಡಿಎಕ್ಸ್, ಐಮ್ಯಾಕ್ಸ್ ಮುಂತಾದ ಸ್ಕ್ರೀನ್ಗಳಲ್ಲಿ ಎಂದಿನಂತೆ ದುಬಾರಿ ಟಿಕೆಟ್ ಬೆಲೆ ಇರಲಿದೆ ಎಂದು ಪಿವಿಆರ್ ತಿಳಿಸಿದೆ.
ಇದನ್ನೂ ಓದಿ: 75 ರೂ. ಟಿಕೆಟ್ ಆಫರ್: ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದ ಪ್ರೇಕ್ಷಕರು; ಬಹುತೇಕ ಶೋಗಳು ಸೋಲ್ಡ್ಔಟ್
ಕಳೆದ ವಾರ ಸಂಕ್ರಾಂತಿ ಪ್ರಯುಕ್ತ ಅನೇಕ ಸಿನಿಮಾಗಳು ಬಿಡುಗಡೆ ಆದವು. ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹ ರೆಡ್ಡಿ’, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಾಲ್ತೇರು ವೀರಯ್ಯ’, ದಳಪತಿ ವಿಜಯ್-ರಶ್ಮಿಕಾ ಮಂದಣ್ಣ ಜೋಡಿಯ ‘ವಾರಿಸು’, ಅಜಿತ್ ಕುಮಾರ್ ಅಭಿನಯದ ‘ತುನಿವು’ ಮುಂತಾದ ಚಿತ್ರಗಳು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಈ ಸಿನಿಮಾಗಳಿಗೆ ಜನವರಿ 20ರಂದು 99 ರೂಪಾಯಿ ಟಿಕೆಟ್ ಬೆಲೆಯ ಆಫರ್ನಿಂದ ಹೆಚ್ಚಿನ ಕಲೆಕ್ಷನ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ಟಿಕೆಟ್ ಬೆಲೆ 75 ರೂಪಾಯಿ ಮಾತ್ರ; ವಿಶೇಷ ದಿನಕ್ಕೆ ಇಲ್ಲಿದೆ ಮಸ್ತ್ ಆಫರ್
ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಒಟಿಟಿಗೆ ಹೆಚ್ಚು ಒಗ್ಗಿಕೊಳ್ಳುತ್ತಿದ್ದಾರೆ. ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಬಯಸುತ್ತಿದ್ದಾರೆ. ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ಬೆಲೆ ದುಬಾರಿ ಆಗಿರುವುದು ಕೂಡ ಇದಕ್ಕೆ ಮುಖ್ಯ ಕಾರಣ ಎಂಬ ಮಾತಿದೆ. ಟಿಕೆಟ್ ಬೆಲೆ ತಗ್ಗಿಸಿದರೆ ಪ್ರೇಕ್ಷಕರು ಖಂಡಿತವಾಗಿ ಚಿತ್ರಮಂದಿರಗಳಿಗೆ ಮರಳಿ ಬರುತ್ತಾರೆ ಎಂಬುದು ಇತ್ತೀಚೆಗೆ ಸಾಬೀತಾಗಿತ್ತು. ಅದೇ ಸೂತ್ರವನ್ನು ಪಿವಿಆರ್ ಮತ್ತೆ ಪ್ರಯೋಗಿಸುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:46 pm, Tue, 17 January 23